ಬೆಳಗಾವಿ: ಹಿಂದುಳಿದ ಹಾಗೂ ಪರಿಶಿಷ್ಟ ನಾಯಕರು ತನ್ನ ಬೆನ್ನಿಗೆ ನಿಲ್ಲಬೇಕು ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ವಿಜಯೇಂದ್ರ ಅವರು ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಸಕ ರಮೇಶ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ. ವಿಜಯೇಂದ್ರ ಅವರ ಜತೆಯಲ್ಲಿರುವವರು ಬಹುತೇಕ ನಾಯಕರು ಹಿಂದುಳಿದ ಸಮುದಾಯದವರೇ ಹೊರತು ಲಿಂಗಾಯತ, ಒಕ್ಕಲಿಗರು ಅಲ್ಲ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಮಾತನಾಡಿದ ಅವರು,ರಾಜ್ಯಾಧ್ಯಕ್ಷ ಸ್ಥಾನ ನಿಭಾಯಿಸುವ ಸಾಮರ್ಥ್ಯ ವಿಜಯೇಂದ್ರಗೆ ಇಲ್ಲ. ಅವರನ್ನು ಬದಲಾವಣೆ ಮಾಡಲೇಬೇಕು ಎಂದು ಮತ್ತೊಮ್ಮೆ ಅವರು ಆಗ್ರಹಪಡಿಸಿದರು.
ಬಿ.ಎಸ್.ಯಡಿಯೂರಪ್ಪ ಅವರು ಹುಟ್ಟು ಹೋರಾಟಗಾರ. ವಿಜಯೇಂದ್ರ ಯಡಿಯೂರಪ್ಪ ಅವರ ಕಾಲಿನ ಧೂಳಿಗೂ ಸಮವಲ್ಲ. ಜೀನ್ಸ್ ಪ್ಯಾಂಟ್ ಟೀಶರ್ಟು ಹಾಕಿಕೊಂಡು ಓಡಾಡುವ ವಯಸ್ಸು ಅವರದ್ದು. ಪಾಪ ಅವರಿಗೆ ರಾಜಕೀಯ ಗೊತ್ತಿಲ್ಲ. ಉತ್ತಮ ಭವಿಷ್ಯವಿದೆ. ಈಗ ಪದವಿ ತ್ಯಾಗ ಮಾಡಲಿ ಎಂದೂ ವ್ಯಂಗ್ಯವಾಡಿದರು. ಬಿಜೆಪಿಯ ಶೇ 70ರಷ್ಟು ಶಾಸಕರು ನನ್ನ ಸ್ನೇಹಿತರಾಗಿದ್ದಾರೆ. ಆದರೆ, ಮುಕ್ತವಾಗಿ ಅಭಿಪ್ರಾಯವನ್ನು ಹೇಳಲು ಅವರಿಗೆ ಆಗುತ್ತಿಲ್ಲ. ಈ ಹೋರಾಟದಿಂದ ಹಿಂದೆ ಸರಿಯಿರಿ ಎಂದು ಎಲ್ಲ ಶಾಸಕರು ನಮಗೆ ಹೇಳಿದರೆ ನಾವೂ ಹಿಂದೆ ಸರಿಯುತ್ತೇವೆ ಎಂದೂ ಪ್ರತಿಕ್ರಿಯಿಸಿದರು.
ಬಸನಗೌಡ ಪಾಟೀಲ ಯತ್ನಾಳ ಅಥವಾ ನನ್ನನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಮಾಡಬೇಡಿ. ನಾವು ಆ ಸ್ಥಾನದ ಆಕಾಂಕ್ಷಿಗಳೂ ಅಲ್ಲ. ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾದ ಅಧ್ಯಕ್ಷ ನಮಗೆ ಬೇಕಾಗಿಲ್ಲ. ಎಲ್ಲರನ್ನೂ ಸಮಾನವಾಗಿ ತೆಗೆದುಕೊಂಡು ಹೋಗುವ ಅಧ್ಯಕ್ಷ ಬೇಕು. ಯಾರಿಗೆ ಆ ಹುದ್ದೆ ಕೊಡಬೇಕು ಎಂದು ನಾನು ಬಹಿರಂಗವಾಗಿ ಹೇಳಿಲ್ಲ. ಪಕ್ಷದ ಆಂತರಿಕ ಸಭೆಯಲ್ಲಿ ಕೇಳಿದರೆ ನನ್ನ ಅಭಿಪ್ರಾಯ ಹೇಳುತ್ತೇನೆ ಎಂದರು.
ಯತ್ನಾಳ ಅವರಿಗೆ ಬಿಜೆಪಿ ಶಿಸ್ತು ಪಾಲನಾ ಸಮಿತಿ ಎರಡು ದಿನಗಳ ಹಿಂದೆಯೇ ಷೋಕಾಸ್ ನೋಟಿಸ್ ನೀಡಿದೆ. ಯತ್ನಾಳ ಅವರು ಇನ್ನೂ ಅದನ್ನು ಪಡೆದಿಲ್ಲ. ನಾವೆಲ್ಲರೂ ಯತ್ನಾಳ ಅವರ ಬೆನ್ನಿಗೆ ನಿಲ್ಲುತ್ತೇವೆ. ನೋಟಿಸ್ಗೆ ತಕ್ಕ ಉತ್ತರ ಕೊಡುವ ಜತೆಗೆ, ಕೇಂದ್ರ ನಾಯಕರ ಮನವೊಲಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಯತ್ನಾಳ ಅವರು ಹೈಕಮಾಂಡ್ ಮಾತು ಧಿಕ್ಕರಿಸಿದ್ದಾರೆ ಎನ್ನುವುದು ಶುದ್ಧ ಸುಳ್ಳು, ಹೈಕಮಾಂಡ್ ಆಹ್ವಾನದ ಮೇರೆಗೆ ಅವರು ದೆಹಲಿಗೆ ಹೋಗಿದ್ದಾರೆ ಎಂದು ಹೇಳಿದರು.