ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಉದ್ಭವಿಸಿರುವ ಭಿನ್ನಮತ ದೆಹಲಿ ಅಂಗಳ ತಲುಪಿದ್ದು, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಬಣದ ವಿರುದ್ಧ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ದೆಹಲಿ ಹೈಕಮಾಂಡ್ ಗೆ ದೂರು ನೀಡಲು ಮುಂದಾಗಿದ್ದಾರೆ. ವಕ್ಫ್ ನೋಟಿಸ್ ವಿರುದ್ಧ ಪ್ರತ್ಯೇಕ ಹೋರಾಟ ನಡೆಸುವುದಾಗಿ ಘೋಷಿಸಿರುವ ಯತ್ನಾಳ್ ಹಾಗೂ ಮತ್ತಿತರ ನಾಯಕರ ನಡೆಯಿಂದ ಅಸಮಾಧಾನಗೊಂಡಿರುವ ವಿಜಯೇಂದ್ರ ಅವರು ದೆಹಲಿಯಲ್ಲಿ ವರಿಷ್ಠರನ್ನು ಭೇಟಿ ಮಾಡಿ ಬಣ ರಾಜಕೀಯಕ್ಕೆ ಮೂಗುದಾರ ಹಾಕುವಂತೆ ಮನವಿ ಮಾಡಲಿದ್ದಾರೆ ಎಂದು ತಿಳಿದು ಬಂದಿದೆ.
ವಕ್ಫ್ ವಿವಾದ, ಬಿಪಿಎಲ್ ಕಾರ್ಡ್ ರದ್ದು, ಮುಡಾ, ವಾಲ್ಮೀಕಿ ನಿಗಮ ಹಗರಣ ಸೇರಿದಂತೆ ಹಲವು ಹಗರಣಗಳ ಸುಳಿಯಲ್ಲಿ ಸಿಲುಕಿರುವ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಸಂಘಟಿತ ಹೋರಾಟ ನಡೆಸುತ್ತಿರುವಾಗಲೇ ಶಾಸಕ ಯತ್ನಾಳ್, ರಮೇಶ್ ಜಾರಕಿಹೊಳಿ ಮತ್ತಿತರ ನಾಯಕರು ಪ್ರತ್ಯೇಕ ಗುಂಪು ರಚಿಸಿಕೊಂಡು ವ್ಯತಿರಿಕ್ತ ಹೇಳಿಕೆಗಳನ್ನು ನೀಡುತ್ತಿದ್ದು, ಪಕ್ಷದ ವರ್ಚಸ್ಸಿಗೆ ಧಕ್ಕೆ ತರುತ್ತಿವೆ. ಆದ್ದರಿಂದ ಇವರನ್ನು ನಿಯಂತ್ರಿಸಿ ಬಣ ರಾಜಕೀಯಕ್ಕೆ ಅಂತ್ಯ ಹಾಕಿ ಎಂದು ವಿಜಯೇಂದ್ರ ಅವರು ಮನವಿ ಮಾಡಲಿದ್ದಾರೆ.
ಪಕ್ಷದ ವಿದ್ಯಾಮಾನಗಳನ್ನು ಕುರಿತು ವರದಿ ನೀಡಲು ಬಿ.ವೈ, ವಿಜಯೇಂದ್ರ ಗುರುವಾರ ರಾತ್ರಿಯೇ ದೆಹಲಿಗೆ ತೆರಳಿದ್ದಾರೆ. ಇಂದು ಮತ್ತು ನಾಳೆ ಅವರು ಪಕ್ಷದ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ವರಿಷ್ಠರನ್ನು ಭೇಟಿ ಮಾಡಿ ಬಿನ್ನರ ಚಟುವಟಿಕೆಗಳನ್ನು ನಿಯಂತ್ರಿಸುವಂತೆ ಮನವಿ ಸಲ್ಲಿಸಲಿದ್ದಾರೆ.
ಯತ್ನಾಳ್ ನೇತೃತ್ವದಲ್ಲಿ ರಮೇಶ್ ಜಾರಕಿಹೊಳಿ ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಜಿ.ಎಂ. ಸಿದ್ದೇಶ್ವರ್, ಪ್ರತಾಪ್ಸಿಂಹ, ಬಿಪಿ ಹರೀಶ್ ಇವರುಗಳೆಲ್ಲ ಆಗಾಗ್ಗೆ ಸಭೆ ಸೇರಿ ಪಕ್ಷದ ವಿರುದ್ಧ ಹೇಳಿಕೆಗಳನ್ನು ನೀಡುತ್ತಿದ್ದು, ಪಕ್ಷದ ಶಿಸ್ತು ಉಲ್ಲಂಘಿಸಿದ್ದಾರೆ. ಇದರಿಂದ ಪಕ್ಷದ ಹೋರಾಟಕ್ಕೆ ನಿರೀಕ್ಷಿತ ಯಶಸ್ಸು ಸಿಗುತ್ತಿಲ್ಲ ಈ ಬಣ ರಾಜಕೀಯ ಕಾಂಗ್ರೆಸ್ ಪಕ್ಷಕ್ಕೂ ವರದಾನವಾಗಿದೆ. ಆದ್ದರಿಂದ ಇವರಿಗೆಲ್ಲಾ ಖಡಕ್ ಎಚ್ಚರಿಕೆ ನೀಡಿ ಎಂದು ಮನವಿ ಮಾಡಲಿದ್ದಾರೆ ಎಂದು ಅವರ ಆಪ್ತರು ಹೇಳುತ್ತಾರೆ.