ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಂಘಟಿತ, ಕುತಂತ್ರದ ಅಪಪ್ರಚಾರ ಮಾಡಿದ ಎನ್‌ಡಿಸ ಮೈತ್ರಿಕೂಟಕ್ಕೆ ರಾಜ್ಯದ ಮತದಾರರು ಕಾಂಗ್ರೆಸ್‌ಗೆ ಜಯ ನೀಡುವ ಮೂಲಕ ಮುಖಭಂಗ ಮಾಡಿದ್ದಾರೆ ಎಂದು ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾದ ಎನ್ ಎಸ್ ಭೋಸರಾಜು ಪ್ರತಿಕ್ರಿಯಿಸಿದ್ದಾರೆ.
ಉಪ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನದಿಂದ ಬಿಜೆಪಿ ರಾಷ್ಟ್ರ ಮಟ್ಟದಲ್ಲಿ ತಳಮಳಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಬಿಜೆಪಿ ನಾಯಕರು ಗ್ಯಾರಂಟಿ ಯೋಜನೆಗಳು ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲೆ ಇಲ್ಲ ಸಲ್ಲದ ಆರೋಪಗಳನ್ನು ಹೋರಿಸಿದರು. ಪ್ರತಿ ಹೆಜ್ಜೆ ಹೆಜ್ಜೆಗೂ ಆರೋಪಗಳ ಮೇಲೆ, ಇಲ್ಲ ಸಲ್ಲದ ವಿಚಾರಗಳನ್ನು ಎತ್ತಿಕೊಂಡು ಅಪಪ್ರಚಾರ ನಡೆಸಿದರು. ಸ್ವಚ್ಚ ಹಾಗೂ ಪಾರದರ್ಶಕ ರಾಜಕೀಯ ಜೀವನ ನಡೆಸುತ್ತಿರುವ ಮುಖ್ಯಮಂತ್ರಿಗಳ ಮೇಲೆ ಆರೋಪಗಳನ್ನು ಮಾಡುವ ಮೂಲಕ ಸರಕಾರವನ್ನು ಹೀಗೆಳೆಯುವ ಕುತಂತ್ರವನ್ನು ಬಿಜೆಪಿ ಅನುಸರಿಸಿತು. ಈ ಎಲ್ಲಾ ಕುತಂತ್ರಗಳ ನಡುವೆ ಕೇವಲ ಅಭಿವೃದ್ದಿ ಹಾಗೂ ಜನಪರ ಕಾಳಜಿಯನ್ನು ಮುಂದಿಟ್ಟುಕೊಂಡು ಹೋದ ಕಾಂಗ್ರೆಸ್ ಪಕ್ಷಕ್ಕೆ ಮತದಾರರು ತಮ್ಮ ಆಶೀರ್ವಾದ ನೀಡಿದ್ದಾರೆ.
ಮೂರು ಕ್ಷೇತ್ರಗಳಲ್ಲೂ ಸಿದ್ದರಾಮಯ್ಯನವರು ಹಾಗೂ ಡಿಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ಸಚಿವರು ಹಾಗೂ ನಡೆಸಿದ ಸಂಘಟಿತ ಪ್ರಚಾರ ಹಾಗೂ ಕಾರ್ಯಕರ್ತರುಗಳ ಶ್ರಮದ ಫಲದಿಂದ ಮೂರು ಕ್ಷೇತ್ರಗಳನ್ನು ನಾವು ಗೆಲ್ಲುವಲ್ಲಿ ಸಫಲರಾಗಿದ್ದೇವೆ. ನಮ್ಮ ಸರಕಾರದ ಜನಪ್ರಿಯತೆಯನ್ನು ತೊಡೆದುಹಾಕುವ ಕುತಂತ್ರಕ್ಕಿಂತಲೂ ನಿಮ್ಮ ಪಕ್ಷದ ಆಂತರಿಕ ಹೊಡೆದಾಟಗಳನ್ನು ಪರಿಹರಿಸಿಕೊಳ್ಳಿ ಎಂದು ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ.