ಮೈಸೂರು: ನಿಗಮ-ಮಂಡಳಿಗಳಿಗೆ ಸದಸ್ಯರು ಹಾಗೂ ನಿರ್ದೇಶಕರ ನೇಮಕದ ಪಟ್ಟಿ ಎರಡು ತಿಂಗಳ ಹಿಂದೆಯೇ ಸಿದ್ಧವಾಗಿದ್ದು, ಶೀಘ್ರದಲ್ಲೇ ಬಿಡುಗಡೆ ಮಾಡಲಾಗುವುದು ಎಂದು ಆಯ್ಕೆ ಸಮಿತಿಯ ಅಧ್ಯಕ್ಷರೂ ಆಗಿರುವ ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದ್ದಾರೆ.
ಮೈಸೂರಿನ ಕಾಂಗ್ರೆಸ್ ಭವನದಲ್ಲಿ ಗುರುವಾರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಉಪ ಚುನಾವಣೆ ಬಳಿಕ ಪಟ್ಟಿ ಪ್ರಕಟಿಸೋಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಕಾರ್ಯಕರ್ತರಿಗೆ ವಿಸಿಟಿಂಗ್ ಕಾರ್ಡ್ ಪಡೆದುಕೊಳ್ಳುವುದಕ್ಕೆ ಹಾಗೂ ಇಂಥದೊಂದು ಸ್ಥಾನ ಸಿಕ್ಕಿದೆ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲು ಕೆಲವೇ ದಿನಗಳಲ್ಲಿ ಅವಕಾಶವಾಗಲಿದೆ ಎಂದರು.
ನಿಗಮ-ಮಂಡಳಿಗಳಿಗೆ ಈಗಾಗಲೇ ಅಧ್ಯಕ್ಷರನ್ನು ಮುಖ್ಯಮಂತ್ರಿ ನೇಮಿಸಿದ್ದಾರೆ. ಸದಸ್ಯರು, ನಿರ್ದೇಶಕರ ಸ್ಥಾನಕ್ಕೆ ಶಾಸಕರಿಂದ ಕಡ್ಡಾಯವಾಗಿ ಒಬ್ಬ ಮಹಿಳೆ ಸೇರಿದಂತೆ ಮೂರು ಹೆಸರನ್ನು ಪಡೆದಿದ್ದೇವೆ. ಚುನಾವಣೆಯಲ್ಲಿ ಸ್ಪರ್ಧಿಸಿ ಸೋತವರಿಂದ ಶಿಫಾರಸಾದ ಎರಡು ಹೆಸರು, ಜಿಲ್ಲಾ ಕಾಂಗ್ರೆಸ್ ಸಮಿತಿಗಳ ಶಿಫಾರಸನ್ನೂ ಪರಿಗಣಿಸಲಾಗಿದೆ. ಮುಖ್ಯಮಂತ್ರಿಯಿಂದಲೂ ಒಂದಷ್ಟು ಹೆಸರುಗಳು ಶಿಪಾರಸುಗೊಂಡಿವೆ. ಎರಡು ಹಂತದಲ್ಲಿ ಪಟ್ಟಿ ಬಿಡುಗಡೆ ಮಾಡಲಾಗುವುದು. ಪಕ್ಷಕ್ಕಾಗಿ ಶ್ರಮಿಸಿದ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.