ಬೆಳಗಾವಿ : ಮಹಿಳಾ ವಿಶ್ವವಿದ್ಯಾಲಯದ ಕಾರ್ಯಕ್ರಮದ ನಿಮಿತ್ಯ ಬುಧವಾರ ವಿಜಯಪುರಕ್ಕೆ ಆಗಮಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಬೆಳಗಾವಿಗೆ ವಾಪಸ್ ಆಗುವಾಗ ಆಕಸ್ಮಾತಾಗಿ ಕಣ್ಣಿಗೆ ಕಾಣಿಸಿದ ನಿರ್ಗತಿಕ ಕುಟುಂಬವೊಂದಕ್ಕೆ ನೆರವು ನೀಡುವ ಮೂಲಕ ಮಾನವೀಯತೆ ತೋರಿಸಿದ್ದಾರೆ.
ಕಾರ್ಯಕ್ರಮ ಮುಗಿಸಿ ಮರಳುವಾಗ ವಿಜಯಪುರ – ಬಾಗಲಕೋಟೆ ಹೆದ್ದಾರಿಯ ಪಕ್ಕ ಹನಗನಹಳ್ಳಿ ಎಂಬಲ್ಲಿ ರಸ್ತೆ ಪಕ್ಕದಲ್ಲಿ ಊಟಕ್ಕೆಂದು ಸಚಿವರು ವಾಹನ ನಿಲ್ಲಿಸಿದರು. ಊಟ ಮಾಡುವಾಗ ಪಕ್ಕದಲ್ಲಿದ್ದ ಸಣ್ಣ ಮನೆಯ ಮುಂದೆ ಅಜ್ಜಿಯೊಬ್ಬಳು ಬಾಟಲಿಗಳಲ್ಲಿ ನೀರು ತುಂಬಿಸಿ ಮನೆಯ ಮುಂದೆ ಇಡುತ್ತಿದ್ದಳು. ಆ ಬಗ್ಗೆ ವಿಚಾರಿಸಿದಾಗ ರಸ್ತೆಯಲ್ಲಿ ಹೋಗುವ ಜನರು ನೀರು ಕುಡಿಯಲು ಬರುತ್ತಾರೆ. ಅವರಿಗೆ ಸಹಾಯವಾಗಲೆಂದು ಬಾಟಲಿಗಳಲ್ಲಿ ನೀರು ತುಂಬಿ ಇಡುವುದಾಗಿ ತಿಳಿಸಿದಳು.
ಹಾಗೆ ಮಾತನಾಡುತ್ತ ಗೌರಮ್ಮ ವಾಡೇದ ಎಂಬ ಅಜ್ಜಿ ಹಾಗೂ ಜೊತೆಗಿದ್ದ ಮಲ್ಲು ಎನ್ನುವ ಹೆಸರಿನ ಅವಳ ಮಗನ ಕುರಿತು ವಿಚಾರಿಸಿದಾಗ, ಅವರು ಹಳ್ಳಿಯಲ್ಲಿ ಹೊಂದಿದ್ದ ಮನೆಯ ಜಾಗ ರಸ್ತೆ ಮಾಡುವಾಗ ಕೈ ತಪ್ಪಿದೆ. ಇದರಿಂದಾಗಿ ವಾಸಿಸಲು ಮನೆಯೇ ಇರಲಿಲ್ಲ. ನಂತರ ಈ ಸ್ಥಳದಲ್ಲಿದ್ದ ತೋಟದ ಮಾಲೀಕರು ಒಂದು ಕೊಠಡಿಯಲ್ಲಿ ವಾಸಿಸಲು ಅವಕಾಶ ನೀಡಿದರು. ಆದರೆ ಅಡುಗೆ ಮಾಡಲು ಪಾತ್ರೆ, ಹಾಸಿಗೆ ಹೊದಿಕೆ, ಆಹಾರ ಪದಾರ್ಥಗಳಿಲ್ಲದೆ ಪರದಾಡುತ್ತಿದ್ದಾರೆ ಎನ್ನುವುದು ತಿಳಿದು ಬಂದಿತ್ತು. ಅವರು ಈ ಮೊದಲು ಹೊಂದಿದ್ದ ಪಡಿತರ ಕಾರ್ಡ್ ಕೂಡ ಕಳೆದುಹೋಗಿದ್ದರಿಂದ ಸರಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ ಎನ್ನುವುದು ಕೂಡ ತಿಳಿಯಿತು.
ಕೂಡಲೇ ಸಚಿವರು ಹಣ ಸಹಾಯ ಮಾಡಿ ಶೀಘ್ರ ರೇಶನ್ ಕಾರ್ಡ್ ಮತ್ತು ಗೃಹಲಕ್ಷ್ಮೀ ಯೋಜನೆಯ ಹಣ ಬರುವಂತೆ ಮಾಡುವುದಾಗಿ ಭರವಸೆ ನೀಡಿದರು. ಸ್ಥಳದಿಂದಲೇ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ವೇಳೆ ಮಾತನಾಡಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್, ಇಂತಹವರಿಗಾಗಿಯೇ ಸರಕಾರ ಗೃಹಲಕ್ಷ್ಮೀ, ಅನ್ನಭಾಗ್ಯ ಸೇರಿದಂತೆ ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಯೋಜನೆಗಳು ಯಾರಿಗೆ ತಲುಪಿಲ್ಲವೋ ಅವರಿಗೆ ತಲುಪಿಸುವುದು ನಮ್ಮ ಕರ್ತವ್ಯ ಎಂದು ಹೇಳಿದರು.
ಅವಸರದ ಪ್ರವಾಸದ ಮಧ್ಯೆಯೂ ಸಚಿವರು ಸಮಯ ನೀಡಿ ಇಂತಹ ನಿರ್ಗತಿಕ ಕುಟುಂಬಕ್ಕೆ ನೆರವು ನೀಡಲು ಮುಂದಾಗಿರುವುದು ಎಲ್ಲರ ಪ್ರಶಂಸೆಗೆ ಕಾರಣವಾಗಿದೆ.