ಬೆಂಗಳೂರು: ಸಾಮಾಜಿಕ ಜಾಲತಾಣ ಫೇಸ್ ಬುಕ್ ನಲ್ಲಿ ಹಿಂದೂ ದೇವತೆಗಳನ್ನು ಕುರಿತು ಅಶ್ಲೀಲ ಪದ ಬಳಸಿ, ಅವಹೇಳನ ಮಾಡಿದ ವ್ಯಕ್ತಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಪದಾಧಿಕಾರಿಗಳು ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಈ ಸಂಬಂಧ ಆರೋಪಿ ವಿರುದ್ಧ ಎಫ್‌ಐಆರ್ದಾ ಖಲಿಸಿದ್ದಾರೆ. ಮಹಾಸಭಾದ ಉಪಾಧ್ಯಕ್ಷ ಬಿ.ಎಸ್.ರಾಘವೇಂದ್ರ ಭಟ್ ಎಂಬುವರು ನೀಡಿದ ದೂರಿನ ಆಧಾರದಲ್ಲಿ ಮಹಾಲಕ್ಷ್ಮಿ ಲೇಔಟ್ ಠಾಣೆ ಪೊಲೀಸರು ಅಂಜುಂ ಶೇಕ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಯ ಪತ್ತೆಗೆ ಬಲೆ ಬೀಸಿದ್ದಾರೆ.
ಫೇಸ್‌ಬುಕ್‌ನಲ್ಲಿ ಆರೋಪಿ ಅಂಜುಂ ಶೇಕ್ ಎಂಬಾತ ಗಣಪತಿ, ಕೊಲ್ಲೂರು ಮೂಕಾಂಬಿಕೆ, ಶೃಂಗೇರಿ ಶಾರದಾಂಬೆ, ತಿರುಪತಿ ತಿಮ್ಮಪ್ಪ, ಹೊರನಾಡು ಅನ್ನಪೂರ್ಣೇಶ್ವರಿ, ಕಟೀಲು ದುರ್ಗಾಪರಮೇಶ್ವರಿ ಕುರಿತು ಆಶ್ಲೀಲ ಪದ ಬಳಕೆ ಮಾಡಿದ್ದಾನೆ. ಇದರಿಂದ ಹಿಂದೂ ಸಮುದಾಯದ ಜನರ ಭಾವನೆಗಳಿಗೆ ಧಕ್ಕೆ ಉಂಟಾಗಿದೆ. ಈತ ಉದ್ದೇಶಪೂರ್ವಕವಾಗಿ ಎರಡೂ ಧರ್ಮಗಳ ನಡುವೆ ಕೋಮುಧ್ವೇಷ ಉಂಟು ಮಾಡುವ ದೃಷ್ಟಿಯಿಂದಲೇ ಈತ ಈ ರೀತಿ ಕೆಟ್ಟದಾಗಿ ಪ್ರತಿಕ್ರಿಯೆ ನೀಡಿದ್ದಾನೆ. ಆದ್ದರಿಂದ ಆರೋಪಿ ವಿರುದ್ಧ ಕಾನೂನೂ ಕ್ರಮ ಜರುಗಿಸಬೇಕೆಂದು ರಾಘವೇಂದ್ರ ಅವರು ದೂರಿನಲ್ಲಿ ಉಲ್ಲೇಖಿಸಿದ್ದಾರೆ.