ಬೀದರ್: ವಕ್ಸ್ ನೋಟಿಸ್ ಕುರಿತು ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೆಂದ್ ಅವರಿಗೆ ಸೆಡ್ಡು ಹೊಡೆದು ಪ್ರತ್ಯೇಕ ಹೋರಾಟ ಆರಂಭಿಸಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ ಯತ್ನಾಳ ನೇತೃತ್ವದ ತಂಡ ಸೋಮವಾರ ಬೀದರ್ ಜಿಲ್ಲೆಗೆ ಭೇಟಿ ನೀಡಿದೆ. ಆದರೆ, ಜಿಲ್ಲೆಯಲ್ಲಿ ನಾಲ್ವರು ಶಾಸಕರಿದ್ದರೂ ಯಾರೊಬ್ಬರೂ ಇವರ ಹೋರಾಟದತ್ತ ಮುಖ ಮಾಡಿಲ್ಲ. ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ ಅವರು ಇವರನ್ನು ಭೇಟಿ ಮಾಡಲೂ ಆಗಮಿಸಿಲ್ಲ. ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಹೊರತುಪಡಿಸಿ ಬಿಜೆಪಿಯ ಯಾವುದೇ ಮುಖಂಡರು ಬಂದಿಲ್ಲ. ನಗರ ಹೊರವಲಯದ ನರಸಿಂಹ ಝರಣಿ ದೇವಸ್ಥಾನಕ್ಕೆ ಭೇಟಿ ನೀಡಿದ ಯತ್ನಾಳ ತಂಡದ ಮುಖಂಡರು ವಿಶೇಷ ಪೂಜೆ ಸಲ್ಲಿಸಿದರು. ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ ಜಾರಕಿಹೊಳಿ, ಮಾಜಿ ಸಚಿವ ಅರವಿಂದ ಲಿಂಬಾವಳಿ, ಶಾಸಕ ಬಿ.ಪಿ. ಹರೀಶ್, ಮಾಜಿ ಶಾಸಕ ಕುಮಾರ ಬಂಗಾರಪ್ಪ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ, ಬಿಜೆಪಿ ಕಲಬುರಗಿ ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ಹಾಜರಿದ್ದರು. ಬೆಳಿಗ್ಗೆ 8.30ಕ್ಕೆ ನಿಗದಿಯಾಗಿದ್ದ ಯತ್ನಾಳ ತಂಡದ ಭೇಟಿ ಕಾರ್ಯಕ್ರಮ ನಿಗದಿತ ಅವಧಿಗಿಂತ ಎರಡು ಗಂಟೆ ತಡವಾಗಿ ಆರಂಭಗೊಂಡಿತು.
ಬಿಜೆಪಿ ಮುಖಂಡ ಅರವಿಂದ ಲಿಂಬಾವಳಿ ಮಾತನಾಡಿ, ವಕ್ಸ್ ವಿವಾದ ಬಗ್ಗೆ ಜನಜಾಗೃತಿ ಮೂಡಿಸುವ ಕೆಲಸ ಬೀದರ್ ಜಿಲ್ಲೆಯಿಂದ ಆರಂಭಿಸಿದ್ದೇವೆ. ಹಿಂದೂ, ಮುಸ್ಲಿಂ ಎಲ್ಲರ ಆಸ್ತಿಯಲ್ಲಿ ವಕ್ಸ್ ಆಸ್ತಿ ಎಂದು ದಾಖಲಿಸಿದ್ದಾರೆ. ವಾರ್ ರೂಂ ಮಾಡಿದ ನಂತರ ಸಾಕಷ್ಟು ಕರೆಗಳು ಬರುತ್ತಿವೆ. ವಕ್ಸ್ ವಿವಾದ ಗಮನಕ್ಕೆ ಬರುತ್ತಿದ್ದಂತೆ ಬಸನಗೌಡ ಪಾಟೀಲ ಯತ್ನಾಳ ಅವರು ವಿಜಯಪುರದಲ್ಲಿ ಹೋರಾಟ ನಡೆಸಿದರು. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಬೀದರ್ ತಾಲ್ಲೂಕಿನ ಚಟನಳ್ಳಿ, ಧರ್ಮಾಪೂರ ಗ್ರಾಮದ ರೈತರ ಆಸ್ತಿಯಲ್ಲಿ ವಕ್ಸ್ ಎಂದು ನಮೂದಾಗಿದೆ. ಅಲ್ಲಿಗೆ ಕೂಡ ಭೇಟಿ ನೀಡಿ ಮಾಹಿತಿ ಸಂಗ್ರಹಿಸುತ್ತೇವೆ ಎಂದು ಹೇಳಿದರು.