ಕಾನ್ –2024 ಚಲನಚಿತ್ರೋತ್ಸವದ ಗ್ರ್ಯಾಂಡ್ ಪ್ರಿ ಪ್ರಶಸ್ತಿ ವಿಜೇತ, ಪಾಯಲ್ ಕಪಾಡಿಯಾ ನಿರ್ದೇಶನದ ʼಆಲ್ ವಿ ಇಮೆಜಿನ್ ಯಾಸ್ ಲೈಟ್ʼ ಮಲಯಾಳಂ ಸಿನಿಮಾದ ಶೀರ್ಷಿಕೆಯೇ ಕುತೂಹಲ ಹಾಗೂ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ʼ ಕತ್ತಲ ಗರ್ಭದಲ್ಲಿ ಬೆಳಕಿದೆ; ಬೆಳಕಿನ ಆಂತರ್ಯದಲ್ಲಿ ಕತ್ತಲಿದೆ ʼ ಎಂಬ ಮಾತನ್ನು ನಾವು ಕೇಳಿದ್ದೇವೆ. ಈ ಸಿನಿಮಾದಲ್ಲಿ ಕತ್ತಲು-ಬೆಳಕನ್ನು ಬೈನರಿ ನೆಲೆಯಲ್ಲಿ ಅಭಿವ್ಯಕ್ತಿಸಿಲ್ಲ. ʼನಾವು ಊಹಿಸಿದ್ದೆಲ್ಲ ಬೆಳಕಿನಂತೆ..ʼ ಎಂಬ ಒಂದು ಅರ್ಥದ ಜೊತೆಗೆ ʼ ನಾವು ಊಹಿಸಿದ್ದೆಲ್ಲ ಹಗುರವಾಗಿ, ಅಂದರೆ ಸಂತಸ, ದುಃಖ ಇತ್ಯಾದಿಗಳನ್ನು ಸಮಚಿತ್ತದಿಂದ ತೆಗೆದುಕೊಳ್ಳಬೇಕು ಎಂಬ ಅರ್ಥವನ್ನೂ ಶೀರ್ಷಿಕೆ ದಾಟಿಸುತ್ತಿದೆಯೇ ಎಂಬುದು ಈ ಬರಹಗಾರನ ಜಿಜ್ಞಾಸೆ! ಇರಲಿ……..
ಈ ಸಿನಿಮಾದ ಎಸ್ಟಾಬ್ಲಿಷಿಂಗ್ ಶಾಟ್‌ನಲ್ಲಿ ಕ್ಯಾಮರಾ ಪ್ಯಾನ್ ಮಾಡುತ್ತ, ಇನ್ನು ಕತ್ತಲಿರುವ ಮುಂಜಾನೆಯ ಮುಂಬೈನ ಸಣ್ಣ ವ್ಯಾಪಾರ-ವಹಿವಾಟುಗಳನ್ನು ತೋರಿಸುತ್ತದೆ. ವಾಯ್ಸೋವರ್‌ನಲ್ಲಿ, ಅನೇಕ ವರ್ಷಗಳಿಂದ ಇಲ್ಲಿ ನೆಲೆಸಿದ್ದರೂ, ಇನ್ನೂ ಈ ಮಹಾನಗರದ ಜೊತೆ ಅಂತರ್ಗತಗೊಂಡಿಲ್ಲ ಎಂಬರ್ಥದ ಮಾತುಗಳು ಕೇಳಿ ಬರುತ್ತವೆ. ಹೀಗೆ Observational Documentary Styleನ್ನು ಬಳಸಲಾಗಿದೆ. ನಂತರದ ಶಾಟ್‌ನಲ್ಲಿ ಒಂದು ಲೋಕಲ್ ಟ್ರೈನ್‌ನಲ್ಲಿ ಒಬ್ಬ ಮಧ್ಯವಯಸ್ಕ ಮಹಿಳೆ ನಿಂತುಕೊಂಡು ಪಯಣಿಸುವುದನ್ನು ವೀಕ್ಷಕರು ವೀಕ್ಷಿಸುತ್ತಾರೆ. ಆಕೆಯ ಮೇಕಪ್ ರಹಿತ, ಸುಸ್ತಾದಂತೆ ಕಾಣುವ ಮುಖ, ಅದು ಹೊರಡಿಸುವ ಭಾವ, ಆ ಪಾತ್ರ (ಪ್ರಭಾ- ಪ್ರೊಟೊಗನಿಸ್ಟ್- ನಟಿ ಕನಿ ಕುಸ್ರುತಿ)ಕ್ಕೆ ಪ್ರವೇಶವನ್ನು ನೀಡುತ್ತದೆ. ಮೂಲತಃ ಕೇರಳದ ಪ್ರಭಾ ಒಂದು ಆಸ್ಪತ್ರೆಯಲ್ಲಿ ಹಿರಿಯ ಶುಶ್ರೂಷಕಿಯಾಗಿ ಕೆಲಸ ಮಾಡುತ್ತಿರುತ್ತಾಳೆ. ಮದುವೆಯ ತರುವಾಯ ಜರ್ಮನಿಗೆ ತೆರಳುವ ಪತಿಯ ಜೊತೆಗೆ ಆಕೆಗೆ ಸಂಪರ್ಕವೇ ಇರುವುದಿಲ್ಲ! ಪ್ರಭಾಳ ಸಣ್ಣ ಅಪಾರ್ಟ್‌ಮೆಂಟ್ ನಲ್ಲಿ ಆಕೆಯ ಜೊತೆ ಕೇರಳ ಮೂಲದ ಅನು(ನಟಿ ದಿವ್ಯ ಪ್ರಭಾ) ಎಂಬ ಕಿರಿಯ ಸಹೋದ್ಯೋಗಿ ಸಹವಾಸಿಯಾಗಿರುತ್ತಾಳೆ. ಆಕೆಯದು ಒಂದು ರೀತಿಯಲ್ಲಿ ಬಿಂದಾಸ್ ಎನ್ನಬಹುದಾದ ಮನೋಭಾವ. ಆಕೆ ಶಿಯಾಝ್ (ನಟ ಹೃದೂ ಹರೂನ್)ನಲ್ಲಿ ಅನುರಕ್ತೆಯಾಗಿರುತ್ತಾಳೆ. ಪ್ರಭಾ ಮತ್ತು ಅನು, ಪಾರ್ವತಿ ಎಂಬ ಅಡುಗೆ ತಯಾರಿಸುವ ಸಹಾಯಕಿ (ನಟಿ ಛಾಯಾ ಕದಮ್) ಜೊತೆ ಆಪ್ತರಾಗಿರುತ್ತಾರೆ.
ಈ ಮೂವರು ವಲಸಿಗ ಮಹಿಳೆಯರ ನಿತ್ಯಬಾಳಿನ ಫಲಕುಗಳನ್ನು ಸಿನಿಮಾ ಕಟ್ಟಿಕೊಡುತ್ತ ಹೋಗುತ್ತದೆ. ಅವರು ಎದುರಿಸುವ ಸವಾಲುಗಳು, ಸಮಸ್ಯೆಗಳು, ಆತಂಕ, ಮುಗುಳ್ನಗು ಮೂಡಿಸುಂತಹ ಸನ್ನಿವೇಶಗಳನ್ನು ಕಲಾತ್ಮಕವಾಗಿ ದೃಶ್ಯಿಸಲಾಗಿದೆ. ಮುಂಬೈಯನ್ನು ʼ ಕನಸುಗಳ ಮಹಾನಗರ ʼ ಎಂದು ಕರೆಯಲಾಗುತ್ತದೆ. ಆದರೆ ಅದೊಂದು ʼಭ್ರಮೆಗಳ ನಗರ ʼ ಎಂದು ವಾಯ್ಸೋವರ್‌ನಲ್ಲಿ ಒಂದು ದನಿ ಕೇಳಿಬರುತ್ತದೆ. ಇಲ್ಲಿ ಕನಸು-ಭ್ರಮೆ-ವಾಸ್ತವಗಳ ಜೊತೆಜೊತೆಯಲ್ಲೇ ಹಲವರು ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತ ಬಂದಿದ್ದಾರೆ. ಇದಕ್ಕೆ ಸಂಬಂಧಿಸಿದ ಒಂದು ಸಂಭಾಷಣೆ ಸಿನಿಮಾದಲ್ಲಿದೆ. ಕೆಲವು ದಶಕಗಳ ಹಿಂದೆ ಸಿನಿಮಾಗಳಲ್ಲಿ ದುಡಿಯುವ ಸಾಧಾರಣ ಮಂದಿಯ ದೈನಂದಿನ ಬಾಳಿನ ನರಳಾಟವನ್ನೇ ಹೆಚ್ಚಾಗಿ ಫೋಕಸ್ ಮಾಡಲಾಗುತ್ತಿತ್ತು. ಆದರೆ ಇಲ್ಲಿ ಎಲ್ಲ ಅವಾಂತರಗಳ ಜೊತೆ ಬದುಕನ್ನು ಸಾಗಿಸಬೇಕಾದ ಅನಿವಾರ್ಯತೆ ಮೂಡಿಸುವ ಗಟ್ಟಿತನ ಹಾಗೂ ಛಾತಿಯ ಎಳೆಗಳನ್ನು ಸೂಕ್ಷ್ಮವಾಗಿ ಬಿಂಬಿಸಲಾಗಿದೆ.
ಮುಂಬೈನ ಮಳೆ, ಬೀದಿ ಬದಿಯ ಸಣ್ಣ ಅಂಗಡಿಗಳ ವಹಿವಾಟುಗಳು, ದೊರಕುವ ತಿನಿಸುಗಳು, ಗಣೇಶ ಮೂರ್ತಿಯ ಮೆರವಣಿಗೆ, ಸಂಭ್ರಮೋತ್ಸವ, ಲೋಕಲ್ ಟ್ರೈನುಗಳಲ್ಲಿನ ಪಯಣ ಇತ್ಯಾದಿಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಅಪಾರ್ಟ್‌ಮೆಂಟ್‌ಗಳ ದೀಪಗಳು, ಪಯಣದಲ್ಲಿರುವ ಲೋಕಲ್ ಟ್ರೈನುಗಳು ಈ ಮಹಾನಗರಿಯ ವಿವಿಧ ನೆಲಗಳ ಅಭದ್ರ ಬದುಕಿನ ನೆಮ್ಮದಿಯ ನಾಳೆಗಳ ಭರವಸೆಯನ್ನು ಸೂಚಿಸುತ್ತವೆ ಎನ್ನಬಹುದು. ಪ್ರಭಾ-ಅನು ವಾಸಿಸುವ ಸಣ್ಣ ಅಪಾರ್ಟ್‌ಮೆಂಟ್‌ನ ದೈನಂದಿನ ಬದುಕಿನ Claustrophobic Effect ಗಮನೀಯವಾಗಿ ಮೂಡಿಬಂದಿದೆ. ಅನೇಕ ವರ್ಷಗಳಿಂದ ಪಾರ್ವತಿ ಒಂದು ತಾಣದಲ್ಲಿ ವಾಸಿಸುತ್ತಿದ್ದರೂ, ಲ್ಯಾಂಡ್ ಶಾರ್ಕ್ ಒಬ್ಬನ ಕಿರುಕುಳದಿಂದ, ಸೂಕ್ತ ದಸ್ತಾವೇಜುಗಳೂ ಇಲ್ಲದಿದ್ದರಿಂದ, ಆಕೆ ಮುಂಬೈಯನ್ನು ತೊರೆದು ತನ್ನ ಸ್ವಂತ ಊರಾದ ರತ್ನಗಿರಿಗೆ ಹಿಂದಿರುಗಲು ನಿಶ್ಚಯಿಸುತ್ತಾಳೆ. ಒಂದು ರಾತ್ರಿ, ಪಾರ್ವತಿ ತನ್ನ ವಾಸಸ್ಥಾನದ ಮುಂದೆ ಕಟ್ಟಲಾಗಿರುವ ಅಪಾರ್ಟ್‌ಮೆಂಟ್‌ನ ಬ್ಯಾನರ್ ಮೇಲೆ ದೊಡ್ಡ ಕಲ್ಲನ್ನು ಎಸೆಯುತ್ತಾಳೆ! ಪ್ರಭಾಳಿಗೂ ಎಸೆಯುವಂತೆ ಪ್ರೇರೇಪಿಸುತ್ತಾಳೆ! ಈ ವೃತ್ತಾಂತ ಮುಂಬೈನಂತಹ ಮಹಾನಗರಗಳ ವರ್ಗವೈರುಧ್ಯಗಳ ಕರಾಳ ಮುಖಗಳಿಗೆ ಕನ್ನಡಿ ಹಿಡಿಯುತ್ತದೆ. ಈ ಕಾರಣಗಳಿಂದ, ಮುಂಬೈ ಒಂದು ಪಾತ್ರವಾಗಿ ಮೂಡಿಬಂದಿದೆ ಎಂದೆನಿಸಿತು.
ಈ ಸಿನಿಮಾ, ಪ್ರೀತಿ, ಪ್ರೇಮ, ಹಾತೊರೆಯುವಿಕೆ, ಪರಕೀಯತೆ, ಮದುವೆ ಎಂಬ ಸಂಸ್ಥೆಯ ಅವಲೋಕನ, ಇತ್ತೀಚಿನ ದಶಕಗಳಲ್ಲಿ ಅಂತರ್ಮತೀಯ ಸಂಬಂಧಗಳು, ಅದರಲ್ಲೂ ಮುಖ್ಯವಾಗಿ ಹೆಣ್ಣು-ಗಂಡು ನಡುವಿನ ಸಂಬಂಧ ಎದುರಿಸುವ ಆತಂಕಗಳು, ಸಹಜೀವಿಗಳ(ಇಲ್ಲಿ ಮೂರು ಗೆಳತಿಯರ ನಡುವಿನ) ಪರಾನುಭೂತಿ(ಎಂಪಥಿ) ಮುಂತಾದುವುಗಳನ್ನು ದಾಟಿಸುವುದರಲ್ಲಿ ಸಫಲವಾಗಿದೆ. ಪ್ರಭಾ, ಜರ್ಮನಿಯಲ್ಲಿರುವ ಗಂಡ ಕಳುಹಿಸಿದ ರೈಸ್ ಕುಕ್ಕರನ್ನು ರಾತ್ರಿ ತಬ್ಬುವ ಶಾಟ್, ಆಕೆ ನವಿರಾದ ದಾಂಪತ್ಯವನ್ನು ಹಾತೊರೆಯುವ ಮನಸ್ಥಿತಿಯನ್ನು ಅನಾವರಣಗೊಳಿಸುತ್ತದೆ. ಆಸ್ಪತ್ರೆಯ ಒಬ್ಬ ಮಲಯಾಳಿ ವೈದ್ಯ ಪ್ರಭಾಳ ಬಗೆಗೆ ಮಧುರ ಭಾವವನ್ನು ಇರಿಸಿಕೊಂಡಿದ್ದರೂ, ಆಕೆಗೂ ಆತನ ಬಗೆಗೆ ಆಸ್ಥೆಯಿದ್ದರೂ, ಮುಂದುವರೆಯಲಾಗದ ಅಕೆಯ ಅತಂತ್ರತೆ ಬಹುಶಃ ನಮ್ಮ ದೇಶದ ಒಂದು ಸ್ತರದ ಮಹಿಳೆಯರ ಬಾಳನ್ನು ಧ್ವನಿಸುತ್ತದೆ ಎನ್ನಬಹುದು.
ಈ ಸಿನಿಮಾದ ಉತ್ತರಾರ್ಧದ ಕಥನ ರತ್ನಿಗಿರಿಯಲ್ಲಿ ಜರಗುತ್ತದೆ. ಸಮುದ್ರ ಕಿನಾರೆಯ ಪಾರ್ವತಿಯ ಕಡಿಮೆ ಸವಲತ್ತುಗಳಿರುವ ವಾಸಸ್ಥಾನ, ಅಲ್ಲಿನ ಪರಿಸರ, ಮೂವರು ಗೆಳತಿಯರಿಗೆ ಒಂದು ಬಗೆಯ ಬಿಡುಗಡೆಯನ್ನು ನೀಡುವ ವಾತಾವರಣವನ್ನು ಸೃಷ್ಟಿಸುತ್ತವೆ ಎನ್ನಬಹುದು. ಈ ಘಟ್ಟದ, ಸಿನಿಮಾದ ಮೂರನೇ ಅಂಕದಲ್ಲಿ, ಸಮುದ್ರದಲ್ಲಿ ಮುಳುಗಿದ ವ್ಯಕ್ತಿಯೊಬ್ಬನನ್ನು ಪ್ರಭಾ ತನ್ನ ವೈದ್ಯಕೀಯ ಕ್ಷಮತೆಯಿಂದ ರಕ್ಷಿಸುತ್ತಾಳೆ. ನಂತರ ತೋರಿಸಲಾಗಿರುವ ಒಂದು Magical Realism ನ ದೃಶ್ಯಕ್ಕೆ ಪೂರ್ವ ಕೊಂಡಿಯಿದ್ದರೂ, ಅದು ಬೇಕಿತ್ತಾ ಎಂಬ ಪ್ರಶ್ನೆ ಕೆಲವು ವೀಕ್ಷಕರಲ್ಲಿ ಮೂಡುವ ಸಾಧ್ಯತೆಯಿದೆ.
ಸಿನಿಮೆಟೊಗ್ರಫಿ, ಪಿಯಾನೊ ಮತ್ತು ಗಿಟಾರ್ ವಾದನಗಳ ಹಿನ್ನೆಲೆ ಸಂಗೀತ, ತೆಳುನೀಲಿ ಬಣ್ಣದ ಹೆಚ್ಚಿನ ಬಳಕೆ ಇತ್ಯಾದಿ ಈ ಸಿನಿಮಾದ ಮೂಡ್‌ಗೆ ತಕ್ಕಂತಿವೆ. ಭಾವಾತಿರೇಕವಿಲ್ಲದ ಕನಿ ಕುಸ್ರುತಿಯವರ ನಟನೆ ಗಮನಾರ್ಹವಾಗಿದೆ. ಅನು ಪಾತ್ರದಲ್ಲಿ ದಿವ್ಯ ಪ್ರಭಾ ತಮ್ಮ ಕಂಗಳ ಮೂಲಕವೂ ಭಾವಗಳನ್ನು ಅಭಿವ್ಯಕ್ತಿಸಿದ್ದಾರೆ! ಛಾಯಾ ಕದಮ್ ಮತ್ತು ಹೃದೂ ಹರೂನ್ ಹಿತಮಿತವಾಗಿ ನಟಿಸಿದ್ದಾರೆ. ಪಾತ್ರಗಳ ಕಣ್ಣುಗಳು ಸೇರಿದಂತೆ ಇತರೆಡೆ ಕೂಡ ಬೆಳಕು ಬಿಂಬಿಸಲ್ಪಟ್ಟಿರುವುದರಿಂದ ಅದೂ ಕೂಡ ಒಂದು ಪಾತ್ರವಾಗಿದೆ ಎಂದು ಹೇಳಬಹುದು.
ಒಂದು ಮಂದ(ತುಸು) ಗತಿಯ, ಭಾವಗೀತಾತ್ಮಕ ಹಾಗೂ ಚಿಂತನಶೀಲ ಸಿನಿಮಾವನ್ನು ಪಾಯಲ್ ಕಪಾಡಿಯಾ ನೀಡಿದ್ದಾರೆ. ಇದು ಅವರ ನಂತರದ ಸಿನಿಮಾಗಳ ಬಗೆಗೆ ನಿರೀಕ್ಷೆಗಳನ್ನು ಮೂಡಿಸುತ್ತದೆ.
ಮಹಿಳೆಯರು ಪ್ರಧಾನ ಭೂಮಿಕೆಯಲ್ಲಿ ಇದ್ದಾಕ್ಷಣ, ಒಂದು ಸಿನಿಮಾವನ್ನು ʼ ಮಹಿಳಾ ಕೇಂದ್ರಿತ ʼ ಎಂದು ಕರೆಯಲಾಗುವುದಿಲ್ಲ. ಕಥನ, ನಿರೂಪಣೆ, ಪಾತ್ರಕಟ್ಟೋಣ, ಸಿನಿಮಾ ಡಿವೈಸಸ್ ಮುಂತಾದುವುಗಳನ್ನು ಹೇಗೆ ಬಳಸಿ ಮಹಿಳಾ ಕಣ್ಣೋಟವನ್ನು ದಾಟಿಸಲಾಗಿದೆ ಎಂಬುದರ ಮೇಲೆ ಈ ವರ್ಗೀಕರಣವನ್ನು ಸಿನಿಮಾ ವಿಮರ್ಶಕರು ಮತ್ತು ವಿದ್ವಾಂಸರು ಗುರುತಿಸುತ್ತಾರೆ. ಈ ಹಿನ್ನೆಲೆಯಲ್ಲಿ ʼಆಲ್ ವಿ ಇಮೆಜಿನ್ ಯಾಸ್ ಲೈಟ್ ʼಸಿನಿಮಾ ಮಹಿಳಾ ಕಣ್ಣೋಟದ ಸಿನಿಮಾ ಎಂದು ಪರಿಗಣಿಸಬಹುದು.
ಮ ಶ್ರೀ ಮುರಳಿ ಕೃಷ್ಣ
ಈ ಸುದ್ದಿ ಓದಿದ್ದೀರಾ?- ಲೈಂಗಿಕ ದೌರ್ಜನ್ಯ; ಕೊನೆಗೂ POSH COMMITTEE ರಚಿಸಿದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ