ಸರಕಾರಕ್ಕೆ ಪಂಚಮಸಾಲಿಗರ ಸವಾಲು; ಓಬಿಸಿ ಮೀಸಲಾತಿಯಲಿ ಬೇಕಂತೆ ಪಾಲು

Most read

ಈಗಿರುವ ಜಾತಿಗ್ರಸ್ತ ಸಮಾಜದಲ್ಲಿ ಎಲ್ಲಾ ಸಮುದಾಯಗಳನ್ನು ಸರಿದೂಗಿಸಲೇ ಬೇಕೆಂದರೆ ಜಾತಿ ಗಣತಿಯನ್ನು ಕೇಂದ್ರ ಸರಕಾರ ಆದಷ್ಟು ಬೇಗ ದೇಶಾದ್ಯಂತ ಮಾಡಿ ಯಾವ ಜಾತಿ, ಧರ್ಮ, ಮತ, ಪಂಗಡಗಳ ಜನಸಂಖ್ಯೆ ಎಷ್ಟಿದೆ ಎಂದು ಕಂಡು ಹಿಡಿಯಬೇಕು. ತದನಂತರ ಜಾತಿಗಣತಿಯ ಆಧಾರದಲ್ಲಿ ಆಯಾ ಜಾತಿ ಧರ್ಮಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ವೈಜ್ಞಾನಿಕವಾಗಿ ನಿಗದಿ ಪಡಿಸಬೇಕು. ಆಗ ಮಾತ್ರ ಮೀಸಲಾತಿಯ ಪಾಲಿಗಾಗಿ ಸಂಘರ್ಷ ನಿಲ್ಲಲು ಸಾಧ್ಯ ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.

ಮತ್ತೆ ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟ ಮತ್ತೊಂದು ಹಂತ ತಲುಪಿದೆ. ‘ಇಷ್ಟು ದಿನ ನಡೆದದ್ದು ಶಾಂತಿಯುತ ಹೋರಾಟ ಇನ್ನು ಮುಂದೆ ಕ್ರಾಂತಿಯಾಗುತ್ತದೆ’ ಎಂದು ಪಂಚಮಸಾಲಿ ಮೀಸಲಾತಿ ಹೋರಾಟದ ಮುಂಚೂಣಿಯಲ್ಲಿರುವ ಕೂಡಲಸಂಗಮ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮಿಗಳು ಹೇಳಿದ್ದಾರೆ. 

ಸ್ವಾಮಿಗಳ ಪ್ರಚೋದನೆಗೆ ಒಳಗಾದ 20 ಸಾವಿರದಷ್ಟು ಪಂಚಮಸಾಲಿ ಭಕ್ತಗಣ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಡಿಸೆಂಬರ್ 10 ರಂದು ಕೋಲಾಹಲವನ್ನೇ ಸೃಷ್ಟಿಸಿದ್ದಾರೆ. 

ಐದು ಸಾವಿರ ಟ್ರ್ಯಾಕ್ಟರ್ ಮೂಲಕ ಸುವರ್ಣಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಯೋಜನೆ ರೂಪಿಸಲಾಗಿತ್ತು. ಅನುಮತಿ ಸಿಗಲಿಲ್ಲ. ಸುವರ್ಣ ಸೌಧಕ್ಕೆ ಭಕ್ತಗಣದೊಂದಿಗೆ ಮುತ್ತಿಗೆ ಹಾಕುವ ಯೋಜನೆ ಕೈಗೂಡಲಿಲ್ಲ. ಎದುರಿನ ಕೊಂಡಸಕೊಪ್ಪ ಬೆಟ್ಟದ ಮೇಲೆ ಪ್ರತಿಭಟನಾ ಸಮಾವೇಶ ಹಮ್ಮಿಕೊಳ್ಳಲಾಯ್ತು. ಸರಕಾರ ಪೊಲೀಸ್ ಭದ್ರಕೋಟೆಯನ್ನು ಆಯೋಜಿಸಿ ಮುಂದಾಗುವ ಅನಾಹುತಗಳ ನಿಯಂತ್ರಣಕ್ಕೆ ತಯಾರಾಗಿತ್ತು. ಮುಖ್ಯಮಂತ್ರಿಗಳೇ ಬಂದು ಮನವಿ ಸ್ವೀಕರಿಸಬೇಕೆಂಬುದು ಸ್ವಾಮಿಗಳ ಹಠವಾಗಿತ್ತು. ಅಧಿವೇಶನದಲ್ಲಿ ವ್ಯಸ್ತರಾಗಿದ್ದ ಸಿಎಂ ಮಾತುಕತೆಗೆ ಮೂವರು ಸಚಿವರನ್ನು ಕಳುಹಿಸಿದರು. ಸ್ವಾಮಿಗೋಳು ಸಿಟ್ಟಿಗೆದ್ದರು. “ನಡೆಯಿರಿ ಸಂಘರ್ಷಯಾತ್ರೆ ಮಾಡೋಣ” ಎಂದು ಜಾತಿಗಣಕ್ಕೆ ಪ್ರಚೋದಿಸಿದರು. ಭಕ್ತಗಣ ಸುವರ್ಣಸೌಧದತ್ತ ಜೈಕಾರ ಹಾಕುತ್ತಾ ಮುನ್ನುಗ್ಗಿತು.

ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜು ಸ್ವಾಮಿ

ಕಾನೂನನ್ನು ಕಾಪಾಡಬೇಕಾದ ಜಾತಿಗ್ರಸ್ತ ವಕೀಲರುಗಳು ಬ್ಯಾರಿಕೇಡ್ ಕಿತ್ತೆಸೆದರು. ಪೊಲೀಸ್ ವಾಹನಗಳನ್ನು ಪಕ್ಕಕ್ಕೆ ತಳ್ಳಿ ಪೊಲೀಸರ ಮೇಲೆ ಹರಿಹಾಯ್ದರು. ಬೇರೆ ದಾರಿ ಕಾಣದೆ ಪೊಲೀಸರು ಒಂದು ಸುತ್ತು ಲಘು ಲಾಠಿ ಪ್ರಹಾರ ಮಾಡಿದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಸ್ವಾಮಿಗೋಳು ಬೆಂಕಿ ಕೆಂಡವಾದರು. ತಾವೇ ಕೋಮುವಾದಿಗಳಾದ ಯತ್ನಾಳು, ಬೆಲ್ಲದವರ ಜೊತೆ ಅಖಾಡಕ್ಕಿಳಿದರು. ಹೆದ್ದಾರಿಗೆ ನುಗ್ಗಿ ಪೊಲೀಸ್ ವಾಹನ ಅಡ್ಡಗಟ್ಟಿದರು. ಗುರುಗಳನ್ನು ಅನುಕರಿಸಿದ  ಹಿಂಬಾಲಕರು ಕಾನೂನನ್ನು ಕೈಗೆ ತೆಗೆದುಕೊಂಡರು. ಪೊಲೀಸರ ಮೇಲೆ ಕಲ್ಲು ಚಪ್ಪಲಿ ಎಸೆದರು. 14 ಕ್ಕೂ ಹೆಚ್ಚು ಪೊಲೀಸರು ಗಾಯಗೊಂಡರು. ಪೊಲೀಸರ ತಾಳ್ಮೆ ಮಿತಿಮೀರಿತು. ಲಾಠಿಗಳಿಗೆ ಜೀವ ಬಂದಿತು. ಸಿಕ್ಕಸಿಕ್ಕವರ ದೇಹಗಳಲ್ಲಿ ಬಾಸುಂಡೆಗಳೆದ್ದವು. ಹತ್ತು ಜನ ಪಂಚಮಸಾಲಿಗಳು ಗಾಯಗೊಂಡರು. ಹಿರಿಯ ಪೊಲೀಸ್ ಅಧಿಕಾರಿಗಳು ಬಂದರು. ಪರಿಸ್ಥಿತಿ ಕೈಮೀರುವ ಮುನ್ನ ಧರಣಿ ಕೈಬಿಡಲು ಮನವಿ ಮಾಡಿಕೊಂಡರು. ಸ್ವಾಮಿಗಳು ಒಪ್ಪಲಿಲ್ಲ, ಪೊಲೀಸರು ಬಿಡಲಿಲ್ಲ. ಬಂಧಿಸಿ ಪೊಲೀಸ್ ವಾಹನಕ್ಕೆ ಬಲವಂತವಾಗಿ ತುಂಬಿ ಕರೆದೊಯ್ದರು. 

‘ಗುರುಗಳ ಮೇಲೆ ಲಾಠಿ ಬೀಸಿದ್ದಾರೆ’ ವದಂತಿ ಹರಡಿ ಭಕ್ತಗಳ ಆಕ್ರೋಶ ಹೆಚ್ಚಿತು. ಪೊಲೀಸರ ಲಾಠಿಗಳಿಗೂ ಬಿಡುವಿಲ್ಲದಾಯ್ತು. ಹೆದರಿದ ಜಾತಿ ಯೋಧರು ಚಲ್ಲಾಪಿಲ್ಲಿಯಾಗಿ ಓಡಿಹೋದರು.

ಅಷ್ಟರಲ್ಲಿ ರಾಷ್ಟ್ರೀಯ ಹೆದ್ದಾರಿ ಎರಡು ಗಂಟೆಗಳ ಕಾಲಬಂದಾಗಿತ್ತು. 30 ಕಿಮೀ ನಷ್ಟು ಉದ್ದದ ಸಾಲಲ್ಲಿ ವಾಹನಗಳು ನಿಂತು ಟ್ರಾಫಿಕ್ ಜಾಮ್ ಆಗಿತ್ತು. ಆದರೆ ಜಾತಿ ಮೀಸಲಾತಿಯ ಮತ್ತಿನಲ್ಲಿರುವವರಿಗೆ ಟ್ರಾಫಿಕ್‌ ನಲ್ಲಿ ಸಿಕ್ಕು ಬೇಸತ್ತವರ ಸಂಕಷ್ಟ ಅರಿಯದೇ ಹೋಯ್ತು. ಸುದ್ದಿ ಮಾಧ್ಯಮಗಳ ಹೊಟ್ಟೆಗೆ ಜಬರ್ದಸ್ತ್ ಆಹಾರವೂ ದೊರಕಿದಂತಾಯ್ತು.

ಮೀಸಲಾತಿ ಬೇಡಿಕೆ ಇರಿಸಿ ಧರಣಿ

ಮಠ ಪೀಠಗಳ ಸ್ವಾಮಿಗಳು ಎಂದರೆ ಜಪ ತಪ ಧ್ಯಾನಾಸಕ್ತರು ಹಾಗೂ ಸರ್ವ ಜನರ ಒಳಿತನ್ನು ಬಯಸುವವರು ಎಂದು ನಂಬಲಾಗಿತ್ತು. ಆದರೆ ಈಗ ಜಾತಿಗ್ರಸ್ತ ಸ್ವಾಮಿಗಳು ಗುರುಮಠಗಳನ್ನು ಜಾತಿ ಸೂತಕದ ಮನೆಗಳನ್ನಾಗಿಸಿದ್ದು ಮನುಕುಲದ ದುರಂತ. ಯಾವ ಬಸವಣ್ಣನವರು ಅನೇಕ ಜಾತಿಗಳನ್ನು ಸೇರಿಸಿ ಲಿಂಗಾಯತ ಧರ್ಮವನ್ನು ಸ್ಥಾಪಿಸಿ ಜಾತಿರಹಿತ ಸಮಾಜಕ್ಕಾಗಿ ಶ್ರಮಿಸಿದರೋ, ಅಂತಹ ಬಸವಣ್ಣನವರ ಹೆಸರು ಜಪಿಸುತ್ತಾ, ಲಿಂಗಾಯತರೆಂದು ಹೇಳಿಕೊಳ್ಳುತ್ತಾ ಇರುವ ಸ್ವಾಮಿಗೋಳು ಮತ್ತು ಅವರ ಹಿಂಬಾಲಕರುಗಳು ಈಗ ಜಾತಿ ಜಾತಿ ಎಂದು ಕನವರಿಸುತ್ತಿದ್ದಾರೆ. ತಮ್ಮ ಜಾತಿ ಜನಾಂಗಕ್ಕೆ ಹೆಚ್ಚು ಮೀಸಲು ದೊರೆಯಬೇಕು. ಅದಕ್ಕಾಗಿ ಯಾವುದೇ ಹೋರಾಟಕ್ಕೂ ಸಿದ್ಧ. ಕಾನೂನು ಮುರಿಯಲೂ ಬದ್ಧ ಎಂದು ತಮ್ಮ ನಡೆ ನುಡಿಗಳಲ್ಲಿ ಸ್ವಾಮಿಗಳು ತೋರಿಸುತ್ತಿದ್ದಾರೆ. ತಮ್ಮ ಜಾತಿಯ ಮುಂದೆ ಬೇರೇನೂ ಕಾಣುತ್ತಿಲ್ಲ ಹಾಗೂ ಜಾತಿಯ ಅಸ್ಮಿತೆಯಲ್ಲಿಯೇ ತಮ್ಮ ಅಸ್ತಿತ್ವವನ್ನು ಸ್ವಾಮಿಗಳು ಗಟ್ಟಿಗೊಳಿಸುತ್ತಿದ್ದಾರೆ. ಅದಕ್ಕಾಗಿ ಕೋಮುವಾದಿ ಪಕ್ಷದ ಮತಾಂಧ ರಾಜಕಾರಣಿಗಳ ಜೊತೆ ಸೇರಿ ತಮ್ಮದೇ ಸಮುದಾಯದವರನ್ನು ಎತ್ತಿಕಟ್ಟಿ ಪ್ರಚೋದಿಸುತ್ತಿದ್ದಾರೆ. ಸ್ವಾಮಿಗೋಳು ಮತ್ತು ನಾಯಕರುಗಳು ಯಾವಾಗಲೂ ಸುರಕ್ಷಿತವಾಗಿದ್ದರೆ ಅವರ ಜಾತಿ ವ್ಯಸನದ ಹಿಂಬಾಲಕರು ಬೀದಿಯಲ್ಲಿ ಪೊಲೀಸರೊಂದಿಗೆ ಕದನಕ್ಕಿಳಿದು ನೆತ್ತರು ಹರಿಸುತ್ತಿದ್ದಾರೆ.

ಮುಖ್ಯಮಂತ್ರಿಗಳಿಗೆ ಮನವಿ

“ಲಾಠಿ ಚಾರ್ಜ್ ಮಾಡಿದ್ದು ದೌರ್ಜನ್ಯದ ಪರಮಾವಧಿ, ಸಂವಿಧಾನಕ್ಕೆ ಮಾಡಿದ ಅಪಮಾನ, ಮುಖ್ಯ ಮಂತ್ರಿಗಳು ಕ್ಷಮೆ ಕೇಳಬೇಕು” ಎಂದು ಮೃತ್ಯುಂಜಯ ಸ್ವಾಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿ ಬ್ಯಾರಿಕೇಡ್ ಕಿತ್ತೆಸೆದಿದ್ದು, ಪೊಲೀಸರ ವಾಹನ ತಳ್ಳಿಹಾಕಿದ್ದು, ಕಾನೂನು ರಕ್ಷಣೆಗೆ ನಿಂತ ಪೊಲೀಸರ ಮೇಲೆ ಕಲ್ಲು ಚಪ್ಪಲಿ ಎಸೆದಿದ್ದು, ಕಾನೂನನ್ನು ಉಲ್ಲಂಘಿಸಿ ಹೆದ್ದಾರಿ ಬಂದ್ ಮಾಡಿ ಸಾವಿರಾರು ಜನರಿಗೆ ತೊಂದರೆ ಕೊಟ್ಟಿದ್ದು ದೌರ್ಜನ್ಯದ ಪರಮಾವಧಿ ಅಲ್ಲವೇ? ಸರಕಾರದ ವಿರುದ್ಧ ಒಂದು ಸಮುದಾಯದ ಜನರನ್ನು ಎತ್ತಿಕಟ್ಟಿ ಆಕ್ರಮಣಕ್ಕೆ ಪ್ರಚೋದಿಸಿದ್ದು, ವ್ಯವಸ್ಥೆಯ ವಿರುದ್ಧ ಕ್ರಾಂತಿ ಮಾಡುವಂತೆ ಹೇಳಿಕೆ ಕೊಟ್ಟಿದ್ದು ಸಂವಿಧಾನಕ್ಕೆ ಮಾಡಿದ ಅಪಮಾನ ಅಲ್ಲವೇ? ಕಾನೂನು ಉಲ್ಲಂಘಿಸಿದ್ದಕ್ಕೆ, ಸ್ವಜಾತಿ ಕಾರ್ಯಕರ್ತರನ್ನು ಪ್ರಚೋದಿಸಿ ಪೊಲೀಸರ ಲಾಠಿ ಏಟಿಗೆ ಬಲಿಯಾಗಿಸಿದ್ದಕ್ಕೆ, ಟ್ರಾಫಿಕ್ ಜಾಮ್ ಮಾಡಿ ಜನರಿಗೆ ತೊಂದರೆ ಕೊಟ್ಟಿದ್ದಕ್ಕೆ ಸ್ವಾಮಿಗೋಳು ಮೊದಲು ಕ್ಷಮೆಯಾಚಿಸಬೇಕಿದೆ. ಬಸವಣ್ಣನ ಅನುಯಾಯಿಗಳು ಎಂದು ಹೇಳುತ್ತಾ ಹಿಂಸೆಗೆ ಪ್ರಚೋದಿಸಿದ್ದಕ್ಕೆ ಕ್ಷಮೆ ಕೇಳಬೇಕಿದೆ. ಮತಾಂಧ ನಾಯಕರ ಜೊತೆ ಸೇರಿ ಸರಕಾರದ ವಿರುದ್ಧ ಬಂಡೆದ್ದು, ದಂಡು ಕಟ್ಟಿಕೊಂಡು ಬಂದು ದಾಳಿ ಮಾಡಿಸಿದ್ದಕ್ಕೆ ಜಾತಿ ವ್ಯಸನ ಪೀಡಿತ ಸ್ವಾಮಿಗಳು ಕ್ಷಮೆ ಕೇಳಲೇಬೇಕಿದೆ. 

ಸರಕಾರದ ಮುಂದೆ ಬೇಡಿಕೆ ಇಡಬೇಕು, ಹಾಗೂ ಅದು ಸರಕಾರದಿಂದ ಈಡೇರುವಂತಿರಬೇಕು. ಒಂದು ಸಮುದಾಯದ ಬೇಡಿಕೆ ಅನ್ಯ ಸಮುದಾಯಕ್ಕೆ ಅನ್ಯಾಯ ಮಾಡುವಂತಿರಬಾರದು. ಆದರೆ ಈ ಪಂಚಮಸಾಲಿ ಮೀಸಲು ಹೋರಾಟದ ಉದ್ದೇಶ ಈ ಸಮುದಾಯವನ್ನು ಮೀಸಲಾತಿಯ 2 ಎ ಕೆಟಗರಿಗೆ ಸೇರಿಸಬೇಕು ಎನ್ನುವುದಾಗಿದೆ. ಹಾಗಾದರೆ ಈ 2ಎ ಅಂದರೇನು ಎಂದು ತಿಳಿಯಬೇಕಾದರೆ ಕರ್ನಾಟಕದ ಮೀಸಲಾತಿ ಹಂಚಿಕೆ ಕುರಿತು ಮೊದಲು ತಿಳಿದುಕೊಳ್ಳಬೇಕಿದೆ.

ಶೇಕಡಾ 50 ಕ್ಕಿಂತಾ ಹೆಚ್ಚು ಮೀಸಲಾತಿ ಕೊಡುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.‌ ಹೀಗಾಗಿ ಎಲ್ಲಾ ಜಾತಿ ಜನಾಂಗಕ್ಕೆ 50% ಮೀಸಲಾತಿಯನ್ನು ಹಂಚಲಾಗಿದೆ. 

ಎಸ್ ಸಿ: ಪರಿಶಿಷ್ಟ ಜಾತಿಗಳು ಅಂದರೆ ಹೊಲೆಯ, ಮಾದಿಗ, ಬೋವಿ, ಲಂಬಾಣಿ, ಸಮಗಾರ, ಕೊರಚ, ಕೊರಮ ಸೇರಿದಂತೆ 101 ಜಾತಿಗಳಿಗೆ 15% ಮೀಸಲಾತಿ ನಿಗದಿ ಪಡಿಸಲಾಗಿದೆ.

ಎಸ್ ಟಿ: ನಾಯಕ, ವಾಲ್ಮೀಕಿ, ಆದಿವಾಸಿಗಳು ಸೇರಿದಂತೆ 54 ಪರಿಶಿಷ್ಟ ಪಂಗಡದವರಿಗೆ 3% ಮೀಸಲಾತಿ ನೀಡಲಾಗಿದೆ. 

ಪ್ರವರ್ಗ 1: ಉಪ್ಪಾರರು, ಗೊಲ್ಲರು, ಪಿಂಜಾರರು ಸೇರಿದಂತೆ 95 ಜಾತಿಯ ಸಮುದಾಯಗಳಿಗೆ ಪ್ರವರ್ಗ 1 ರ ಅಡಿಯಲ್ಲಿ 4% ಮೀಸಲಾತಿ ಕೊಡಲಾಗಿದೆ.

ಪ್ರವರ್ಗ 2ಎ: ಕುರುಬ, ಈಡಿಗ, ವಿಶ್ವಕರ್ಮ, ನಾಮಧಾರಿ, ದೇವಾಡಿಗ, ಮಡಿವಾಳ, ಕುಂಬಾರ, ದೇವಾಂಗ, ತಿಗಳ, ಕ್ಷೌರಿಕ, ಬಿಲ್ಲವ, ಪೂಜಾರಿ, ದೀವರ, ಕಂಚುಕಾರ ಸೇರಿದಂತೆ 102 ಹಿಂದುಳಿದ ಜಾತಿಗಳನ್ನು ಪ್ರವರ್ಗ 2ಎ ನಲ್ಲಿ ಸೇರಿಸಿ 15% ಮೀಸಲಾತಿ ನಿಗದಿ ಪಡಿಸಲಾಗಿದೆ.

ಪ್ರವರ್ಗ 2ಬಿ : ಮುಸ್ಲಿಂ ಸಮುದಾಯ ಹಾಗೂ ಉಪಜಾತಿಗಳನ್ನೆಲ್ಲ ಪ್ರವರ್ಗ 2 ಬಿ ಯಲ್ಲಿ ಸೇರಿಸಿ 4% ಮೀಸಲಾತಿ ಕೊಡಮಾಡಲಾಗಿದೆ.

ಪ್ರವರ್ಗ 3ಎ: ಒಕ್ಕಲಿಗ, ರೆಡ್ಡಿ, ಬಂಟ, ಬಲಿಜ, ಕೊಡವ ಸೇರಿದಂತೆ 12 ಜಾತಿಯವರನ್ನು ಪ್ರವರ್ಗ 3ಎ ನಲ್ಲಿ ಸೇರಿಸಿ 5% ಮೀಸಲಾತಿ ಕೊಡಲಾಗಿದೆ.

ಪ್ರವರ್ಗ 3ಬಿ : ವೀರಶೈವ, ಲಿಂಗಾಯತ, ಪಂಚಮಸಾಲಿ ಹಾಗೂ ಉಪಜಾತಿಗಳನ್ನೆಲ್ಲಾ ಪ್ರವರ್ಗ 3 ಬಿ ಯಲ್ಲಿ ಸೇರಿಸಿ 5% ಮೀಸಲಾತಿಯನ್ನು ನಿಗದಿ ಪಡಿಸಲಾಗಿದೆ. ಇದೆಲ್ಲವೂ ಸೇರಿ 50% ಆಗುತ್ತದೆ. ಇದಕ್ಕಿಂತ ಹೆಚ್ಚು ಮೀಸಲಾತಿ ಕೊಡಲು ಸುಪ್ರೀಂ ಆದೇಶದ ಪ್ರಕಾರ ಸರಕಾರಗಳಿಗೆ ಸಾಧ್ಯವಿಲ್ಲ. ಕೊಟ್ಟರೂ ಅದಕ್ಕೆ ಸಾಂವಿಧಾನಿಕ ಮಾನ್ಯತೆ ಇಲ್ಲ. 

ಈಗ ಪಂಚಮಸಾಲಿಗಳ ಕಣ್ಣು ಹಿಂದುಳಿದ ಜಾತಿಗಳಿಗೆ ಕೊಟ್ಟ 15% ಮೀಸಲಾತಿಯ ಮೇಲಿದೆ. ನಮ್ಮನ್ನೂ ಪ್ರವರ್ಗ 2ಎ ಗೆ ಸೇರಿಸಿ ಎಂಬುದೇ ಮೃತ್ಯುಂಜಯ ಸ್ವಾಮಿಗಳ ನೇತೃತ್ವದ ಹೋರಾಟದ ಒನ್ ಪಾಯಿಂಟ್ ಅಜೆಂಡಾ ಆಗಿದೆ. ಇವರು ತಮ್ಮ ಜಾತಿಯವರಿಗೆ ಹೆಚ್ಚುವರಿ ಮೀಸಲಾತಿ ಕೇಳಬಹುದಾಗಿತ್ತು. ಆದರೆ ಅವರು ಹಿಂದುಳಿದ ಜಾತಿಗಳ ಮೀಸಲಾತಿಯಲ್ಲಿ ಪಾಲು ಕೇಳುತ್ತಿದ್ದಾರೆ. ಪಂಚಮಸಾಲಿಗಳ ಬೇಡಿಕೆಯನ್ನು ಸರಕಾರ ಈಡೇರಿಸಿದರೆ 2ಎ ವರ್ಗದ ಹಿಂದುಳಿದ ಜಾತಿಯವರಿಗೆ ಅನ್ಯಾಯವಾಗುತ್ತದೆ. ಶಿಕ್ಷಣ ಮತ್ತು ಉದ್ಯೋಗದ ಮೀಸಲಾತಿಯಲ್ಲಿ ಆ ಸಮುದಾಯಗಳ ಪಾಲನ್ನು ಹಂಚಿಕೊಳ್ಳಬೇಕೆಂಬುದು ಪಂಚಮಸಾಲಿ ಹೋರಾಟಗಾರರ ಉದ್ದೇಶ. ಯಾಕೆಂದರೆ 2 ಎ ನಲ್ಲಿ 15% ಮೀಸಲಾತಿ ಇದೆ. ಹೆಚ್ಚು ಪಾಲನ್ನು ಪಡೆಯಬಹುದು ಎಂಬುದು ಪಂಚಮಸಾಲಿಗಳ ಲೆಕ್ಕಾಚಾರ. ಇದನ್ನು ವಿರೋಧಿಸಿದ ಹಿಂದುಳಿದ ಜಾತಿಯ ಮುಖಂಡರುಗಳು “ಪಂಚಮಸಾಲಿಯವರನ್ನು ತಮಗೆ ಮೀಸಲಾದ 2ಎ ಪ್ರವರ್ಗಕ್ಕೆ ಸೇರಿಸಿದರೆ ಸರಕಾರದ ವಿರುದ್ಧ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡಲಾಗುವುದು” ಎಂದು ಎಚ್ಚರಿಸಿದ್ದಾರೆ. 

ಪೊಲೀಸ್ ಕೋಟೆ

ಹಿಂದುಳಿದ ಜಾತಿಗಳ (ಒಬಿಸಿ) ಸಮುದಾಯದವರು ತಮಗೆ ಮೀಸಲಾದ ಮೀಸಲಾತಿಯನ್ನು ಉಳಿಸಿಕೊಳ್ಳಲು ಹೋರಾಟ ಮಾಡುತ್ತೇವೆಂದರೆ, ಪಂಚಮಸಾಲಿಗಳು ಓಬಿಸಿ ಗಳ ಪಾಲಿನ ಮೀಸಲಾತಿಯಲ್ಲಿ ಪಾಲನ್ನು ಪಡೆಯಲು ಹೋರಾಡುತ್ತಿದ್ದಾರೆ. ಹೀಗಾಗಿ ಆಳುವ ಸರಕಾರ ಅಡಕತ್ತರಿಯಲ್ಲಿ ಸಿಕ್ಕಿಹಾಕಿಕೊಂಡಿದೆ. 

ಈ ಹಿಂದೆ ಇದ್ದ ಬಿಜೆಪಿ ಸರಕಾರದ ಮೇಲೆಯೂ ಪಂಚಮಸಾಲಿ ಸ್ವಾಮಿಗಳ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ಪಾದಯಾತ್ರೆಗಳನ್ನು ಹಮ್ಮಿಕೊಳ್ಳಲಾಗಿತ್ತು. ಚುನಾವಣೆಯಲ್ಲಿ ಎಲ್ಲಿ ಲಿಂಗಾಯತ ಮತಗಳು ತಮ್ಮ ಕೈತಪ್ಪಿ ಹೋಗುತ್ತವೆಯೋ ಎಂಬ ಆತಂಕದಿಂದ ಬೊಮ್ಮಾಯಿಯವರ ಸರಕಾರ ಬೀಸುವ ದೊಣ್ಣೆ ತಪ್ಪಿಸಿಕೊಳ್ಳಲು ಮುಸ್ಲಿಮರ 4% ಮೀಸಲಾತಿಯನ್ನು ರದ್ದುಗೊಳಿಸಿ, ಪ್ರವರ್ಗ 3ಡಿ ಸೃಷ್ಟಿಸಿ 2% ಮೀಸಲಾತಿಯನ್ನು ಪಂಚಮಸಾಲಿಗಳಿಗೆ ಮೀಸಲಾಗಿರಿಸಿ ಪಂಚಮಸಾಲಿಗಳ ಮೂಗಿಗೆ ತುಪ್ಪ ಹಚ್ಚಿತ್ತು. ಮೊದಮೊದಲು ಬೊಮ್ಮಾಯಿ ಸರಕಾರದ ಈ ಕ್ರಮವನ್ನು ಹೊಗಳಿ ತಮ್ಮ ಹೋರಾಟಕ್ಕೆ ಸಿಕ್ಕ ಜಯ ಎಂದು ಸಂತಸಪಟ್ಟ ಸ್ವಾಮಿಗಳಿಗೆ ಅಸಲಿಯತ್ತು ಗೊತ್ತಾಗಿ ಪೆಚ್ಚಾಗಿ 2ಎ ಪಾಲು ಬೇಕೆಂದು ಆಗ್ರಹಿಸ ತೊಡಗಿದರು. ಯಾಕೆಂದರೆ ತಮ್ಮ ಮೀಸಲಾತಿಯನ್ನು ಕಿತ್ತುಕೊಂಡ ಬೊಮ್ಮಾಯಿ ಸರಕಾರದ ವಿರುದ್ಧ ಮುಸ್ಲಿಂ ಸಮುದಾಯದವರು ಸುಪ್ರೀಂ ಕೋರ್ಟ್ ಮೆಟ್ಟಲೇರಿದರು. ಕೋರ್ಟಿನ ತೀರ್ಮಾನಕ್ಕೆ ಹೆದರಿದ ಬೊಮ್ಮಾಯಿ ನೇತೃತ್ವದ ಸರಕಾರ “ಮುಸ್ಲಿಂ ಮೀಸಲಾತಿ ರದ್ದು ಮಾಡುವುದಿಲ್ಲ ಹಾಗೂ ಯಥಾಸ್ಥಿತಿಯನ್ನು ಕಾಪಾಡಲಾಗುವುದು” ಎಂದು ಪ್ರಮಾಣ ಪತ್ರ ಸಲ್ಲಿಸಿತ್ತು. ಹೀಗಾಗಿ ಪಂಚಮಸಾಲಿಗಳ 2ಎ ಹೋರಾಟವನ್ನು ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರದ ಆಡಳಿತದಲ್ಲಿ ಮುಂದುವರೆಸಲಾಯ್ತು. ಸುವರ್ಣ ಸೌಧಕ್ಕೆ ಮುತ್ತಿಗೆ ಹಾಕಲು ಹೋಗಿ ಕೋಲಾಹಲ ಸೃಷ್ಟಿಸಿತು. 

ಪಂಚಮಸಾಲಿ ಒಂದೇ ಅಲ್ಲ, ಮೀಸಲಾತಿ ಬದಲಾವಣೆಗಾಗಿ ಇತರೆ ಸಮುದಾಯಗಳವರೂ ಒತ್ತಾಯಿಸುತ್ತಲೇ ಇದ್ದಾರೆ. ಉಪ್ಪಾರ, ಕುರುಬ, ಈಡಿಗ ಸಮುದಾಯದವರು 2ಎ ಬದಲಾಗಿ ಪರಿಶಿಷ್ಟ ಪಂಗಡದ ಮೀಸಲಾತಿಗೆ ಸೇರಿಸಲು ಹಕ್ಕೊತ್ತಾಯ ಮಾಡುತ್ತಿದ್ದಾರೆ. 4% ಮೀಸಲಾತಿ ಇರುವ ಒಕ್ಕಲಿಗ ಸಮುದಾಯದವರು 12% ಮೀಸಲಾತಿ ಹೆಚ್ಚಿಸಬೇಕೆಂದು ಆಗ್ರಹಿಸುತ್ತಿದ್ದಾರೆ‌. ಪರಿಶಿಷ್ಟ ಜಾತಿ ಹಾಗೂ ಪಂಗಡದವರು ತಮ್ಮ ಜನಸಂಖ್ಯೆ ಜಾಸ್ತಿ ಇದೆಯಾದ್ದರಿಂದ ನಮ್ಮ ಮೀಸಲಾತಿ ಹೆಚ್ಚಿಸಬೇಕೆಂದು ಒತ್ತಾಯಿಸುತ್ತಲೇ ಇದ್ದಾರೆ. ಪರಿಶಿಷ್ಟ ಜಾತಿಯ ಮೀಸಲಾತಿಯನ್ನು 15% ನಿಂದ 17% ಗೂ, ಹಾಗೂ ಪರಿಶಿಷ್ಟ ಪಂಗಡಗಳ ಮೀಸಲಾತಿಯನ್ನು 3% ನಿಂದ 7% ಗೂ ಹೆಚ್ಚಿಸುವುದಾಗಿ ಸರಕಾರ ಹೇಳಿದೆ. ಆದರೆ ಹೇಗೆ ಹೆಚ್ಚಿಸುತ್ತಾರೆ? ಯಾರ ಮೀಸಲಾತಿ ಕಿತ್ತು ಇನ್ಯಾರಿಗೆ ಹಂಚುತ್ತಾರೆ? ಎಲ್ಲಾ ಜಾತಿ ಸಮುದಾಯಗಳ ಮೀಸಲಾತಿ ಬೇಡಿಕೆಯನ್ನು ಈಡೇರಿಸಬೇಕೆಂದರೆ ನೂರಕ್ಕೆ ನೂರು ಪರ್ಸೆಂಟ್ ಮೀಸಲಾತಿ ಕೊಟ್ಟರೂ ಸಾಲದು. ಆದರೆ ಒಟ್ಟು ಮೀಸಲಾತಿ 50% ದಾಟುವಂತಿಲ್ಲ. ಜೊತೆಗೆ ಮೋದಿ ಸರಕಾರ ಆರ್ಥಿಕವಾಗಿ ದುರ್ಬಲರಿಗಾಗಿ (EWS) 10% ಹೆಚ್ಚುವರಿ ಮೀಸಲಾತಿಯನ್ನು ಬೇರೆ ಜಾರಿ ಮಾಡಿದೆ.‌ ದೇಶದಲ್ಲಿರುವ 2% ಬ್ರಾಹ್ಮಣ ಮೇಲ್ಜಾತಿ ಕುಲಜರೇ ಈ 10% ಮೀಸಲಾತಿಯ ಲಾಭ ಪಡೆಯುವುದು ಖಂಡಿತ. ಒಟ್ಟು 100% ನಲ್ಲಿ 60% ಮೀಸಲಾತಿ ಕಳೆದರೆ ಉಳಿಯುವುದು 40% ಮಾತ್ರ. ಜನರಲ್ ಕೆಟಗರಿಗಾಗಿ ಮೀಸಲಿಟ್ಟಿರುವ ಇದರಲ್ಲಿ ಒಂದಿಷ್ಟು ಪರ್ಸಂಟೇಜ್ ತೆಗೆದು ಜಾತಿ ಸಮುದಾಯಗಳಿಗೆ ಹಂಚಬೇಕು ಎನ್ನುವುದೊಂದೇ ಈಗಿರುವ ಪರಿಹಾರ. ತಮಿಳುನಾಡಿನವರು 69% ಹಾಗೂ ಮಹಾರಾಷ್ಟ್ರದವರು 73% ಮೀಸಲಾತಿ  ಹಂಚಿಕೆ ಮಾಡುತ್ತಿದ್ದಾರೆ. ಅವರಿಗೆ ಸಾಧ್ಯವಾದದ್ದು ಕರ್ನಾಟಕದವರಿಗೆ ಯಾಕೆ ಸಾಧ್ಯವಿಲ್ಲ ಎನ್ನುವ ವಾದ ಮುಂಚೂಣಿಯಲ್ಲಿದೆ.

ಆದರೆ ಹೀಗೆ ಮೀಸಲಾತಿಯನ್ನು ಹೆಚ್ಚಿಸಿಕೊಳ್ಳಲು ಸಂವಿಧಾನ ತಿದ್ದುಪಡಿ ಮಾಡಬೇಕಾಗುತ್ತದೆ. ಅದನ್ನು ತಿದ್ದುಪಡಿ ಮಾಡುವುದೂ ಅಂದುಕೊಂಡಷ್ಟು ಸುಲಭವಲ್ಲ. ಸಂಸತ್ತಿನ ಎರಡೂ ಸದನಗಳಲ್ಲಿ ಮೀಸಲಾತಿ ಹೆಚ್ಚಿಸುವ ಮಸೂದೆ ಒಪ್ಪಿತವಾಗಬೇಕು.‌ ನಂತರ ಕನಿಷ್ಠ  50% ರಾಜ್ಯಗಳು ಒಪ್ಪಿಗೆ ಸೂಚಿಸಬೇಕು.‌ ಬಳಿಕ ಮಸೂದೆಗೆ ರಾಷ್ಟ್ರಪತಿಗಳ ಅಂಕಿತ ಬೀಳಬೇಕು. ಈ ಎಲ್ಲಾ ಸಂಕೀರ್ಣ ಪ್ರಕ್ರಿಯೆಗಳು ಮುಗಿದ ನಂತರ ಸಂವಿಧಾನಕ್ಕೆ ತಿದ್ದುಪಡಿ ತಂದು ಮೀಸಲಾತಿ ಹೆಚ್ಚಿಸಬೇಕು. 

ಪ್ರಯತ್ನ ಮಾಡಿದ್ದರೆ ಕರ್ನಾಟಕದಲ್ಲಿ ಬಿಜೆಪಿಯ ಡಬಲ್ ಇಂಜಿನ್ ಸರಕಾರ ಇದ್ದಾಗ ಸಾಧ್ಯವಾಗಬಹುದಾಗಿತ್ತು. 27 ಬಿಜೆಪಿಯ ಸಂಸದರು ಕೇಂದ್ರ ಸರಕಾರದ ಮೇಲೆ ಒತ್ತಡ ತಂದಿದ್ದರೆ ಕರ್ನಾಟಕದ ಮೀಸಲಾತಿ ಪ್ರಮಾಣವನ್ನು ಕನಿಷ್ಠ 70% ಗೆ ಏರಿಸಬಹುದಾಗಿತ್ತು. ಅದಕ್ಕಾಗಿ ಈ ಪಂಚಮಸಾಲಿ ಸಮುದಾಯ ಬಿಜೆಪಿ ಸರಕಾರದೊಂದಿಗೆ ಸಂಘರ್ಷಕ್ಕೆ ಇಳಿಯಬಹುದಾಗಿತ್ತು. ಆದರೆ ಈಗ ರಾಜ್ಯದಲ್ಲೊಂದು ಹಾಗೂ ಕೇಂದ್ರದಲ್ಲೊಂದು ಭಿನ್ನ ಪಕ್ಷಗಳ ಸರಕಾರಗಳಿವೆ. ಹಾಗೂ ರಾಜ್ಯದಲ್ಲಿ ಬಿಜೆಪಿಯ 17 ಸಂಸದರಿದ್ದರೂ ಇಲ್ಲದಂತಿದ್ದಾರೆ. ಆದ್ದರಿಂದ ಹೆಚ್ಚುವರಿ ಮೀಸಲಾತಿಗೆ ಅನುಮತಿ ಎನ್ನುವುದು ಕನಸಿನ ಮಾತಾಗಿದೆ. ಇರುವ 50% ಮೀಸಲಾತಿಯಲ್ಲಿಯೇ ಹೆಚ್ಚು ಪಾಲಿಗಾಗಿ ಜಾತಿ ಸಮುದಾಯಗಳು ಬಡಿದಾಡಬೇಕಿವೆ. ಪಂಚಮಸಾಲಿಗಳ ಈಗ ಅದನ್ನೇ ಮಾಡುತ್ತಿದ್ದಾರೆ. ಹಿಂದುಳಿದ ಜಾತಿಗಳ ಪಾಲನ್ನು ಕಬಳಿಸಲು ಸ್ವಾಮಿಗಳು ಹಾಗೂ ಮತಾಂಧ ನಾಯಕರ ಜೊತೆ ಸೇರಿಕೊಂಡು ಆಳುವ ಸರಕಾರದ ಮೇಲೆ ಮುಗಿಬಿದ್ದಿದ್ದಾರೆ.

ಇಷ್ಟಕ್ಕೂ ಸಂವಿಧಾನದಲ್ಲಿ ಎಲ್ಲೂ ಇಂತಿಂಥ ಜಾತಿ ಪಂಗಡ ಸಮುದಾಯಗಳಿಗೆ ಇಷ್ಟು ಮೀಸಲಾತಿ ಕೊಡಬೇಕೆಂದು ನಿಗದಿ ಪಡಿಸಿಲ್ಲ. ಸಾಮಾಜಿಕ ನ್ಯಾಯಕ್ಕಾಗಿ ಮೀಸಲಾತಿ ಇರಬೇಕೆಂದು ಹೇಳಲಾಗಿದೆ. ಸಾಮಾಜಿಕವಾಗಿ ಅತೀ ಹಿಂದುಳಿದ ಜಾತಿ ವರ್ಗಗಳು ಮೀಸಲಾತಿಯ ಪ್ರಯೋಜನ ಪಡೆದು ದೇಶದಲ್ಲಿ  ಸಮಾನತೆ ಸಾಕಾರವಾಗಬೇಕು ಎನ್ನುವುದು ಸಂವಿಧಾನ‌ ಕರ್ತೃಗಳ ಆಶಯವಾಗಿದೆ.‌ ಆದರೆ ಸಾಮಾಜಿಕ ನ್ಯಾಯದ ಆಧಾರದ ಮೇಲೆ ಮೀಸಲಾತಿ ಕೊಡುವುದರ ಜೊತೆಗೆ ಆರ್ಥಿಕತೆಯ ಆಧಾರದ ಮೇಲೆ ಮೀಸಲಾತಿ ಕೊಡುತ್ತಿರುವುದು ಸಂವಿಧಾನದ ಸಾಮಾಜಿಕ ನ್ಯಾಯದ ಉದ್ದೇಶಕ್ಕೆ ವಿರುದ್ಧವಾಗಿದೆ. ಕೆಳ ತಳ ಅಸ್ಪೃಶ್ಯ ಅಶಕ್ತ ಜಾತಿ ಜನಾಂಗದವರು ಮೀಸಲಾತಿಯ ಪ್ರಯೋಜನ ಪಡೆದು ಶೈಕ್ಷಣಿಕವಾಗಿ ಮುಂದೆ ಬರಲಿ, ಉತ್ತಮರಂತೆ ಉತ್ತಮ ಉದ್ಯೋಗಗಳನ್ನು ಪಡೆದುಕೊಂಡು ಗೌರವಯುತವಾಗಿ ಬಾಳಲಿ ಎಂಬುದು ಸಂವಿಧಾನದ ಗುರಿ. ಆದರೆ ಸಾಮಾಜಿಕವಾಗಿ ಮುಂದುವರೆದ, ಆರ್ಥಿಕವಾಗಿ ಪ್ರಬಲವಾದ ಜಾತಿ ಸಮುದಾಯದವರು ಮೀಸಲಾತಿಯ ಲಾಭಕ್ಕಾಗಿ ಪೈಪೋಟಿಗೆ ಬಿದ್ದು ತಾವೂ ಹಿಂದುಳಿದವರು, ನಮ್ಮಲ್ಲೂ ಬಡವರಿದ್ದಾರೆ, ನಮಗೂ ಮೀಸಲಾತಿ ಬೇಕು ಎಂದು ಪಡೆದುಕೊಂಡಿದ್ದಾರೆ. ಬಹುತೇಕ ಪ್ರಬಲ ಜಾತಿ ಸಮುದಾಯದವರೇ ಆಳುವ ವರ್ಗಗಳಾಗಿರುವಾಗ ಮೀಸಲಾತಿ ಯಾವ ಕಟ್ಟಕಡೆಯ ಸಮುದಾಯದವರಿಗೆ ದೊರೆಯಬೇಕಿತ್ತೋ ಅದರಲ್ಲಿ ಹೆಚ್ಚಿನ ಪಾಲನ್ನು ಮೇಲ್ವರ್ಗದವರು, ಪ್ರಬಲ ಜಾತಿಯವರು ಪಡೆದು ಮೀಸಲಾತಿಯ ಉದ್ದೇಶವನ್ನೇ  ಬದಲಾಯಿಸಿಕೊಂಡಿದ್ದಾರೆ. ಹೀಗಿರುವಾಗ ಸಮಾನತೆ ಬರಬೇಕು ಎಂದರೆ ಹೇಗೆ ಸಾಧ್ಯ?

ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಪರಿಕಲ್ಪನೆಗೆ ಅನುಗುಣವಾಗಿ ಕೆಳ ತಳ ಸಮುದಾಯದ ಅಸ್ಪೃಶ್ಯ ಜಾತಿಯವರಿಗೆ, ಶತಮಾನಗಳಿಂದ ಕನಿಷ್ಠ ಸೌಲಭ್ಯಗಳಿಂದ ವಂಚಿತರಾದ ದಲಿತ ಆದಿವಾಸಿ ಸಮುದಾಯಗಳಿಗೆ ಮೀಸಲಾತಿಯನ್ನು ಮೀಸಲಾಗಿರಿಸಬೇಕು. ಈಗಿರುವ ಜಾತಿಗ್ರಸ್ತ ಸಮಾಜದಲ್ಲಿ ಎಲ್ಲಾ ಸಮುದಾಯಗಳನ್ನು ಸರಿದೂಗಿಸಲೇ ಬೇಕೆಂದರೆ ಜಾತಿ ಗಣತಿಯನ್ನು ಕೇಂದ್ರ ಸರಕಾರ ಆದಷ್ಟು ಬೇಗ ದೇಶಾದ್ಯಂತ ಮಾಡಿ ಯಾವ ಜಾತಿ ಧರ್ಮ ಮತ ಪಂಗಡಗಳ ಜನಸಂಖ್ಯೆ ಎಷ್ಟಿದೆ ಎಂದು ಕಂಡು ಹಿಡಿಯಬೇಕು. ತದನಂತರ ಜಾತಿಗಣತಿಯ ಆಧಾರದಲ್ಲಿ ಆಯಾ ಜಾತಿ ಧರ್ಮಗಳ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ವೈಜ್ಞಾನಿಕವಾಗಿ ನಿಗದಿ ಪಡಿಸಬೇಕು. ಆಗ ಮಾತ್ರ ಮೀಸಲಾತಿಯ ಪಾಲಿಗಾಗಿ ಸಂಘರ್ಷ ನಿಲ್ಲಲು ಸಾಧ್ಯ. ಪ್ರತಿ ಹತ್ತು ವರ್ಷಕ್ಕೊಮ್ಮೆ ಜಾತಿಗಣತಿ ಮಾಡಿ ಮೀಸಲಾತಿಯನ್ನು ನಿರ್ಧರಿಸುತ್ತಾ ಹೋಗಬೇಕು. ಯಾಕೆಂದರೆ ಸಂವಿಧಾನದ ಆಶಯವಾದ ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ಸಾಕಾರವಾಗಬೇಕು. ಅವಕಾಶಗಳು ಎಲ್ಲರಿಗೂ ಸಮಾನವಾಗಿ ಹಂಚಿಕೆಯಾಗಬೇಕು. ಮೀಸಲಾತಿಯಲ್ಲಿ ದುರ್ಬಲ ವರ್ಗದವರಿಗೆ ಹಾಗೂ ಶೋಷಿತ ಜಾತಿಗಳಿಗೆ ಒಂದಿಷ್ಟು ಪಾಲು ಜಾಸ್ತಿಯೇ ಇರಬೇಕು. ಮೀಸಲಾತಿಯ ಮೂಲಕ ಸಮಾನತೆ ಸಾಧಿಸುವತ್ತ ಸಮಾಜ ಮುನ್ನಡೆಯಬೇಕು.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇಷಕರು

ಇದನ್ನೂ ಓದಿ- ಪಂಚಮಸಾಲಿ ಕಾರ್ಯಕರ್ತರ ಮೇಲೆ ಕಲ್ಲು ತೂರಿದ್ದು ಬಿಜೆಪಿ ಕಾರ್ಯಕರ್ತರು: ಶಾಸಕ ಕಾಶಪ್ಪನವರ್ ಆರೋಪ

More articles

Latest article