ಗೌತಮ್ ಅದಾನಿ ಬಂಧಿಸಲು ರಾಹುಲ್‌ ಗಾಂಧಿ ಆಗ್ರಹ

Most read

 ನವದೆಹಲಿ: ಲಂಚ ಹಾಗೂ ವಂಚನೆ ಆರೋಪ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಉದ್ಯಮಿ ಗೌತಮ್ ಅದಾನಿ ಅವರನ್ನು ಕೂಡಲೇ ಬಂಧಿಸಬೇಕು ಎಂದು ಲೋಕಸಭೆ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ನವದೆಹಲಿಯಲ್ಲಿ ಸಂಸತ್ತಿನ ಆವರಣದಲ್ಲಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರವು ಅದಾನಿಗೆ ರಕ್ಷಣೆಯನ್ನು ಒದಗಿಸುತ್ತಿದೆ. ದೇಶದಲ್ಲಿ ಸಣ್ಣ ಸಣ್ಣ ಆರೋಪಗಳ ಮೇಲೆ ನೂರಾರು ಜನರನ್ನು ಬಂಧಿಸಿ ಜೈಲಿಗೆ ಕಳುಹಿಸಲಾಗುತ್ತಿದೆ. ಆದರೆ  ಅದಾನಿಯನ್ನು ಮಾತ್ರ ಜೈಲಿಗೆ ಏಕೆ ಕಳುಹಿಸುತ್ತಿಲ್ಲ ಎಂದು ಪ್ರಧಾನಿ ಮೋದಿ ಅವರನ್ನು ಪ್ರಶ್ನಿಸಿದ್ದಾರೆ.

ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ, ಅವರ ಅಣ್ಣನ ಮಗ ಸಾಗರ್ ಅದಾನಿ ವಿರುದ್ಧ ಅಮೆರಿಕದ ಅಧಿಕಾರಿಗಳು ನ್ಯಾಯಾಲಯದಲ್ಲಿ ಸಲ್ಲಿಸಿದ ದೋಷಾರೋಪಣೆಯಲ್ಲಿ ವಿದೇಶಿ ಭ್ರಷ್ಟಾಚಾರ ಪದ್ಧತಿ ಕಾಯ್ದೆಯ (ಎಫ್‌ಸಿಪಿಎ) ಉಲ್ಲಂಘನೆಯ ಆರೋಪ ಹೊರಿಸಿಲ್ಲ ಎಂದು ಅದಾನಿ ಸಮೂಹ ಹೇಳಿಕೆಯ ಬೆನ್ನಲ್ಲೇ ಅದಾನಿ ಬಂಧನಕ್ಕೆ ರಾಹುಲ್ ಆಗ್ರಹಪಡಿಸಿದ್ದಾರೆ. ಅದಾನಿ ಸಮೂಹ ಆರೋಪಗಳನ್ನು ನಿರಾಕರಿಸಿರುವ ಪ್ರಶ್ನೆಗೆ  ಉತ್ತರಿಸಿದ ರಾಹುಲ್‌ ಮೇಲಿನ ಆರೋಪಗಳನ್ನು ಅದಾನಿ ಒಪ್ಪಿಕೊಳ್ಳುತ್ತಾರೆ ಎಂದು ನೀವು ಭಾವಿಸುತ್ತೀರಾ? ನೀವು ಯಾವ ಜಗತ್ತಿನಲ್ಲಿ ಇದ್ದೀರಿ? ನಿಸ್ಸಂಶಯವಾಗಿಯೂ ಅವರು ಆರೋಪಗಳನ್ನು ನಿರಾಕರಿಸುತ್ತಾರೆ ಎಂದು ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ಮುಖ್ಯ ವಿಷಯ ಏನೆಂದರೆ ಅದಾನಿಯನ್ನು ಕೂಡಲೇ ಬಂಧಿಸಬೇಕು. ನಾನು ಹೇಳಿದಂತೆ ದೇಶದಲ್ಲಿ ಸಣ್ಣ ಪುಟ್ಟ ಆರೋಪದ ಮೇಲೆ ನೂರಾರು ನಾಗರೀಕರನ್ನು ಬಂಧಿಸಲಾಗುತ್ತಿದೆ. ಆದರೆ ಸಾವಿರಾರು ಕೋಟಿ ಪ್ರಕರಣದಲ್ಲಿ ಅದಾನಿ ಮೇಲೆ ದೋಷಾರೋಪಣೆ ಮಾಡಲಾಗಿದೆ. ಅವರನ್ನು ಜೈಲಿಗೆ ಕಳುಹಿಸಬೇಕು. ಆದರೆ ಸರ್ಕಾರ ಅವರಿಗೆ ರಕ್ಷಣೆ ನೀಡುತ್ತಿದೆ ಎಂದು ಆರೋಪಿಸಿದ್ದಾರೆ.

More articles

Latest article