ನಕ್ಸಲ್‌ ಸಮಸ್ಯೆ ನಿಗ್ರಹಕ್ಕೆ ಆದಿವಾಸಿಗಳ ಸಮಸ್ಯೆಗಳಿಗೆ ಪರಿಹಾರ ರೂಪಿಸಬೇಕು; ಬಂಜಗೆರೆ ಜಯಪ್ರಕಾಶ್‌ ಆಗ್ರಹ

Most read

ಬೆಂಗಳೂರು; ಇತ್ತೀಚೆಗೆ ಪೊಲೀಸರ ಎನ್‌ ಕೌಂಟರ್‌ ಗೆ ಬಲಿಯಾದ ನಕ್ಸಲ್‌ ಹೋರಾಟಗಾರ ವಿಕ್ರಂ ಗೌಡ ಹತ್ಯೆ ಪ್ರಕರಣದಲ್ಲಿ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮಾರ್ಗಸೂಚಿಗಳಂತೆ ತನಿಖೆ ನಡೆಸಬೇಕು ಎಂದು ನಕ್ಸಲ್ ಶರಣಾಗತಿ ಮತ್ತು ಪುನರ್ವಸತಿ ಸಮಿತಿ ಒತ್ತಾಯಿಸಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿ ಸದಸ್ಯರಾದ ಬಂಜಗೆರೆ ಜಯಪ್ರಕಾಶ್, ಪಾರ್ವತೀಶ ಬಿಳಿದಾಳೆ ಮತ್ತು ಶ್ರೀಪಾಲ್ ಮಾತನಾಡಿದರು.
ಬಂಜಗೆರೆ ಜಯಪ್ರಕಾಶ್ ಮಾತನಾಡಿ ಇಷ್ಟು ವರ್ಷಗಳ ಕಾಲದಲ್ಲಿ ಆದಿವಾಸಿಗಳಿಗೆ ಮೂಲಸೌಕರ್ಯ ಮಾಡಲು ಸರ್ಕಾರ ಸೂಕ್ತ ಕ್ರಮ ಕೈಗೊಂಡಿಲ್ಲ. ಅರಣ್ಯ ಇಲಾಖೆ ಮತ್ತು ಪೊಲೀಸರಿಂದ ತೊಂದರೆ ಆಗುತ್ತಿರುವ ಬಗ್ಗೆ ಆದಿವಾಸಿಗಳು ದೂರಿದ್ದಾರೆ. ಅಲ್ಲಿ ರಸ್ತೆ, ವಿದ್ಯುಚ್ಚಕ್ತಿಯಂತ ಮೂಲಭೂತ ಸೌಕರ್ಯಗಳು ಇಲ್ಲವಾಗಿದೆ. ಈ ಕೊರತೆಗಳ ಲಾಭ ಪಡೆಯುವ ಕೆಲವು ತೀವ್ರಗಾಮಿಗಳು ಅಲ್ಲಲ್ಲಿ ಸಂಚರಿಸುತ್ತಿರಬಹುದು. ಆದ್ದರಿಂದ ಸರ್ಕಾರ ಆದಿವಾಸಿಗಳ ಸಮಸ್ಯೆಗಳನ್ನು ಆಲಿಸಬೇಕು. ಸರ್ಕಾರದ ನಿರ್ಲಕ್ಷ್ಯ ಅಥವಾ ನಿಧಾನಗತಿಯ ಕ್ರಮಗಳು ಬೇರೆ ಸ್ವರೂಪ ಪಡೆದುಕೊಂಡು ಹೋರಾಟಗಾರರಿಗೆ ಜನ್ಮಕೊಡುತ್ತಿವೆ. ಅಂತಹ ಹೋರಾಟಗಳನ್ನು ಹತ್ತಿಕ್ಕಲು ಸರ್ಕಾರಗಳಿಗೆ ಸಮಸ್ಯೆ ಉಂಟಾಗುತ್ತಿದೆ ಎಂದರು.
ಚಳವಳಿಯಿಂದ ಯಾರೇ ಹೊರಗೆ ಬಂದರೆ ಪ್ರಕರಣಗಳನ್ನು ಹಿಂಪಡೆಯಲು ಅವಕಾಶವಿಲ್ಲ, ಕಾನೂನು ಪ್ರಕಾರವೇ ಅಂತಹ ಪ್ರಕರಣಗಳ ವಿಚಾರಣೆ ನಡೆಯಬೇಕಾಗುತ್ತದೆ. ಹಾಗಾಗಿ ಪ್ರಕರಣಗಳನ್ನು ಶೀಘ್ರವಾಗಿ ಇತ್ಯರ್ಥಗೊಳ್ಳುವ ರೀತಿಯಲ್ಲಿ ಸಮಿತಿ ಪ್ರಯತ್ನ ನಡೆಸುತ್ತಿದೆ ಎಂದು ಸಮಿತಿ ಸದಸ್ಯ ಪಾರ್ವತೀಶ್ ಬಿಳಿದಾಳೆ ತಿಳಿಸಿದರು.
ಸಮಿತಿಯ ಮತ್ತೊಬ್ಬ ಸದಸ್ಯ ಶ್ರೀಪಾಲ್ ಮಾತನಾಡಿ ಕಳೆದ 23 ರಂದು ಈ ಸಮಿತಿಯ ವತಿಯಿಂದ ಪೀತಬೈಲು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಭೇಟಿ ನೀಡಿ ಆದಿವಾಸಿಗಳು ಮತ್ತು ಅಧಿಕಾರಿಗಳೊಂದಿಗೆ ಚರ್ಚೆ ನಡೆಸುತ್ತಾ ಬಂದಿದ್ದೇವೆ. ಇಲ್ಲಿ ನಕ್ಸಲ್ ಚಳವಳಿ ಹುಟ್ಟಿದ ಮೇಲೆ ಸೋಲಾರ್ ವ್ಯವಸ್ಥೆ ಮಾಡಲಾಗಿದೆ. ಆದರೆ ಇತರೆ ಯಾವುದೇ ಸೌಲಭ್ಯಗಳು ಅಥವಾ ಯೋಜನೆಗಳ ಪ್ರಯೋಜನ ಆದಿವಾಸಿಗಳನ್ನು ತಲುಪುತ್ತಿಲ್ಲ. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವ ಹುಡುಗರ ಮೇಲೆ ಪ್ರಕರಣ ದಾಖಲಿಸಿ ಕಿರುಕುಳ ಕೊಡಲಾಗುತ್ತಿದೆ ಎಂದು ಆಪಾದಿಸಿದರು.
ಕರ್ನಾಟಕದ ನಾಲ್ಕೈದು ಮಂದಿ ಮಾತ್ರ ನಕ್ಸಲ್ ಚಳವಳಿಯಲ್ಲಿ ತೊಡಗಿಸಿಕೊಂಡಿರಬಹುದು. ಇವರು ಮುಖ್ಯವಾಹಿನಿಗೆ ಬರಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವರು ಹೋರಾಟ ಮುಂದುವರಿಸಬೇಕು. ಅವರು ಸರ್ಕಾರದ ಪ್ಯಾಕೇಜ್ ಒಪ್ಪಿಕೊಂಡು ಬಂದರೆ ನಿಯಮಾನುಸಾರ ತಲುಪಿಸುವ ಕೆಲಸವನ್ನು ನಮ್ಮ ಸಮಿತಿ ಮಾಡುತ್ತದೆ. ಹಾಗೆಯೇ ಚಳವಳಿಯಿಂದ ಹೊರ ಬಂದವರ ಮೇಲಿನ ಪ್ರಕರಣಗಳನ್ನು ತ್ವರಿತವಾಗಿ ಇತ್ಯರ್ಥ ಗೊಳಿಸಲು ತ್ವರಿತಗತಿ ನ್ಯಾಯಾಲಯಗಳನ್ನು ರಚಿಸಲು ಸರ್ಕಾರವನ್ನು ಆಗ್ರಹಪಡಿಸುತ್ತೇವೆ ಎಂದರು.
ಪಶ್ಚಿಮ ಘಟ್ಟದ ವಿವಿಧ ಪ್ರದೇಶಗಳಲ್ಲಿ ನೆಲೆಸಿರುವ ಮಲೆಕುಡಿಯ, ಗೌಡ್ರು, ಕೊರಗ ಮುಂತಾದ ಅದಿವಾಸಿಗಳು ನೆಲೆಸಿದ್ದಾರೆ. ಸಣ್ಣ ಪ್ರಮಾಣದ ಕೃಷಿ ಹಾಗೂ ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಮಾರಾಟದಿಂದ ಈ ಸಮುದಾಯಗಳ ಜೀವನ ನಿರ್ವಹಣೆಯಾಗುತ್ತಿದೆ. ಇತ್ತೀಚಿನ ಅರಣ್ಯ ರಕ್ಷಣೆ ಉದ್ದೇಶದ ನಿಯಮಗಳು, ಡಾ. ಕಸ್ತೂರಿ ರಂಗನ್ ವರದಿಯ ಶಿಫಾರಸು, ರಾಷ್ಟ್ರೀಯ ರಕ್ಷಿತಾರಣ್ಯಗಳ ರಚನೆ ಮೊದಲಾದ ಬೆಳವಣಿಗೆಗಳು ಈ ಆದಿವಾಸಿ ಸಮುದಾಯಗಳಲ್ಲಿ ಆತಂಕ ಉಂಟುಮಾಡುತ್ತಿದೆ. ಈ ಆದಿವಾಸಿಗಳ ಅಸ್ತಿತ್ವವೇ ಹೊಸ ಅರಣ್ಯ ರಕ್ಷಣೆ ಕಾಯ್ದೆ ಜಾರಿಗಿರುವ ತೊಡಕು ಎಂಬ ಭಾವನೆ ಮೂಡಿದೆ. ಆದಿವಾಸಿಗಳಿಗೂ ಇದೇ ಆತಂಕ ಉಂಟಾಗಿದೆ. ಈ ಆತಂಕವನ್ನು ನಿವಾರಿಸುವ ಕೆಲಸವನ್ನು ಸರ್ಕಾರ ಮಾಡಬೇಕಿದೆ ಎಂದು ಸಮಿತಿ ತಿಳಿಸಿದೆ.
ಆದಿವಾಸಿಗಳ ಪರಿಸರ ಜ್ಞಾನ, ಅನುಭವಗಳನ್ನೇ ಅರಣ್ಯ ರಕ್ಷಣೆಯ ಪ್ರಕ್ರಿಯೆಯ ಭಾಗವಾಗಿಸುವ ವಿಧಾನಗಳನ್ನು ಶೋಧಿಸಿ, ಅಳವಡಿಸುವ ಮೂಲಕ ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಬೇಕಿದೆ. ಅರಣ್ಯ ಉತ್ಪನ್ನಗಳ ಸಂಗ್ರಹಕ್ಕೆ ಇರುವ ನಿಯಮದ ಅವಕಾಶಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪರಿಗಣಿಸಬೇಕು, ಆದಿವಾಸಿಗಳಿಗೆ ಕಾಯ್ದೆಯ ಹೆಸರಲ್ಲಿ ಕಿರುಕುಳ ನೀಡುವುದು, ಭಾರಿ ಮೊತ್ತದ ದಂಡ ವಿಧಿಸುವ ವಿಧಾನಗಳನ್ನು ಬಿಡಬೇಕು ಎಂದು ಸಮಿತಿ ಸದಸ್ಯರು ಆಗ್ರಹಪಡಿಸಿದ್ದಾರೆ.
ಗಿರಿಜನ ಆದಿವಾಸಿಗಳ ಸಹಕಾರಿ ಸಂಸ್ಥೆಯೊಂದನ್ನು ಸ್ಥಾಪಿಸುವ ಮೂಲಕ ಅರಣ್ಯ ಉತ್ಪನ್ನಗಳ ಸಂಗ್ರಹ ಮತ್ತು ಮಾರಾಟವನ್ನು ಆದಿವಾಸಿಗಳ ಬದುಕಿನ ಆದಾಯ ಗಳಿಸುವ ಒಂದು ಕ್ರಮ ಎಂದು ಸರ್ಕಾರ ಪರಿಗಣಿಸಬೇಕು. ನೆರೆಯ ಆಂಧ್ರಪ್ರದೇಶ ಮತ್ತು ತೆಲಂಗಾಣ ಸರ್ಕಾರಗಳು ಈಗಾಗಲೆ ಇಂತಹ ಸಂಘಗಳನ್ನು ಸ್ಥಾಪಿಸಿವೆ. ಅರಣ್ಯದೊಳಗೆ ವಾಸಿಸುವ ರೈತರು ಮತ್ತು ಆದಿವಾಸಿಗಳ ನೆಲೆಗಳಲ್ಲಿ ಕನಿಷ್ಠ ತಿಂಗಳಿಗೆ ಎರಡು ಬಾರಿ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಅಗತ್ಯ ಔಷಧಗಳನ್ನು ಉಚಿತವಾಗಿ ಒದಗಿಸಬೇಕು. ಆರಣ್ಯ ಪ್ರದೇಶದ ಆದಿವಾಸಿಗಳ ನೆಲೆಗಳಲ್ಲಿ ನರೇಗಾ ಮೊದಲಾದ ಯೋಜನೆಗಳ ಅನುಷ್ಠಾನಕ್ಕೆ ಇರುವ ತಾಂತ್ರಿಕ ತೊಡಕುಗಳ ನಿವಾರಣೆಗೆ ಪ್ರಯತ್ನ ನಡೆಸಬೇಕು ಎಂದು ಸಲಹೆ ನೀಡಿದ್ದಾರೆ.
ಅರಣ್ಯ ಹಕ್ಕು ಕಾಯಿದೆಯನ್ನು ಇನ್ನಷ್ಟು ಸರಳಗೊಳಿಸಿ ಆದಿವಾಸಿಗಳಿಗೆ ಭೂಮಿ ಹಕ್ಕು ನೀಡುವ ಬಗ್ಗೆ ಪರಿಶೀಲಿಸಬೇಕು. ಪ್ರತಿ ಎರಡು ತಿಂಗಳಿಗೊಮ್ಮೆಯಾದರೂ ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು, ಆದಿವಾಸಿಗಳು ನೆಲೆಸಿರುವ ಸ್ಥಳಕ್ಕೆ ಹತ್ತಿರದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಬೇಕು ಎಂದು ಅವರು ಮನವಿ ಮಾಡಿಕೊಂಡರು. ಮಾವೋವಾದಿ ಹೋರಾಟಗಾರರು ಮುಖ್ಯವಾಹಿನಿಗೆ ಬರಬೇಕೆಂದು ಮತ್ತೆ ಮನವಿ ಮಾಡುತ್ತೇವೆ ಎಂದೂ ಸಮಿತಿ ಸದಸ್ಯರು ತಿಳಿಸಿದರು.
ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಕಾರ್ಯಚರಿಸುತ್ತಿದ್ದಾರೆ ಎನ್ನಲಾಗಿರುವ ನಿಷೇದಿತ ಸಂಘಟನೆ ಮಾವೋವಾದಿ ಪಕ್ಷದ ಕಾರ್ಯಕರ್ತರನ್ನು ಮನವೊಲಿಸಿ ಮುಖ್ಯ ವಾಹಿನಿಗೆ ಕರೆತರುವ ಉದ್ದೇಶದಿಂದ ನಕ್ಸಲ್ ಶರಣಾಗತಿ ಹಾಗೂ ಪುನರ್ವಸತಿ ಸಮಿತಿಯನ್ನು ರಚಿಸಲಾಗಿದೆ. ಇತ್ತೀಚೆಗೆ ಸಂಭವಿಸಿರುವ ನಕ್ಸಲ್ ಕೂಡ್ಲು ವಿಕ್ರಂ ಗೌಡ ಎನ್‌ ಕೌಂಟರ್‌ ಹಾಗೂ ಇತರ ಘಟನೆಗಳ ಹಿನ್ನೆಲೆಯಲ್ಲಿ ಸಮಿತಿಯು 23-11-2024 ರಂದು ಹೆಬ್ರಿ ತಾಲ್ಲೂಕಿನ ಹಲವು ಸ್ಥಳಗಳಿಗೆ ಭೇಟಿ ನೀಡಿತ್ತು.

More articles

Latest article