ಸಮಾಜ ವಿಭಜಿಸುವುದೇ ಪ್ರಧಾನಿ ಮೋದಿ ಕೆಲಸ; ಶರದ್‌ ಪವಾರ್

Most read

ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಸಮಾಜವನ್ನು ವಿಭಜಿಸುತ್ತಿದ್ದಾರೆ. ಮೋದಿ ಅವರ ಹೇಳಿಕೆಗಳು ಮತ್ತು ಆಡಳಿತಾರೂಢ ಮೈತ್ರಿಕೂಟದ ಬಗ್ಗೆ ಜನರಿಗಿರುವ ಅಸಮಾಧಾನದ ಕಾರಣಕ್ಕಾಗಿ ಮಹಾ ವಿಕಾಸ್ ಅಘಾಡಿ (ಎಂವಿಎ) ಅಧಿಕಾರಕ್ಕೆ ಬರಲಿದೆ ಎಂದು ಎನ್‌ಸಿಪಿ (ಎಸ್‌ಪಿ) ನಾಯಕ ಶರದ್ ಪವಾರ್ ಭವಿಷ್ಯ ನುಡಿದಿದ್ದಾರೆ.

ತಮ್ಮ ಸೋದರಳಿಯ ಅಜಿತ್ ಪವಾರ್ ಅವರೊಂದಿಗೆ ಚುನಾವಣೋತ್ತರ ಮೈತ್ರಿ ಮಾಡಿಕೊಳ್ಳುವಿರಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ ಜೊತೆ ಮೈತ್ರಿ ಹೊಂದಿರುವ ಯಾವುದೇ ಪಕ್ಷದ ಜತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಮುಖಭಂಗ ಅನುಭವಿಸಿರುವ ಮಹಾಯುತಿ ಮೈತ್ರಿಕೂಟವು ನಗದು ವರ್ಗಾವಣೆ ಯೋಜನೆ ಸೇರಿದಂತೆ ಭಾರಿ ಪ್ರಮಾಣದ ಹಣದ ಬಲ ಬಳಸಿ ಮತದಾರರ ಮೇಲೆ ಪರಿಣಾಮ ಬೀರಲು ಪ್ರಯತ್ನಿಸುತ್ತಿದೆ. ಜನ ಅವರನ್ನು ತಿರಸ್ಕರಿಸಲಿದ್ದಾರೆ ಎಂದು ಅವರು  ಸಂದರ್ಶನವೊಂದರಲ್ಲಿ ಹೇಳಿದ್ದಾರೆ.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ಬಾಟೆಂಗೆ ತೋ ಕಾಟೆಂಗೆ’ ಘೋಷ ವಾಕ್ಯದ ಬಗ್ಗೆ ಕಿಡಿಕಾರಿದ ಪವಾರ್ ಅವರು ಯೋಗಿ ಆದಿತ್ಯನಾಥ್ ಕೋಮು ಹೇಳಿಕೆಗಳಿಗೆ ಹೆಸರುವಾಸಿ. ಅವರಿಗೇಕೆ ಪ್ರಾಶಸ್ತ್ರ ಕೊಡಬೇಕು. ಅವರ ಬಗ್ಗೆ ಒಂದು ವಾಕ್ಯ ಮಾತನಾಡಲೂ ನನಗೆ ಇಷ್ಟವಿಲ್ಲ. ಕೇಸರಿ ಬಟ್ಟೆ ಧರಿಸುವ ಈ ಜನ ಕೋಮುವಾದ ನಡೆಸುತ್ತಿದ್ದಾರೆ. ಅವರು ದೇಶಕ್ಕೆ ಅಪಚಾರ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಮೋದಿ ಪ್ರಚಾರ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪವಾರ್, ಜಾತಿ ಹೆಸರಲ್ಲಿ ನಾವು ಸಮಾಜ ಒಡೆಯುತ್ತಿದ್ದೇವೆ ಎಂದು ಮೋದಿ ಹೇಳಿರುವುದು ಅಸಮಂಜಸವಾಗಿದೆ.  ಸಮಾಜ ಒಡೆಯುವ ಕೆಲಸವನ್ನು ಅವರು ಮಾಡುತ್ತಿದ್ದಾರೆ. ರಾಜಕೀಯ ಹಿತಾಸಕ್ತಿಗಾಗಿ ಕಳೆದ ಕೆಲವು ದಿನಗಳಿಂದ ತಮ್ಮ ಭಾಷಣದಲ್ಲಿ ಮೋದಿ ಪ್ರಸ್ತಾಪಿಸುತ್ತಿರುವ ಸಂಗತಿಗಳನ್ನು ಗಮನಿಸಿದರೆ ಇದು ಸ್ಪಷ್ಟವಾಗುತ್ತದೆ ಎಂದು ಆ ಸಂದರ್ಶನದಲ್ಲಿ ಹೇಳಿದ್ದಾರೆ.

More articles

Latest article