ಬೆಳಗಾವಿ: ಬೆಳಗಾವಿಯಲ್ಲಿ 2ಎ ಮೀಸಲಾತಿಗಾಗಿ ಪ್ರತಿಭಟನೆ ನಡೆಸುತ್ತಿದ್ದ ಪಂಚಮಸಾಲಿ ಸಮುದಾಯದ ಪ್ರತಿಭಟನಾಕಾರರ ಮೇಲೆ ಲಘು ಲಾಠಿ ಪ್ರಹಾರ ನಡೆದ ಹಿಂದೆ ಯಾವುದೇ ದುರುದ್ದೇಶ ಇರಲಿಲ್ಲ. ಜಿಲ್ಲಾಡಳಿತ ಜಾರಿಗೊಳಿಸಿದ್ದ ಪ್ರತಿಬಂಧಕಾಜ್ಞೆ ಮತ್ತು ಹೈಕೋರ್ಟ್ ನೀಡಿದ ಆದೇಶವನ್ನು ಉಲ್ಲಂಘಿಸಿದ ಕಾರಣಕ್ಕೆ ಮತ್ತು ಮತ್ತು ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಅನಿವಾರ್ಯವಾಗಿ ಪೊಲೀಸರು ಕ್ರಮ ತೆಗೆದುಕೊಳ್ಳಬೇಕಾಯಿತು ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಸಮರ್ಥಿಸಿಕೊಂಡಿದ್ದಾರೆ.
ಸುವರ್ಣಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಟ್ರ್ಯಾಕ್ಟರ್ ಗಳನ್ನು ಸುವರ್ಣ ಸೌಧದ ಆವರಣಕ್ಕೆ ಒಯ್ಯಕೂಡದು ಎಂದು ನ್ಯಾಯಾಲಯ ಹೇಳಿದ್ದರೂ ಸ್ವಾಮೀಜಿಯವರ ಕರೆಯ ಮೇರೆಗೆ ಟ್ರ್ಯಾಕ್ಟರ್ ಗಳನ್ನು ಸುವರ್ಣ ಸೌಧದ ಒಳಗೆ ಮುನ್ನುಗ್ಗಿಸುವ ಪ್ರಯತ್ನವನ್ನು ಪ್ರತಿಭಟನಾಕಾರರು ನಡೆಸಿದರು. ಮೇಲಾಗಿ ಪೊಲೀಸರ ಮೇಲೆ ಚಪ್ಪಲಿ ಮತ್ತು ಕಲ್ಲು ತೂರಾಟ ನಡೆಸಲಾಯಿತು. ಇಂತಹ ಪರಿಸ್ಥಿತಿಯಲ್ಲಿ ಪೊಲೀಸರು ಅನಿವಾರ್ಯವಾಗಿ ಲಾಠಿ ಚಾರ್ಜ್ ಮಾಡಬೇಕಾಯಿತು ಎಂದು ಪರಮೇಶ್ವರ್ ಹೇಳಿದರು.