ರಾಜ್ಯಗಳ ನೆಲ, ಜಲ, ಸಂಪತ್ತುಗಳನ್ನು ಬಳಸಿಕೊಂಡು ಕಾರ್ಯನಿರ್ವಹಿಸುತ್ತಿರುವ ಕೇಂದ್ರೋದ್ಯಮಗಳಲ್ಲಿ ಖಾಲಿ ಇರುವ ಕೆಳವರ್ಗದ ಹುದ್ದೆಗಳನ್ನು ನಾಲ್ಕು ವರ್ಷಗಳ ಸೀಮಿತ ಅವಧಿಯ ಉದ್ಯೋಗಗಳೆಂದು ಹೆಸರಿಸಿ ನೇಮಕಾತಿ ಮಾಡಿಕೊಳ್ಳುವ ಕೇಂದ್ರದ ನೀತಿ ಸ್ಥಳೀಯರಿಗೆ ಮಾರಕವಾಗಿದೆ. ರಾಜ್ಯಗಳ ಯುವ ನಿರುದ್ಯೋಗಿಗಳಿಗೆ ಇಲ್ಲಿನ ಕೇಂದ್ರೋದ್ಯಮಗಳಲ್ಲಿ ಅವಕಾಶ ಕಲ್ಪಿಸದೇ ಹೋದಲ್ಲಿ ಭಾಷಾ ಸಮಸ್ಯೆಗಳು ಕ್ರಾಂತಿ ಸ್ವರೂಪದಲ್ಲಿ ಸ್ಪೋಟವಾಗುವ ದಿನಗಳು ದೂರವಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯಿಸಿದ್ದಾರೆ.
ಎಚ್.ಎ.ಎಲ್ ಸಂಸ್ಥೆಯಲ್ಲಿ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಭಾಷೆ ಸರ್ಕಾರದ ಆದೇಶಗಳಿಂದ ಉಳಿಯುವುದಿಲ್ಲ. ಆಡಳಿತ ವ್ಯವಸ್ಥೆಗಳು ಅದರ ಬಳಕೆಯನ್ನು ಪ್ರೋತ್ಸಾಹಿಸುವ ಮೂಲಕ ಮಾತ್ರ ಅದು ಸಾಂಸ್ಥಿಕ ಚೌಕಟ್ಟಿನಲ್ಲಿ ಉಳಿಯಲು ಸಾಧ್ಯ. ಎಚ್.ಎ.ಎಲ್ ಸಂಸ್ಥೆಯ ಆಡಳಿತ ವರ್ಗ ಕನ್ನಡ ಭಾಷೆಗೆ ತನ್ನ ಕಾರ್ಯವ್ಯಾಪ್ತಿಯಲ್ಲಿ ಇನ್ನಷ್ಟು ಗೌರವವನ್ನು ದೊರಕಿಸಿಕೊಡಬೇಕಾದ ಅವಶ್ಯಕವಿದೆ ಎಂದರು.
ಹೊರಗುತ್ತಿಗೆ ನೇಮಕಾತಿ ಸಂಸ್ಥೆ ಕರ್ನಾಟಕದ್ದಾಗಿರಲಿ:
ಸಂಸ್ಥೆಯ ನೌಕರರ ಉದ್ಯೋಗದ ನೇಮಕಾತಿಯಲ್ಲಿ ಗುತ್ತಿಗೆದಾರರು ಹೊರರಾಜ್ಯಗಳಿಗೆ ಸೇರಿದವರಾಗಿರುವುದು ವಿಷಾದನೀಯ ಸಂಗತಿಯಾಗಿದೆ ಎಂದ ಡಾ.ಬಿಳಿಮಲೆ, ಪರೀಕ್ಷಾರ್ಥಿಗಳಿಗೆ ಕೇವಲ ಹಿಂದಿ ಮತ್ತು ಆಂಗ್ಲ ಭಾಷೆಯ ಲಿಖಿತ ಪರೀಕ್ಷೆಯನ್ನು ನಡೆಸುವ ಮೂಲಕ ಎಚ್.ಎ.ಎಲ್ ಸಂಸ್ಥೆಯು ಸ್ಥಳೀಯ ಪ್ರತಿಭೆಗಳಿಗೆ ಅನ್ಯಾಯ ಉಂಟು ಮಾಡಿರುವುದು ಖಂಡನೀಯವಾಗಿದೆ. ಮುಂದಿನ ದಿನಗಳಲ್ಲಿ ಈ ರೀತಿಯಾದಲ್ಲಿ ಗಂಭೀರ ಕ್ರಮಕ್ಕೆ ಪ್ರಾಧಿಕಾರವು ಆಲೋಚಿಸಬೇಕಾಗುತ್ತದೆ. ಲಿಖಿತ ಪರೀಕ್ಷೆಗಳನ್ನು ಕನ್ನಡದಲ್ಲಿ ಬರೆಯಲು ಅವಕಾಶ ಕಲ್ಪಿಸುವುದಲ್ಲದೇ ನೇಮಕಾತಿ ಸಂಸ್ಥೆಯು ಕರ್ನಾಟಕ ರಾಜ್ಯದಲ್ಲಿ ಕಾರ್ಯನಿರ್ವಹಿಸುವ ಸಂಸ್ಥೆಯಾಗಿರಬೇಕು. ಇದನ್ನು ಷರತ್ತು ನಿಬಂಧನೆಗಳಲ್ಲಿ ಪೂರ್ವಭಾವಿಯಾಗಿ ಅಳವಡಿಸಿಕೊಳ್ಳಬೇಕೆಂದು ಎಚ್.ಎ.ಎಲ್ ಸಂಸ್ಥೆಯ ಅಧಿಕಾರಿಗಳಿಗೆ ಸೂಚಿಸಿದರು.
ನಾಲ್ವಡಿ ಕೃಷ್ಣರಾಜ ಒಡೆಯರ್ ರವರು ಮಂಜೂರು ಮಾಡಿದ ಜಮೀನಿನಲ್ಲಿ ನೆಲೆ ಕಂಡಿರುವ ಎಚ್.ಎ.ಎಲ್. ಸಂಸ್ಥೆಯು ತನ್ನ ಕನ್ನಡ ಪ್ರೇಮವನ್ನು ರುಜುವಾತು ಮಾಡಬೇಕಾದಲ್ಲಿ ಕೂಡಲೇ ಸಂಸ್ಥೆಯ ಆವರಣದಲ್ಲಿ ಅವರ ಹೆಸರಿನ ಕನ್ನಡ ಭವನ ನಿರ್ಮಾಣಕ್ಕೆ ಅವಕಾಶ ಕಲ್ಪಿಸಬೇಕು ಎಂದು ಅಧಿಕಾರಿಗಳಿಗೆ ಆಗ್ರಹಿಸಿದ ಡಾ.ಬಿಳಿಮಲೆ, 2018ರಲ್ಲಿಯೇ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಈ ಕುರಿತು ಸ್ಪಷ್ಟ ಸೂಚನೆಗಳನ್ನು ನೀಡಿದ್ದರೂ ಇಲ್ಲಿಯವರೆಗೆ ಯಾವುದೇ ಕ್ರಿಯಾಶೀಲ ಬೆಳವಣಿಗೆ ಆಗದಿರುವುದು ವಿಷಾದನೀಯ ಸಂಗತಿ ಎಂದರು.
ಸಮರ್ಪಕವಾಗಿ ಕನ್ನಡ ಅನುಷ್ಠಾನ ಮಾಡಿ:
ಸಂಸ್ಥೆಯ ಅಂತರ್ಜಾಲ ತಾಣದಲ್ಲಿ ಇಂದಿಗೂ ಕನ್ನಡಕ್ಕೆ ಆದ್ಯತೆ ಇಲ್ಲ, ಸಂಸ್ಥೆಯ ಲಾಂಛನದಲ್ಲಿ ಕನ್ನಡವನ್ನು ಅಳವಡಿಸಿಲ್ಲ, ತ್ರಿಭಾಷಾ ಸೂತ್ರಕ್ಕೆ ಈ ರೀತಿ ಗೌರವಿಸುವುದು ಸರಿಯಾದ ವಿಧಾನವಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದ ಡಾ.ಬಿಳಿಮಲೆ, ಕನ್ನಡಿಗರು ಉದ್ಯೋಗಕ್ಕೆ ಬರುತ್ತಿಲ್ಲವೆನ್ನುವ ಅಧಿಕಾರಿಗಳ ಮಾತು ಒಪ್ಪದ ಸಂಗತಿಯಾಗಿದ್ದು, ಇದಕ್ಕೆ ಬೇಕಾದ ಪ್ರಚಾರ ಕೆಲಸಗಳನ್ನು ಸಮರ್ಪಕವಾಗಿ ನಿರ್ವಹಿಸಿದರೆ ಪ್ರತಿಭಾನ್ವಿತರು ಖಂಡಿತ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುತ್ತಾರೆ ಎಂದರು. ಈ ರೀತಿಯ ಕನ್ನಡ ವಿರೋಧಿ ಧೋರಣೆ ಮುಂದುವರೆದಲ್ಲಿ ಸೂಕ್ತ ಕ್ರಮಕ್ಕಾಗಿ ಕೇಂದ್ರ ಸರ್ಕಾರವನ್ನು ಆಗ್ರಹಿಸಲಾಗುವುದು ಎಂದ ಬಿಳಿಮಲೆ, ಈ ಕುರಿತಂತೆ ಶೀಘ್ರದಲ್ಲಿ ಕೇಂದ್ರದ ಕನ್ನಡಿಗ ಸಚಿವರ ಗಮನವನ್ನು ಸಹ ಸೆಳೆಯಲಾಗುವುದು ಎಂದರು. ಯಾವುದೇ ಸಂದರ್ಭದಲ್ಲಿಯೂ ಅಧಿಕಾರಿಗಳು ಕೇಂದ್ರ ಸರ್ಕಾರ ಮಾತ್ರ ಶ್ರೇಷ್ಠ ಮತ್ತು ರಾಜ್ಯಗಳು ಕನಿಷ್ಠ ಎಂಬ ಭಾವನೆಯನ್ನು ಬಿಡಬೇಕೆಂದು ಕಿವಿಮಾತು ಹೇಳಿದರು.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿಯವರಾದ ಡಾ.ಸಂತೋಷ ಹಾನಗಲ್ಲ ರವರು ಹಿಂದಿನ ಸಭೆಯಲ್ಲಿ ತೆಗೆದುಕೊಂಡ ತೀರ್ಮಾನಗಳ ಕುರಿತಂತೆ ಎಚ್.ಎ.ಎಲ್ ಸಂಸ್ಥೆಯ ಅಸಮರ್ಪಕ ಅನುಷ್ಠಾನದ ಬಗ್ಗೆ ವಿವರಣೆ ನೀಡಿದರು. ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದ ಡಾ.ವಿ.ಪಿ.ನಿರಂಜನಾರಾಧ್ಯ ಹಾಗೂ ಟಿ.ತಿಮ್ಮೇಶ್, ಎಚ್.ಎ.ಎಲ್ ನ ಅಧಿಕಾರಿಗಳು, ಎಚ್.ಎ.ಎಲ್ ಕೇಂದ್ರೀಯ ಕನ್ನಡ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.