ಬೆಂಗಳೂರು: ರಾಜ್ಯದಲ್ಲಿ ಮಕ್ಕಳ ಆರೋಗ್ಯ, ಶಿಕ್ಷಣ, ಸುರಕ್ಷತೆಗೆ ಸರ್ಕಾರ ವಿಶೇಷ ಕಾಳಜಿ ವಹಿಸಿದ್ದು, ಮಕ್ಕಳ ಸರ್ವತೋಮುಖ ಅಭಿವೃದ್ಧಿಗಾಗಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತರಲಾಗುತ್ತಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತಿಳಿಸಿದ್ದಾರೆ. ನಗರದ ಜವಾಹರ ಬಾಲ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಆಯೋಜಿಸಿದ್ದ ಮಕ್ಕಳ ದಿನಾಚರಣೆ- 2024 ಹಾಗೂ ಮಕ್ಕಳಿಗೆ ಶೌರ್ಯ ಪ್ರಶಸ್ತಿ, ಮಕ್ಕಳ ಕಲ್ಯಾಣ ಕ್ಷೇತ್ರದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದ ಸಂಸ್ಥೆಗಳಿಗೆ ಮತ್ತು ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿದ ನಂತರ ಸಚಿವರು ಮಾತನಾಡಿದರು.
ಮಕ್ಕಳ ಹಕ್ಕುಗಳಿಗೆ ಚ್ಯುತಿ ಬರದಂತೆ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲಾಖೆಯ ಮೂಲಕ ಮಕ್ಕಳಿಗಾಗಿಯೇ ಹತ್ತು ಹಲವು ಕೈಗೊಳ್ಳಲು ಸರ್ಕಾರ ಮುಂದಾಗಿದೆ. ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಿದೆ. ಈಗಾಗಲೇ ಅಂಗನವಾಡಿ ಕೇಂದ್ರಗಳನ್ನು ಸರ್ಕಾರಿ ಮಾಂಟೆಸ್ಸರಿಗಳನ್ನಾಗಿ ಮೇಲ್ದರ್ಜೇರಿಸಲಾಗಿದೆ ಎಂದು ತಿಳಿಸಿದರು.
ಮಕ್ಕಳು ಎಂದರೇ ಒಂದು ರೀತಿ ಚಂಚಲ. ಮಕ್ಕಳೆಂದರೆ ಎಲ್ಲರಿಗೂ ಪ್ರೀತಿ. ಸ್ವತಂತ್ರ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರ ಲಾಲ ನೆಹರು ಮಕ್ಕಳ ಮೇಲೆ ವಿಶೇಷವಾದ ಪ್ರೀತಿ, ಕಾಳಜಿ ಹೊಂದಿದ್ದರು. ಇಂದಿನ ಮಕ್ಕಳು ನಾಡಿನ, ದೇಶದ ಶಕ್ತಿ ಮತ್ತು ಭವಿಷ್ಯ ಎಂದು ಭಾವಿಸಿದ್ದರು. ಭಾರತ 75 ವರ್ಷಗಳ ಹಿಂದೆ ಹೇಗಿತ್ತು, ಜನರ ಪರಿಸ್ಥಿತಿ ಹೇಗಿತ್ತು ಅಂದಿನ ಶಿಕ್ಷಣ ಹೇಗಿತ್ತು ಎನ್ನುವುದನ್ನು ಊಹಿಸಲೂ ಆಗದು. ಅತ್ಯಂತ ಬಡತನದ ಪರಿಸ್ಥಿತಿ ಇತ್ತು. ಆಗ ದೇಶದ ಜನಸಂಖ್ಯೆ ಕೇವಲ 35 ಕೋಟಿ. ಆದರೆ, ಈಗ ದೇಶದ 135 ಕೋಟಿಗಿಂತಲೂ ಹೆಚ್ಚಿದೆ. ಇಷ್ಟೊಂದು ಜನಸಂಖ್ಯೆ ಇದ್ದರೂ ಭಾರತ ಈಗ ವಿಶ್ವದ ಹಿರಿಯಣ್ಣನಾಗುವ ಎಲ್ಲ ಲಕ್ಷಣಗಳು ನಮ್ಮ ದೇಶಕ್ಕಿದೆ. ಇದು ಹೇಗೆ ಸಾಧ್ಯವಾಯಿತು ಎನ್ನುವುದನ್ನು ಮಕ್ಕಳು ಅರ್ಥ ಮಾಡಿಕೊಳ್ಳಬೇಕು. ಅಂದಿನ ಮಕ್ಕಳೇ ಹಿರಿಯ ನಾಗರಿಕರಾಗಿ ದೇಶವನ್ನು ಈ ಸ್ಥಿತಿಗೆ ತಂದಿದ್ದಾರೆ ಎಂದರು.
ಶಿವಾಜಿನಗರ ಶಾಸಕ ರಿಜ್ವಾನ್ ಹರ್ಷದ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಲ್ಯಾಣ ಸಮಿತಿ ಅಧ್ಯಕ್ಷ ಹಾಗೂ ಶಾಸಕ ಎನ್. ಎಚ್. ಕೋನರೆಡ್ಡಿ, ಸಮಿತಿಯ ಸದಸ್ಯರು ಮತ್ತು ಶಾಸಕರಾದ ಕೊತ್ತನೂರು ಮಂಜುನಾಥ್, ಮಂಜುಳಾ ಅರವಿಂದ ಲಿಂಬಾವಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಪದ್ಮಾವತಿ, ಬಾಲಭವನದ ಅಧ್ಯಕ್ಷ ಬಿ.ಆರ್. ನಾಯ್ಡು, ಧಾರವಾಡ ಬಾಲ ವಿಕಾಸ ಅಕಾಡೆಮಿ ಅಧ್ಯಕ್ಷ ಸಂಗಮೇಶ ಬಬಲೇಶ್ವರ, ಮಕ್ಕಳ ಹಕ್ಕುಗಳ ಆಯೋಗದ ಅಧ್ಯಕ್ಷ ನಾಗನಗೌಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಡಾ. ಶಾಮ್ಲಾ ಇಕ್ಬಾಲ್, ಇಲಾಖಾ ನಿರ್ದೇಶಕರಾದ ಸಿದ್ದೇಶ್ವರ, ಜಂಟಿ ನಿರ್ದೇಶಕ ಬಿ.ಎಚ್. ನಿಶ್ಚಲ್ ಮತ್ತಿತರರು ಉಪಸ್ಥಿತರಿದ್ದರು.