ಸಿಡ್ನಿ: 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣದಲ್ಲಿ ಖಾತೆಯನ್ನು ನಿಷೇಧಗೊಳಿಸುವ ಮಸೂದೆಗೆ ಅಸ್ಟ್ರೇಲಿಯಾದ ಜನಪ್ರತಿನಿಧಿಗಳ ಸಭೆ ಮುದ್ರೆಯೊತ್ತಿದೆ.
ಪ್ರಮುಖ ಜಾಲತಾಣಗಳಾದ ಟಿಕ್‌ಟಾಕ್, ಫೇಸ್‌ಬುಕ್, ಸ್ನ್ಯಾಪ್‌ಚಾಟ್, ರೆಡ್ಡಿಟ್, ಎಕ್ಸ್ ಮತ್ತು ಇನ್ ಸ್ಟಾಗ್ರಾಮ್ ಮುಂತಾದವುಗಳು ತಮ್ಮ ಜಾಲತಾಣದಲ್ಲಿ ಚಿಕ್ಕ ಮಕ್ಕಳು ಖಾತೆಗಳನ್ನು ಹೊಂದುವುದನ್ನು ನಿಷೇಧಿಸುವುದನ್ನು ಕಡ್ಡಾಯಗೊಳಿಸಲಾಗಿದೆ. ಈ ನಿಯಮವನ್ನು ಉಲ್ಲಂಘಿಸಿದಲ್ಲಿ ಜಾಲತಾಣಗಳು 50 ಮಿಲಿಯನ್ ಆಸ್ಟ್ರೇಲಿಯನ್ ಡಾಲರ್‌ಗಳವರೆಗೆ ($ 33 ಮಿಲಿಯನ್) ದಂಡ ತೆರಬೇಕಿದೆ. ಜನಪ್ರತಿನಿಧಿಗಳ ಸಭೆಯು ಈ ಮಸೂದೆಯನ್ನು ಅಂಗೀಕರಿಸಲು ಸೆನೆಟ್‌ಗೆ ವರ್ಗಾಯಿಸಿದೆ.
ಜಾಲತಾಣಗಳಿಗೆ ವಯಸ್ಸಿನ ನಿರ್ಬಂಧವನ್ನು ಹೇಗೆ ಕಾರ್ಯಾಚರಣೆಗೆ ತರಬೇಕೆಂದು ಖಚಿತಪಡಿಸಲು ಒಂದು ವರ್ಷಗಳ ಕಾಲಾವಕಾಶವನ್ನು ನೀಡಲಾಗುತ್ತದೆ ಎಂದು ಜನ ಪ್ರತಿನಿಧಿಗಳ ಸಭೆಯು ಹೇಳಿದೆ. ಈ ಮಸೂದೆ ಕುರಿತು ಸೆನೆಟ್ ಚರ್ಚಿಸಲಿದೆ ಎಂದು ಸಂವಹನ ಸಚಿವ ಮಿಚೆಲ್ ರೋಲ್ಯಾಂಡ್ ಹೇಳಿದ್ದಾರೆ. ನಿಷೇಧವು ಮಕ್ಕಳನ್ನು ಪ್ರತ್ಯೇಕಿಸುತ್ತದೆ, ಸಾಮಾಜಿಕ ಮಾಧ್ಯಮದ ಸಕಾರಾತ್ಮಕ ಅಂಶಗಳಿಂದ ವಂಚಿತರನ್ನಾಗಿಸುತ್ತದೆ ಎಂದು ಕಲವು ತಜ್ಞರು ವಾದಿಸುತ್ತಿದ್ದಾರೆ. ಆಧುನಿಕತೆ ಹೆಚ್ಚಾಗುತ್ತಾ ಹೋದಂತೆ ಜನರು ಹೊಸ ಹೊಸ ತಂತ್ರಜ್ಞಾನಕ್ಕೆ ತೆರೆದುಕೊಳ್ಳುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆಯೂ ಅಧಿಕವಾಗಿದ್ದು, ಮಕ್ಕಳು ಆನ್ ಲೈನ್ ಪೋರ್ಟಲ್ ನಲ್ಲಿ ಹೆಚ್ಚು ಸಮಯ ಕಳೆಯುತ್ತಿದ್ದಾರೆ ಎಂದು ಜನಪ್ರತಿನಿಧಿಗಳ ಸಭೆಯು ಅಭಿಪ್ರಾಯಪಟ್ಟಿದೆ.
ಇತ್ತೀಚೆಗಿನ ದಿನಗಳಲ್ಲಿ ಮಕ್ಕಳು ಅತಿಯಾಗಿ ಮೊಬೈಲ್ ಬಳಕೆ ಮಾಡುತ್ತಿದ್ದಾರೆ. ಈ ಸಾಮಾಜಿಕ ಜಾಲತಾಣಗಳು ಮಕ್ಕಳ ಆರೋಗ್ಯದ ಮೇಲೆ ಸಾಕಷ್ಟು ಪರಿಣಾಮಗಳನ್ನು ಬೀರುತ್ತಿದೆ. ಇದು ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಪೂರಕವಲ್ಲ ಎನ್ನುವುದು ಎಲ್ಲರಿಗೂ ತಿಳಿದಿದೆ. ಈ ಹಿನ್ನಲೆಯಲ್ಲಿ ಆಸ್ಟ್ರೇಲಿಯಾದಲ್ಲಿ ಇದೀಗ 16 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳ ಬಳಕೆ ಮಾಡುವುದನ್ನು ನಿಷೇಧಿಸಲಾಗುತ್ತಿದೆ. ಆಸ್ಟ್ರೇಲಿಯಾ ಪ್ರಧಾನಿ ಆ್ಯಂಟೋನಿ ಆಲ್ಬನೀಸ್ ಮಾತನಾಡಿ, 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಮಾಧ್ಯಮವನ್ನು ನಿಷೇಧಿಸಲು ಕಾನೂನು ರೂಪಿಸುತ್ತೇವೆ. ಈ ಹಿನ್ನಲೆಯಲ್ಲಿ ವಯಸ್ಸಿನ ಮಿತಿಯನ್ನು ಪರಿಶೀಲಿಸುತ್ತಿದ್ದೇವೆ. ಎಂದು ತಿಳಿಸಿದ್ದಾರೆ.
ಸಾಮಾಜಿಕ ಮಾಧ್ಯಮ ನಮ್ಮ ಮಕ್ಕಳಿಗೆ ಹಾನಿ ಮಾಡುತ್ತಿದೆ. ಇದರ ಅತಿಯಾದ ಬಳಕೆಯಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿದೆ. ಮೋಸ, ವಂಚನೆ ಸೇರಿದಂತೆ ಮಕ್ಕಳು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ. ಸಾಮಾಜಿಕ ಮಾಧ್ಯಮಗಳಿಂದ ಮಕ್ಕಳನ್ನು ದೂರವಿಡಲು ಈ ಮಸೂದೆಗೆ ಅಂಗೀಕಾರ ನೀಡಲಾಗಿದೆ. ಮಸೂದೆ ಅಂಗೀಕಾರಗೊಂಡ 12 ತಿಂಗಳ ನಂತರವೇ ಈ ಕಾನೂನು ಜಾರಿಗೆ ಬರಲಿದೆ ಎಂದು ಜನಪ್ರತಿನಿಧಿ ಸಭೆ ಮಾಹಿತಿ ನೀಡಿದೆ.