ಬೆಂಗಳೂರು: ವಕ್ಪ್ ಹೋರಾಟದ ವಿಚಾರದಲ್ಲಿ ರಾಜ್ಯ ಬಿಜೆಪಿ ಘಟಕ ಇಬ್ಬಾಗಗೊಂಡಂತಿದೆ. ಇಂದು ರಾಜ್ಯಾದ್ಯಂತ ನಡೆದ ಹೋರಾಟದಲ್ಲಿ ಸರ್ಕಾರದ ವಿರುದ್ಧ ನಡೆದ ಹೋರಾಟಕ್ಕಿಂತ ಪಕ್ಷದ ಭಿನ್ನಮತವೇ ಎದ್ದು ಗೋಚರಿಸುತ್ತಿದೆ. ವಕ್ಫ್ ಬಿಪಿಎಲ್ ಪಡಿತರ ಚೀಟಿ ಸೇರಿದಂತೆ ಅನೇಕ ಪ್ರಕರಣಗಳ ವಿರುದ್ಧ ಹೋರಾಟ ನಡೆಸಲು ಪಕ್ಷದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದ್ದರು. ಅದರಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ವಕ್ಪ್ ವಿರುದ್ಧ ಪ್ರತಿಭಟನೆ ನಡೆದಿತ್ತು.
ಆದರೆ ಪಕ್ಷದ ಅಧಿಕೃತ ಹೋರಾಟದಲ್ಲಿ ಬಿಜೆಪಿಭಿನ್ನಮತೀಯರು ಯಾವುದೇ ಜಿಲ್ಲೆಯಲ್ಲಿ ಭಾಗವಹಿಸಿಲ್ಲ. ವಿಜಯೇಂದ್ರ ವಿರುದ್ಧ ಬಹಿರಂಗವಾಗಿಯೇ ಸಮರ ಸಾರಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಂಡದ ಯಾವುದೇ ಮುಖಂಡರು ಇಂದಿನ ಹೋರಾಟಕ್ಕೆ ಹಾಜರಾಗಿಲ್ಲ. ಯತ್ನಾಳ್, ರಮೇಶ್ ಜಾರಕಿಹೊಳಿ, ಶಶಿಕಲಾ ಜೊಲ್ಲೆ, ಅರವಿಂದ ಲಿಂಬಾವಳಿ, ಸಿದ್ದೇಶ್ವರ್, ಬಿ.ಪಿ.ಹರೀಶ್ ಸೇರಿದಂತೆ ಅನೇಕ ಮುಖಂಡರು ಅಂತರ ಕಾಯುಕೊಂಡಿದ್ದಾರೆ.
ನ.25ರಿಂದ ವಕ್ಪ್ ವಿರುದ್ಧ ಯತ್ನಾಳ್ ಬಣ ಹೋರಾಟ ನಡೆಸಲು ಸಜ್ಜಾಗಿದ್ದರೆ ಇಂದಿನಿಂದಲೇ ರಾಜ್ಯ ಬಿಜೆಪಿ ಘಟಕ ಹೋರಾಟ ರೂಪಿಸಿತ್ತು. ಕೊಡಗಿನ ಪ್ರತಿಭಟನೆಯಲ್ಲಿ ಪ್ರತಾಪ್ ಸಿಂಹ ಭಾಗಿಯಾಗಿದ್ದು ಬಿಟ್ಟರೆ ಬೇರೆ ಯಾರೊಬ್ಬರೂ ಭಾಗಿಯಾಗಿಲ್ಲ. ಭಿನ್ನರ ವಿರುದ್ಧ ದೂರು ಸಲ್ಲಿಸಲು ದೆಹಲಿ ತಲುಪಿರುವ ವಿಜಯೇಂದ್ರ ಪ್ರತಿಕ್ರಿಯಿಸಿ ಬಿಜೆಪಿ ಬಣಗಳ ಬಡಿದಾಟ ಅಂತ್ಯವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಯತ್ನಾಳ್ ವಿರುದ್ಧ ನಾನು ದೂರು ನೀಡಿಲ್ಲ. ಆದರೆ ಡಿಸೆಂಬರ್ ಒಳಗೆ ಬಿಜೆಪಿಯ ಎಲ್ಲರೂ ಒಂದಾಗಲಿದ್ದಾರೆ ಎಂದು ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.