ನವದೆಹಲಿ: ದೇಶದಲ್ಲಿ ಈ ವರ್ಷದ ನವಂಬರ್ ತಿಂಗಳಲ್ಲಿ ಕಾರುಗಳ ಮಾರಾಟದಲ್ಲಿ ಹೆಚ್ಚಳವಾಗಿದೆ. ನವಂಬರ್ ನಲ್ಲಿ 3,50,000 ಕಾರುಗಳು ಮಾರಾಟವಾಗಿವೆ ಎಂದು ತಿಳಿದು ಬಂದಿದೆ. ಕಳೆದ ವರ್ಷ ನವಂಬರ್ ನಲ್ಲಿ 3.36 ಲಕ್ಷ ಕಾರುಗಳು ಮಾರಾಟವಾಗಿದ್ದವು. ಈ ವರ್ಷ ಕಾರುಗಳ ಮಾರಾಟದಲ್ಲಿ ಶೇ. 4ರಷ್ಟು ಹೆಚ್ಚಳವಾಗಿದೆ. ಈ ಅಂಕಿಅಂಶಗಳು ಶೋರೂಂನಿಂದ ಗ್ರಾಹಕರಿಗೆ ಮಾರಾಟ ಮಾಡಿದ ಕಾರುಗಳ ಮಾಹಿತಿ ಅಲ್ಲ. ಕಾರು ತಯಾರಿಕಾ ಕಂಪನಿಗಳಿಂದ ಡೀಲರ್ಗಳಿಗೆ ತಲುಪಿಸಿರುವ ಅಂಕಿಅಂಶ ಇದಾಗಿದೆ. ಶೋರೋಂಗಳೂ ಬಹುತೇಕ ಇದೇ ಸಂಖ್ಯೆಯ ಕಾರುಗಳನ್ನು ಮಾರಾಟ ಮಾಡಿರುತ್ತವೆ.
ಹಬ್ಬಗಳ ಸೀಸನ್ ಮುಗಿದರೂ ಕಾರುಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ ಎನ್ನುವುದು ಗಮನಾರ್ಹ. ನವಂಬರ್ ನಲ್ಲಿ ಮಾರುತಿ ಸುಜುಕಿ 1,41,312 ಕಾರುಗಳನ್ನು ಮಾರಾಟ ಮಾಡಿದೆ. ಎಸ್ಯುವಿ ಕಾರುಗಳಿಗೆ ಬೇಡಿಕೆ ಹೆಚ್ಚುತ್ತಿದ್ದು, ಮಾರುತಿ ಸುಜುಕಿಯ ಒಟ್ಟಾರೆ ಕಾರು ಮಾರಾಟದಲ್ಲಿ ಎಸ್ಯುವಿಗಳ ಪಾಲು ಶೇ. 29ರಷ್ಟಿದೆ. ಸ್ವಿಫ್ಟ್ ಡಿಜೈರ್ ಕಾರು ಅತಿಹೆಚ್ಚು ಮಾರಾಟವಾಗಿದೆ ಎಂದು ಕಂಪನಿ ಮೂಲಗಳು ತಿಳಿಸಿವೆ. ಹ್ಯುಂಡೈ, ಟಾಟಾ ಮೋಟಾರ್ಸ್, ಟೊಯೋಟಾ ಕಿರ್ಲೋಸ್ಕರ್ ಕಾರುಗಳಿಗೆ ಬೇಡಿಕೆ ಕುಸಿದಿಲ್ಲ. ಟೊಯೊಟಾ ಕಿರ್ಲೋಸ್ಕರ್ ಕಾರುಗಳ ಮಾರಾಟದಲ್ಲಿ ಶೇ. 44ರಷ್ಟು ಹೆಚ್ಚಳವಾಗಿದೆ.
ಇನ್ನು ಯಾವ ಕಂಪನಿ ಎಷ್ಟು ಕಾರುಗಳನ್ನು ಮಾರಾಟ ಮಾಡಿದೆ ಎಂಬ ಅಂಕಿಅಂಶಗಳನ್ನು ನೋಡೋಣ.
ಮಾರುತಿ ಸುಜುಕಿ- 1,41,312; ಹ್ಯುಂಡೈ-48,246;ಟಾಟಾ ಮೋಟಾರ್ಸ್-47,063; ಟೊಯೋಟಾ ಕಿರ್ಲೋಸ್ಕರ್ -24,446 ;ಎಸ್ಡಬ್ಲ್ಯು ಎಂಜಿ ಮೋಟಾರ್- 6,019
ಸುಜುಕಿ ಬೈಕ್ ಮತ್ತು ಸ್ಕೂಟರ್ಸ್…
ಸುಜುಕಿ ಮೋಟಾರ್ಸೈಕಲ್ ಸಂಸ್ಥೆ ನವೆಂಬರ್ನಲ್ಲಿ 94,370 ದ್ವಿಚಕ್ರ ವಾಹನಗಳನ್ನು ಮಾರಿದೆ. ಇದರಲ್ಲಿ ದೇಶೀಯ ಮಾರುಕಟ್ಟೆಯಲ್ಲಿ ಮಾರಾಟವಾಗಿರುವುದು 78,333 ವಾಹನಗಳಾಗಿವೆ. 16 ಸಾವಿರಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಸುಜುಕಿ ರಫ್ತು ಮಾಡಿದೆ. ಕಳೆದ ವರ್ಷದ ನವೆಂಬರ್ಗೆ ಹೋಲಿಸಿದರೆ ಈ ಬಾರಿ ಶೇ. 15ರಷ್ಟು ಹೆಚ್ಚು ರಫ್ತಾಗಿದೆ.