ಬೆಂಗಳೂರು: ಹಣ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶ ನೀಡಲಾಗುವುದು ಎಂದು ಎಂಜಿನಿಯರ್ ಒಬ್ಬರಿಗೆ ಸೈಬರ್ ವಂಚಕರು ಆಮಿಷವೊಡ್ಡಿ ರೂ. 13 ಲಕ್ಷ ವಂಚಿಸಿರುವ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ. ಈ ಸಂಬಂಧ ಹಲಸೂರು ನಿವಾಸಿ ಎಂಜಿನಿಯರ್ ವಿ.ಎಂ.ನಾಗಮಣಿ ಎಂಬುವರು ಪೂರ್ವ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರು ನೀಡಿದ್ದ ದೂರು ಆಧರಿಸಿ ಎಫ್ಐಆರ್ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದೂರುದಾರಿಗೆ ಫೇಸ್ಬುಕ್ನಲ್ಲಿ ಟ್ರೇಡಿಂಗ್ ಕುರಿತು ಲಿಂಕ್ ವೊಂದು ಬಂದಿತ್ತು. ನಾಗಮಣಿ ಅವರು ಆ ಲಿಂಕ್ ಒತ್ತಿದ್ದರು. ಲಿಂಕ್ ಒತ್ತಿದ ಬಳಿಕ ಪ್ರಣೀತ್ ಜೋಶಿ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ಗೆ ಅವರ ಮೊಬೈಲ್ ಸಂಖ್ಯೆ ಸೇರ್ಪಡೆ ಆಗಿತ್ತು. ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ಪಾವತಿಸುವ ಆಮಿಷ ಒಡ್ಡಲಾಗಿತ್ತು ಎಂಬ ವಾಟ್ಸಾಪ್ ಸಂದೇಶ ಕಳುಹಿಸಲಾಗಿತ್ತು. ನಾಗಮಣಿ ಅವರು ಈ ಸಂದೇಶವನ್ನು ನಂಬಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಆರಂಭದಲ್ಲಿ ಹೂಡಿಕೆ ಮಾಡಿದ್ದ ಹಣಕ್ಕೆ ವಂಚಕರು ಸ್ವಲ್ಪ ಪ್ರಮಾಣದ ಲಾಭಾಂಶ ನೀಡಿದ್ದರು. ನಂತರ ಇನ್ನೂ ಹೆಚ್ಚಿನ ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ದೊರೆಯಲಿದೆ ಎಂಬ ಆಮಿಷವೊಡ್ಡಲಾಗಿತ್ತು. ಈ ಆಮಿಷವನ್ನು ನಂಬಿದ ದೂರುದಾರರು ತಮ್ಮ SBI ಖಾತೆಯಿಂದ ರೂ.9.92 ಲಕ್ಷ ಹಾಗೂ HDFC ಖಾತೆಯಿಂದ ರೂ.3.14 ಲಕ್ಷವನ್ನು ಬಿಡಿಸಿ ಸೈಬರ್ ವಂಚಕರು ನೀಡಿದ್ದ ಖಾತೆಗೆ ವರ್ಗಾವಣೆ ಮಾಡಿದ್ದಾರೆ. ತಾನು ಮೋಸಕ್ಕೆ ಒಳಗಾಗಿರುವುದು ನಂತರ ಅರಿವಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.