ವಾರಣಾಸಿ ರೈಲು ನಿಲ್ದಾಣದಲ್ಲಿ ಭಾರೀ ಅಗ್ನಿ ಅವಘಡ; 200 ವಾಹನಗಳು ಸುಟ್ಟು ಭಸ್ಮ

Most read

ವಾರಣಾಸಿ: ಶುಕ್ರವಾರ ತಡರಾತ್ರಿ ಉತ್ತರ ಪ್ರದೇಶದ ವಾರಣಾಸಿಯ ಕ್ಯಾಂಟ್ ರೈಲು ನಿಲ್ದಾಣದ ವಾಹನ ನಿಲುಗಡೆ ಪ್ರದೇಶದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿದೆ. ವೇಗವಾಗಿ ಬೆಂಕಿ ಹರಡಿದ್ದರಿಂದ ಕನಿಷ್ಠ 200 ದ್ವಿಚಕ್ರ ವಾಹನಗಳು ಸುಟ್ಟು ಭಸ್ಮವಾಗಿವೆ ಎಂದು ತಿಳಿದು ಬಂದಿದೆ.

ಬೆಂಕಿಯನ್ನು ನಂದಿಸಲು ಅಗ್ನಿಶಾಮಕ ದಳ ಮತ್ತು ಪೊಲೀಸ್ ಇಲಾಖೆ ಹರಸಾಹಸ ಪಡುತ್ತಿವೆ. ಭಾರೀ ಬೆಂಕಿ ಮತ್ತು ಹೊಗೆ ಆವರಿಸಿಕೊಂಡಿರುವುದರಿಂದ ಸ್ಪಷ್ಟವಾಗಿ ದೃಶ್ಯಗಳು ಗೋಚರಿಸುತ್ತಿಲ್ಲ. ಸುಮಾರು 12 ಅಗ್ನಿಶಾಮಕ ದಳದ ವಾಹನಗಳು ಬೆಂಕಿಯನ್ನು ನಂದಿಸಲು ಪ್ರಯತ್ನಿಸುತ್ತಿವೆ. ಸರ್ಕಾರಿ ರೈಲ್ವೆ ಪೊಲೀಸ್, ರೈಲ್ವೇ ಪ್ರೊಟೆಕ್ಷನ್ ಫೋರ್ಸ್ ಮತ್ತು ಸ್ಥಳೀಯ ಪೊಲೀಸ್ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿವೆ. ಪ್ರಾಥಮಿಕ ತನಿಖೆಗಳ ಪ್ರಕಾರ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ ಎನ್ನಲಾಗುತ್ತಿದೆ.

ಭಾರಿ ಸಂಕ್ಯೆಯಲ್ಲಿ ಸೈಕಲ್‌ಗಳು ಸುಟ್ಟು ಹೋಗಿವೆ. ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಕಾಣಿಸಿಕೊಂಡಿದೆ. ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಸಿಒ ಜಿಆರ್‌ಪಿ ಕುನ್ವರ್ ಬಹದ್ದೂರ್ ಸಿಂಗ್ ಹೇಳಿದ್ದಾರೆ. ಬೆಂಕಿ ಅನಾಹುತದಲ್ಲಿ ಸುಟ್ಟು ಕರಕಲಾದ ಬಹುತೇಕ ದ್ವಿಚಕ್ರ ವಾಹನಗಳು ರೈಲ್ವೆ ನೌಕರರಿಗೆ ಸೇರಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

More articles

Latest article