ಚೆನ್ನೈ : ರಾಮಾಯಣ ಸಿನಿಮಾದಲ್ಲಿ ಸೀತಾಮಾತೆಯ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ ಎನ್ನುವ ಕಾರಣಕ್ಕೆ ಸಸ್ಯಹಾರಿಯಾಗಿದ್ದಾರೆ ಎಂದು ಸುಳ್ಳು ಸುದ್ದಿ ಹರಡುತ್ತಿರುವುದಕ್ಕೆ ಸಾಯಿ ಪಲ್ಲವಿ ಆಕ್ರೋಶಗೊಂಡಿದ್ದಾರೆ. ವಿನಾಕಾರಣ ಸುಳ್ಳು ಸುದ್ದಿ ಹರಡಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಸಹಜ ಸುಂದರಿ, ನಗು ಮುಖದ ಸುಂದರಿ ಸಾಯಿ ಪಲ್ಲವಿ ಹಲವು ವರ್ಷಗಳ ಹಿಂದೆಯೇ ತಾನು ಸಸ್ಯಹಾರಿ ಎಂದು ಹೇಳಿಕೊಂಡಿದ್ದರು. ಆಹಾರದ ಆಯ್ಕೆ ಬಂದಾಗ ನಾನು ಎಂದಿಗೂ ಸಸ್ಯಹಾರಿಯಾಗಿದ್ದೇನೆ. ಒಂದು ಪ್ರಾಣ ಹೋಗುವುದನ್ನು ನನಗೆ ನೋಡಲಾಗದು. ನಾನು ಇನ್ನೊಬ್ಬರಿಗೆ ನೋವು ನೀಡಲಾರೆ ಎಂದು ಹೇಳಿದ್ದರು.
ವಾಸ್ತವ ಸಂಗತಿ ಹೀಗಿದ್ದರೂ ಸೀತಾಮಾತೆಯ ಪಾತ್ರ ಮಾಡುವ ಸಲುವಾಗಿಯೇ ಸಾಯಿ ಪಲ್ಲವಿ ಮಾಂಸಾಹಾರ ತ್ಯಜಿಸಿದ್ದಾರೆ. ಶೂಟಿಂಗ್ ಗೆ ಸಸ್ಯಾಹಾರಿ ಅಡುಗೆಯವರನ್ನು ಕರೆದೊಯ್ಯುತ್ತಾರೆ ಎಂದು ಸುದ್ದಿಸಂಸ್ಥೆಯೊಂದು ಪ್ರಕಟಿಸಿತ್ತು. ಈ ಸುದ್ದಿಯನ್ನು ಸಾಯಿ ಪಲ್ಲವಿ ಅಲ್ಲಗೆಳೆದಿದ್ದು, ಇಂತಹ ಸುಳ್ಳು ಸುದ್ದಿ ಹಬ್ಬಿದರೆ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಬಹುತೇಕ ಸಮಯ, ಹೆಚ್ಚಾಗಿ ಪ್ರತಿಬಾರಿ ನನ್ನ ಬಗ್ಗೆ ಆಧಾರರಹಿತ ವದಂತಿಗಳು, ಕಪೋಲಕಲ್ಪಿತ ಕಥೆಗಳು, ಸುಳ್ಳುಗಳು ಮತ್ತು ತಪ್ಪು ಹೇಳಿಕೆಗಳನ್ನು ನೀಡುತ್ತಾ ಬರಲಾಗಿದೆ. ಆದರೂ ನಾನು ಮೌನವಾಗಿರುವುದನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಆದರೆ, ಇದು ನಿರಂತರವಾಗಿ ನಡೆಯುತ್ತಿರುವುದರಿಂದ ಸುಮ್ಮನಿರಲಾರೆ, ನಾನು ಪ್ರತಿಕ್ರಿಯಿಸಲು ಇದು ಉತ್ತಮ ಸಮಯವಾಗಿದೆ ಎಂದು ಕಿಡಿ ಕಾರಿದ್ದಾರೆ. ವಿಶೇಷವಾಗಿ ನನ್ನ ಚಲನಚಿತ್ರಗಳ ಬಿಡುಗಡೆ, ಪ್ರಕಟಣೆಗಳು, ಮತ್ತು ನನ್ನ ವೃತ್ತಿಜೀವನದ ಕುರಿತಾದ ಕ್ಷಣಗಳನ್ನು ಕೇಳಲು ಬಯಸುವೆ. ಆದರೆ, ಜನಪ್ರಿಯ ಪೇಜ್‌ಗಳು ಗಾಸಿಪ್‌ಗಳ ಹೆಸರಿನಲ್ಲಿ ಕಪೋಲಕಲ್ಪಿತ ಕ್ರೂರ ಕಥೆ ಹೇಳಿದರೆ ನೀವು ನನ್ನಿಂದ ಕಾನೂನು ಕ್ರಮಕ್ಕೆ ಪಾತ್ರರಾಗುವಿರಿ ಎಂದು ಸಾಯಿ ಪಲ್ಲವಿ ಎಕ್ಸ್‌ನಲ್ಲಿ ಎಚ್ಚರಿಕೆ ನೀಡಿದ್ದಾರೆ.
ಸಾಯಿ ಪಲ್ಲವಿ ನಟಿಸಿದ ಅಮರನ್ ಸಿನಿಮಾ ಇತ್ತೀಚೆಗೆ ಬಿಡುಗಡೆಯಾಗಿ ಬ್ಲಾಕ್‌ಬ್ಲಸ್ಟರ್ ಹಿಟ್ ಆಗಿತ್ತು. ಮೇಜರ್ ಮುಕುಂದ್ ಅವರ ಬದುಕಿನ ಕಥೆಯನ್ನು ಈ ಸಿನಿಮಾ ಹೊಂದಿತ್ತು. ಈಗ ಒಟಿಟಿಯಲ್ಲಿ ಸ್ಟ್ರೀಮಿಂಗ್ ಆಗುತ್ತಿದೆ. ಸಾಯಿ ಪಲ್ಲವಿ ಅವರು ನಿತೀಶ್ ತಿವಾರಿ ನಿರ್ದೇಶನದ ರಾಮಾಯಣ ಸಿನಿಮಾದಲ್ಲಿ ನಟಿಸಲಿದ್ದಾರೆ. ಈ ಸಿನಿಮಾದಲ್ಲಿ ರಣಬೀರ್ ಕಪೂರ್, ರವಿ ದುಬೆ, ಸನ್ನಿ ಡಿಯೋಲ್, ಕನ್ನಡ ಸೂಪರ್ ಸ್ಟಾರ್ ಯಶ್ ಮುಂತಾದವರು ನಟಿಸುತ್ತಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ಮೂಡಿ ಬರಲಿದೆ. ಮೊದಲ ಭಾಗ 2026ರಲ್ಲಿ ಬಿಡುಗಡೆಯಾಗಲಿದೆ. ಸಾಯಿ ಪಲ್ಲವಿ ಒಂದು ಬಾರಿ ಒಂದು ಸಿನಿಮಾದಲ್ಲಿ ಮಾತ್ರ ನಟಿಸುತ್ತಾರೆ. ಒಂದು ಸಿನಿಮಾ ಮುಗಿಯುವ ಮೊದಲು ಮತ್ತೊಂದು ಸಿನಿಮಾದಲ್ಲಿ ನಟಿಸದೆ ಇರುವ ಅಭ್ಯಾಸ ರೂಢಿಸಿಕೊಂಡಿದ್ದಾರೆ.