ಬೆಂಗಳೂರು : ಸಂವಿಧಾನ ಬದಲಾವಣೆಯ ಮುಂಚೂಣಿಯ ನಾಯಕರಂತೆ ವರ್ತಿಸುತ್ತಿದ್ದ ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥರು, ತಮ್ಮ ಹೇಳಿಕೆಗಳು ಹಾಗೂ ನಡವಳಿಕೆಗಳಿಂದ ಪ್ರಜ್ಞಾವಂತ ಸಮಾಜ ತಿರುಗಿ ಬಿದ್ದಿರುವುದನ್ನು ಮನಗಂಡು ನಾನು ಸಂವಿಧಾನ ವಿರೋಧಿ ಹೇಳಿಕೆಯೇ ನೀಡಿಲ್ಲ ಎಂದು ತಾವೇ ಆಡಿದ ಮಾತುಗಳನ್ನು ತಿರುಚಿಕೊಳ್ಳುತ್ತಿರುವುದು ವಿಪರ್ಯಾಸ ಎಂದು ಬಿ.ಕೆ.ಹರಿಪ್ರಸಾದ್ ಹೇಳಿದ್ದಾರೆ.
ಸಂವಿಧಾನ ಬದಲಾಯಿಸಬೇಕೆಂದು ನಾನು ಹೇಳಿಯೇ ಇರಲಿಲ್ಲ. ನಾನು ಹೇಳದಿರುವ ಮಾತಿಗೆ ಜನರು ದಂಗೆ ಎದ್ದಂತೆ ವರ್ತಿಸುತ್ತಿದ್ದಾರೆ. ಹಿಂದೂ ಮತವನ್ನು ಗೌರವಿಸುವ, ಹಿಂದೂಗಳ ಭಾವನೆಯನ್ನು ಗೌರವಿಸುವ, ಸರ್ಕಾರ ಬರಬೇಕು. ಸ್ವಾತಂತ್ರ್ಯಕ್ಕೂ ಮುನ್ನ ಭಾರತವು ಹಿಂದೂ ರಾಷ್ಟ್ರವಾಗಿತ್ತು, ಸ್ವಾತಂತ್ರ್ಯಾನಂತರ ಜಾತ್ಯಾತೀತ ರಾಷ್ಟ್ರವಾಗಿದೆ ಎಂದು ಪೇಜಾವರ ಶ್ರೀಗಳು ಹೇಳಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹಾಗೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿಯ ಮಾಧ್ಯಮ ವಕ್ತಾರರಂತೆ ಅಲ್ಪಸಂಖ್ಯಾತರನ್ನು ಓಲೈಕೆ ಮಾಡುತ್ತಿದ್ದಾರೆ ಎಂದು ಬಹಿರಂಗ ಹೇಳಿಕೆ ನೀಡುವುದು ಪೇಜಾವರರು ಬಿಜೆಪಿ ಪಕ್ಷದ ನಿಷ್ಟೆಯನ್ನು ಪದೇ ಪದೇ ಸಾಬೀತು ಮಾಡುತ್ತಿರುವಂತಿದೆ ಎಂದು ಹರಿಪ್ರಸಾದ್ ಆರೋಪಿಸಿದ್ದಾರೆ.
ಆಧಾರ ಇಲ್ಲದೇ ಒಂದು ಸರ್ಕಾರದ ಮೇಲೆ ಗಂಭೀರ ಆರೋಪಗಳನ್ನು ಮಾಡುವುದು ಯತಿಗಳಾದಂತವರಿಗೆ ತರವಲ್ಲ. ಸಂವಿಧಾನದ ವಿರೋಧಿ ನಿಲುವುಗಳಿಂದ ದಲಿತರು, ಬಹುಜನ ಶೋಷಿತ ಸಮುದಾಯಗಳ ಆಕ್ರೋಶವನ್ನು ಎದುರಿಸಲಾಗದೆ ಪೇಜಾವರರು ಅಲ್ಪಸಂಖ್ಯಾತರ ವಿರುದ್ಧ ಮಾತಾಡುವ ಮೂಲಕ ಚರ್ಚೆಯನ್ನೇ ದಾರಿ ತಪ್ಪಿಸುತ್ತಿದ್ದಾರೆ ಎಂದು ಹರಿಪ್ರಸಾದ ಅಭಿಪ್ರಾಯಪಟ್ಟಿದ್ದಾರೆ.