ಬೆಂಗಳೂರು: ಅತಿ ಹೆಚ್ಚು ವಾಹನಗಳು ಓಡಾಡುವ ನಗರ ಪ್ರದೇಶದಲ್ಲಿ ಬಿದಿರು ಬೆಳೆಸಿದರೆ ಇಂಗಾಲದ ಹೊರಸೂಸುವಿಕೆಯಿಂದ ಆಗಬಹುದಾದ ದುಷ್ಪರಿಣಾಮ ತಡೆಯಬಹುದು. ಈ ನಿಟ್ಟಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿದಿರು ಬೆಳೆಸುವ ಅಗತ್ಯವಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಪ್ರತಿಪಾದಿಸಿದ್ದಾರೆ.
ಬೆಂಗಳೂರಿನಲ್ಲಿಂದು ದೇಶದ ಮೊಟ್ಟ ಮೊದಲ ಬ್ಯಾಂಬೂ ಗ್ಯಾಲರಿ ಉದ್ಘಾಟಿಸಿ ಮಾತನಾಡಿದ ಅವರು, ಬಿದಿರು ಹೆಚ್ಚಿನ ಪ್ರಮಾಣದಲ್ಲಿ ಇಂಗಾಲ ಹೀರಿಕೊಳ್ಳುವುದಲ್ಲದೆ, ಅತಿ ಹೆಚ್ಚು ಆಮ್ಲಜನಕ ಹೊರ ಸೂಸುತ್ತದೆ. ಇದರಿಂದ ನಗರವಾಸಿಗಳಿಗೆ ಪ್ರಾಣವಾಯು ಲಭಿಸುತ್ತದೆ ಎಂದರು.
ಬಿದಿರು ಅರಣ್ಯದ ಒಂದು ಅಪೂರ್ವ ಸಂಪತ್ತು. ಹುಲ್ಲಿನ ಜಾತಿಗೆ ಸೇರಿದ ಬಿದಿರು, ಆನೆಗಳಿಗೆ ಪ್ರಿಯವಾದ ಆಹಾರವೂ ಆಗಿದೆ. ಕಾಡಿನಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಿದಿರು ಬೆಳೆಸಿದರೆ ಅದು ನೈಸರ್ಗಿಕ ಬ್ಯಾರಿಕೇಡ್ ನಂತೆ ಕಾರ್ಯನಿರ್ವಹಿಸುತ್ತದೆ. ಜೊತೆಗೆ ವನ್ಯಜೀವಿಗಳು ನಾಡಿಗೆ ಬರುವುದನ್ನೂ ತಡೆಯುತ್ತವೆ ಎಂದು ಈಶ್ವರ ಖಂಡ್ರೆ ಅಭಿಪ್ರಾಯಪಟ್ಟರು.
ಬಿದಿರು ಮತ್ತು ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ. ಧಾನ್ಯ ಕೇರುವ ಮೊರ, ಬಾಗಿನ ನೀಡುವ ಮೊರ, ದಿನಬಳಕೆ ವಸ್ತುಗಳನ್ನು ತುಂಬಿಡುವ ಬಿದಿರಿನ ಬುಟ್ಟಿಗಳು, ಕುಕ್ಕೆಗಳು, ಭತ್ತ ತುಂಬಿಡುತ್ತಿದ್ದ ಪಣತ, ಮಕ್ಕಳನ್ನು ಮಲಗಿಸಲು ಬಳಸುತ್ತಿದ್ದ ತೊಟ್ಟಿಲು, ಮನೆಯಲ್ಲಿ ಬಳಸುತ್ತಿದ್ದ ಏಣಿ ಇದೆಲ್ಲವೂ ಬಿದಿರಿನಿಂದ ಮಾಡಿದ ವಸ್ತುಗಳೇ ಆಗಿರುತ್ತಿದ್ದವು. ಈಗ ಅದಕ್ಕೆ ಆಧುನಿಕ ಸ್ಪರ್ಶ ಲಭಿಸಿದೆ ಎಂದರು.
ಬಿದಿರಿನಿಂದ ತಯಾರಿಸಿದ ಕುರ್ಚಿ, ಮೇಜು, ಬೈಸಿಕಲ್ ಸೇರಿದಂತೆ ಪೀಠೋಪಕರಣ ಮತ್ತು ಅಲಂಕಾರಿಕ ವಸ್ತುಗಳನ್ನು ವೀಕ್ಷಿಸಿದ ಅವರು, ಬಿದಿರು ಬಳಸಿ ತಯಾರಿಸಿದ ಸೈಕಲ್ ಸವಾರಿ ಮಾಡಿ ಎಲ್ಲರ ಗಮನ ಸೆಳೆದರು.
ಬ್ಯಾಂಬೂ ಸೊಸೈಟಿಯ ಮುಖ್ಯಸ್ಥ ನಿವೃತ್ತ ಐ.ಎಫ್.ಎಸ್. ಅಧಿಕಾರಿ ಪೊನ್ನಾಟಿ ಶ್ರೀಧರ್ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.