ಸಿಂಗಪುರ: ಈ ಸುದ್ದಿ ಕೇವಲ ಮಹಿಳೆಯರಿಗೆ ಮಾತ್ರವಲ್ಲ, ಅವರನ್ನು ಚಿನ್ನಾಭರಣ ಮಳಿಗೆಗಳಿಗೆ ಕರೆದೊಯ್ಯವವರಿಗೂ ಸಂತೋಷ ಕೊಡುವ ಸುದ್ದಿ. ಸಿಂಗಪುರದಲ್ಲಿ ಚಿನ್ನದ ಸರ ಖರೀದಿಸಿದ ಭಾರತ ಮೂಲದ ವ್ಯಕ್ತಿಯೊಬ್ಬರು ಒಂದೇ ದಿನದಲ್ಲಿ ಕೋಟ್ಯಧಿಪತಿಯಾಗಿ ಗಮನ ಸೆಳೆದಿದ್ದಾರೆ. ಇವರು ಲಕ್ಕಿ ಡ್ರಾದಲ್ಲಿ 1 ಮಿಲಿಯನ್ ಅಮೆರಿಕನ್ ಡಾಲರ್ (8 ಕೋಟಿ ರೂ.ಗೂ ಹೆಚ್ಚು) ಮೊತ್ತದ ಬೃಹತ್ ಬಹುಮಾನವನ್ನು ಗೆದ್ದಿದ್ದಾರೆ.
ಸಿಂಗಪುರದಲ್ಲಿ 21 ವರ್ಷದಿಂದ ಕೆಲಸ ಮಾಡುತ್ತಿರುವ ಎಂಜಿನಿಯರ್ ಬಾಲಸುಬ್ರಮಣಿಯನ್ ಚಿದಂಬರಂ ಮುಸ್ತಫಾ ಜ್ಯುವೆಲ್ಲರಿಯಲ್ಲಿ ತಮ್ಮ ಪತ್ನಿಗಾಗಿ ಚಿನ್ನದ ಆಭರಣಗಳನ್ನು ಖರೀದಿಸಿದ್ದರು. ಗ್ರಾಹಕರಿಗಾಗಿ ನಡೆದ ಲಕ್ಕಿ ಡ್ರಾದಲ್ಲಿ ಮೊದಲ ಬಹುಮಾನ ಇವರ ಪಾಲಿಗೆ ಲಭಿಸಿದೆ. ಇದು ಅವರ ಬದುಕಿನ ದಿಕ್ಕನ್ನೇ ಬದಲಿಸಿದೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಮುಸ್ತಫಾ ಜ್ಯುವೆಲ್ಲರಿ ಅಂಗಡಿಯ ವಾರ್ಷಿಕ ಕಾರ್ಯಕ್ರಮದ ಭಾಗವಾಗಿ, ಆಭರಣ ಖರೀದಿಸಿದವರಿಗೆ ಲಕ್ಕಿ ಡ್ರಾ ಮೂಲಕ ಬಹುಮಾನ ಘೋಷಿಸಲಾಗಿತ್ತು. ಟೆಸ್ಸೆನ್ಸಾನ್ನ ಸಿವಿಲ್ ಸರ್ವೀಸ್ ಕ್ಲಬ್ನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಭರಣ ಅಂಗಡಿಯಲ್ಲಿ ಕನಿಷ್ಠ 250 ಡಾಲರ್ ಮೌಲ್ಯದ ಒಡವೆ ಖರೀದಿಸಿದವರು ಈ ಲಕ್ಕಿ ಡ್ರಾದಲ್ಲಿ ಪಾಲ್ಗೊಳ್ಳಲು ಅರ್ಹರಾಗಿದ್ದರು. ಲಿಟ್ಲ್ ಇಂಡಿಯಾದಲ್ಲಿರುವ ಈ ಶಾಪ್ ಗೆ ಹೋಗಿದ್ದ ಬಾಲಸುಬ್ರಮಣಿಯನ್ ಚಿದಂಬರಂ, ತಮ್ಮ ಪತ್ನಿಗಾಗಿ 6,000 ಡಾಲರ್ ಮೌಲ್ಯದ ಚಿನ್ನದ ಸರಗಳನ್ನು ಖರೀದಿ ಮಾಡಿದ್ದರು. ಪತ್ನಿಗೆ ಖರ್ಚು ಮಾಡಿದ ಹಣದ ಸಾವಿರಾರು ಪಟ್ಟು ಲಾಭ ಅವರಿಗೆ ದೊರೆತಿದೆ.
ಇಂದು ನನ್ನ ತಂದೆಯ ನಾಲ್ಕನೆಯ ಪುಣ್ಯತಿಥಿಯೂ ಹೌದು. ಇದು ಈ ದಿನ ದೊರೆತ ಆಶೀರ್ವಾದ ಎಂದು ಅವರು ಸಂಭ್ರಮದ ಕಣ್ಣೀರಿಟ್ಟಿದ್ದಾರೆ. ತಮ್ಮ ಅದೃಷ್ಟದ ಬಾಗಿಲು ತೆರೆದ ಈ ಶುಭ ಸುದ್ದಿಯನ್ನು ತಾಯಿಯ ಜತೆ ಹಂಚಿಕೊಳ್ಳಲು ಬಯಸಿದ್ದೇನೆ. ಈ ಬಹುಮಾನದ ಒಂದು ಭಾಗವನ್ನು ಸಮುದಾಯಕ್ಕೆ ದಾನ ನೀಡಲು ಬಯಸಿರುವುದಾಗಿ ಅವರು ತಿಳಿಸಿದ್ದಾರೆ.