ಬೆಂಗಳೂರು: ರೈತರಿಗೆ ವಕ್ಫ್ ಮಂಡಳಿ ನೋಟಿಸ್ ನೀಡುತ್ತಿರುವ ಹಿನ್ನೆಲೆಯಲ್ಲಿ ಜನ ಜಾಗೃತಿ ಅಭಿಯಾನ ನಡೆಸಲು ಬಿಜೆಪಿ ಭಿನ್ನಮತೀಯರ ಗುಂಪು ನಿರ್ಧರಿಸಿದೆ. ಬಿಜೆಪಿ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಕಟ್ಟಾ ವಿರೋಧಿಯಾಗಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ಪ್ರತ್ಯೇಕ ಜನ ಜಾಗೃತಿ ಅಭಿಯಾನ ನಡೆಯಲಿದೆ. ನವೆಂಬರ್ 25 ರಿಂದ ಡಿಸೆಂಬರ್ 25 ರವರೆಗೆ ಬೀದರ್ ನಿಂದ ಆರಂಭಗೊಂಡು ಬೆಳಗಾವಿ ಜಿಲ್ಲೆಯ ವರೆಗೆ ನಡೆಯಲಿದೆ.
ಬೆಂಗಳೂರಿನಲ್ಲಿ ಈ ಸಂಬಂಧ ಮಾಹಿತಿ ನೀಡಿದ ಭಿನ್ನಮತೀಯರ ಗುಂಪಿನ ಮುಖಂಡರಾದ ಬಸನಗೌಡ ಪಾಟೀಲ ಯತ್ನಾಳ, ರಮೇಶ್ ಜಾರಕಿಹೊಳಿ ಅರವಿಂದ ಲಿಂಬಾವಳಿ ಮತ್ತು ಕುಮಾರ್ ಬಂಗಾರಪ್ಪ ಅಭಿಯಾನದ ವಿವಿರ ಹಂಚಿಕೊಂಡರು.
ಅರವಿಂದ ಲಿಂಬಾವಳಿ ಮಾತನಾಡಿ ವಕ್ಫ್ ಸಮಸ್ಯೆಗಳು ಅಗಾಧವಾಗಿವೆ. ವಿಜಯಪುರದಿಂದ ಯತ್ನಾಳ ಈ ಹೋರಾಟ ಆರಂಭಿಸಿದ್ದರು. ಅದರ ಪರಿಣಾಮವಾಗಿ ಕೇಂದ್ರದ ವಕ್ಪ್ ಜಂಟಿ ಸದನ ಸಮಿತಿ ಭೇಟಿ ಕೊಟ್ಟು ಮಾಹಿತಿಯನ್ನು ಪಡೆದುಕೊಂಡಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಧರಣಿ ಹಿಂಪಡೆಯಲಾಗಿದೆ. ಬಿಜೆಪಿ ನೇತೃತ್ವದಲ್ಲಿ ಜನ ಜಾಗೃತಿ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು.
ನವೆಂಬರ್ 25 ರಿಂದ ಯತ್ನಾಳ್ ನೇತೃತ್ವದಲ್ಲಿ ಜನಜಾಗೃತಿ ಅಭಿಯಾನ ಬೀದರ್ ನಿಂದ ಆರಂಭವಾಗಲಿದೆ. 26 ರಂದು ಕಲಬುರಗಿ, 27, ಯಾದಗಿರಿ, ರಾಯಚೂರು ಹಾಗೂ 30 ಶನಿವಾರ ವಿಜಯಪುರ ಹಾಗೂ ಬಾಗಲಕೋಟೆ, ಭಾನುವಾರ ಡಿಸೆಂಬರ್ 1 ಬೆಳಗಾವಿ ಜಿಲ್ಲೆಯಲ್ಲಿ ಜನ ಜಾಗೃತಿ ನಡೆಯಲಿದೆ ಎಂದೂ ಅವರು ಹೇಳಿದರು.