ಬೆಳಗಾವಿ: ಕಲಬುರಗಿ ಜಿಲ್ಲೆಯಲ್ಲಿ ಬೆಳೆಯುವ ತೊಗರಿಗೆ ಜಿ.ಐ.ಟ್ಯಾಗ್ (ಕ್ಲಾಸ್-31)ಪ್ರಮಾಣಪತ್ರದೊರೆತಿದ್ದು, ಇದಕ್ಕೆಶೇ.20-25 ರಷ್ಟು ಹೆಚ್ಚಿನ ಬೆಂಬಲ ಬೆಲೆ ನಿಗದಿ ಪಡಿಸಲು ಕೇಂದ್ರದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗವನ್ನು (Commission for Agriculture Crops and Prices- CACP) ಕೋರಲಾಗಿದೆ ಎಂದು ಕೃಷಿ ಸಚಿವ ಎನ್ ಚಲುವರಾಯಸ್ವಾಮಿ ವಿಧಾನಪರಿಷತ್ತಿಗೆ ತಿಳಿಸಿದ್ದಾರೆ.
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದ ಮೊದಲ ದಿನ ತಿಪ್ಪಣ್ಣಪ್ಪ ಕಮಕನೂರರವರ ನಿಯಮ 72 ರ ಮೇರೆಗಿನ ಗಮನ ಸೆಳೆಯುವ ಸೂಚನೆಗೆ ಉತ್ತರಿಸಿ ಕೃಷಿ ಸಚಿವರು ಈ ಮಾಹಿತಿ ನೀಡಿದರು
ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆಯನ್ನು ಕೇಂದ್ರ ಸರ್ಕಾರವು ಘೋಷಣೆ ಮಾಡುತ್ತದೆ. ಕೃಷಿ ವೆಚ್ಚ ಮತ್ತು ಬೆಲೆ ಆಯೋಗವು(Commission on Agriculture Costs and Prices-CACP) ಪ್ರತಿ ವರ್ಷ ಮುಂಗಾರು ಮತ್ತು ಹಿಂಗಾರು ಹಂಗಾಮಿನ ಬೆಳೆಗಳಿಗೆ ವಿವಿಧ ರಾಜ್ಯಗಳಲ್ಲಿ ಉತ್ಪಾದನಾ ವೆಚ್ಚ ವಿವರಗಳನ್ನು ಕೃಷಿ ವಿಶ್ವವಿದ್ಯಾನಿಲಯಗಳ ಸಹಯೋಗದಲ್ಲಿ ಲೆಕ್ಕಾಚಾರ ಮಾಡುತ್ತದೆ. ಜೊತೆಗೆ ಎಲ್ಲಾ ರಾಜ್ಯ ಸರ್ಕಾರಗಳಿಂದ ಬೆಳೆಗಳ ಉತ್ಪಾದನಾ ವೆಚ್ಚದ ಮಾಹಿತಿ ಪಡೆದು, ತಜ್ಞರು, ಅಧಿಕಾರಿಗಳು ಮತ್ತು ರೈತರೊಂದಿಗೆ ಚರ್ಚಿಸಿ, ಉತ್ಪಾದನಾ ವೆಚ್ಚ ವಿವರಗಳನ್ನು ಒಳಗೊಂಡ ಬೆಲೆ ನೀತಿ ವರದಿಯನ್ನು ತಯಾರಿಸಲಾಗುತ್ತದೆ ಎಂದು ಚಲುವರಾಯಸ್ವಾಮಿ ಹೇಳಿದರು.
ವರದಿ, ಶಿಫಾರಸ್ಸುಗಳಿಗೆ ಸಂಬಂಧಿಸಿದಂತೆ ರಾಜ್ಯಗಳ ಅಭಿಪ್ರಾಯ ಪಡೆದು,ನಂತರ ಉತ್ಪಾದನಾ ವೆಚ್ಚದ ಮೇಲೆ ಶೇ.50 ರಷ್ಟು ಸೇರಿಸಿ ಬೆಂಬಲ ಬೆಲೆಯನ್ನು ನಿಗದಿಪಡಿಸಲು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತದೆ. CACP ಶಿಫಾರಸ್ಸಿನನ್ವಯ ಕೇಂದ್ರ ಸರ್ಕಾರವು ಬೆಂಬಲ ಬೆಲೆಯನ್ನು ಘೋಷಿಸುತ್ತದೆ ಎಂದು ಎನ್ ಚಲುವರಾಯಸ್ವಾಮಿ ವಿವರಿಸಿದರು. ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ಪ್ರತಿವರ್ಷ ತೊಗರಿ ಬೆಳೆಗೆ ಹೆಚ್ಚಿನ ಬೆಂಬಲ ಬೆಲೆಗೆ ಶಿಫಾರಸ್ಸು ಮಾಡಲಾಗುತ್ತಿದೆ ಅದರ ಅನ್ವಯದಂತೆ ವಿವಿಧ ಮಾನದಂಡಗಳನ್ನು ಅನುಸರಿಸಿ ಬೆಂಬಲ ಬೆಲೆ ನಿಗಧಿಯಾಗಲಿದೆ ಎಂದು ಕೃಷಿ ಸಚಿವರು ವರ್ಷವಾರು ಅಂಕಿ ಅಂಶಗಳೊಂದಿಗೆ ಮಾಹಿತಿ ನೀಡಿದರು.