ಎಲ್ಲಿ ದಲಿತ ಶೂದ್ರರು ತಾವೇ ಶ್ರೇಷ್ಠರೆಂದುಕೊಂಡು ವೈದಿಕರಿಗೆ ಸವಾಲು ಹಾಕುತ್ತಾರೋ, ಎಲ್ಲಿ ದಲಿತ ದೇವರುಗಳು ವೈದಿಕರ ದೇವರಿಗಿಂತ ಮೇಲು ಎಂದು ಅಹಂಕಾರ ಪಡುತ್ತಾರೋ ಎಂಬ ಭಯದಿಂದಲೇ ಪುರೋಹಿತಶಾಹಿ ಪಂಡಿತರುಗಳು ಅಹಂಕಾರವನ್ನು ಕೆಟ್ಟದ್ದು ಎಂದು ಉಲ್ಲೇಖಿಸಿ, ಬೇರೆ ವರ್ಣದವರಿಗೆ ನಿಷೇಧಿಸಿ ತಮ್ಮ ಶ್ರೇಷ್ಠತೆಯ ಅಹಂಕಾರವನ್ನು ಸರ್ವಮಾನ್ಯ ಮಾಡಿಕೊಳ್ಳುತ್ತಲೇ ಬಂದಿದ್ದಾರೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಅಹಮಿಕೆ, ಅಹಂಕಾರ, ಪುರುಷಹಂಕಾರದ ಬಗ್ಗೆ ಚರ್ಚೆಗಳಿವೆ. ಅಹಂಕಾರ ಕೆಟ್ಟದ್ದು, ಅದೊಂದು ಮನೋರೋಗ ಎಂದು ವೈದಿಕ ಪುರಾಣಗಳು, ಮಹಾಕಾವ್ಯಗಳು ಸಾರುತ್ತಲೇ ಬಂದಿವೆ.
“ಅಹಂಕಾರವಶಾತ್ ಆಪತ್ ಅಹಂಕಾರ ಧುರಾದಯಃ | ಅಹಂಕಾರ ವಶಾತ್ ಈಹ ಅಹಂಕಾರೋ ಮಮಾಮಯಃ ಎಂದು ರಾಮಾಯಣ ಮಹಾಕಾವ್ಯದಲ್ಲಿ ಅಹಂಕಾರ ಕುರಿತು ರಾಮನ ಬಾಯಲ್ಲಿ ಹೇಳಿಸಲಾಗಿದೆ. ಅಂದರೆ ಅಹಂಕಾರದಿಂದ ಆಪತ್ತುಗಳು ಬರುತ್ತವೆ. ರಾವಣನು ತನ್ನ ಅಹಂಕಾರದಿಂದ ಆಪತ್ತುಗಳೆಸಗಿಕೊಂಡ. ದುರ್ಯೋಧನನು ಅಹಂಕಾರದಿಂದ ಸೋತು ದಯನೀಯವಾಗಿ ಸತ್ತ. ಇದರರ್ಥ ಅಹಂಕಾರ ಪಟ್ಟವನಿಗೆ ವಿನಾಶ ಶತಸಿದ್ದ ಎನ್ನುವುದಾಗಿದೆ.
ಇಂತಹ ಅನಾಹುತಕಾರಿ ಅಹಂಕಾರದಿಂದ ಮುಕ್ತಿಹೊಂದಲು ಪ್ರಮುಖವಾಗಿ ಎರಡು ದಾರಿಗಳಿವೆ. ಒಂದು ಭಕ್ತಿಮಾರ್ಗ ಇನ್ನೊಂದು ಜ್ಞಾನಮಾರ್ಗ. ಅಂದರೆ ಭಗವಂತನಲ್ಲಿ ಸಂಪೂರ್ಣ ಶರಣಾಗತಿಯನ್ನು ಹೊಂದಿದರೆ ಅಹಂಕಾರದ ಮಮಕಾರದಿಂದ ದೂರಾಗಬಹುದು ಎನ್ನುತ್ತವೆ ವೈದಿಕಶಾಹಿ ಮೌಲ್ಯ ಪ್ರತಿಪಾದಕ ಶಾಸ್ತ್ರ ಗ್ರಂಥಗಳು.
ಆದರೆ ಅಹಂಕಾರ ಎಂದರೆ ಯಾವಾಗಲೂ ನಕಾರಾತ್ಮಕವಾಗಿಯೇ ಯಾಕೆ ಯೋಚಿಸಬೇಕು? ತನ್ನ ಸಾಧನೆಯ ಬಗ್ಗೆ ಹೆಮ್ಮೆ ಪಡುವುದು, ತನ್ನ ಜಾಣತನದ ಬಗ್ಗೆ ಮೆಚ್ಚುಗೆ ಪಡುವುದು. ತನ್ನ ಮಕ್ಕಳ ಬಗ್ಗೆ ಅಭಿಮಾನ ವ್ಯಕ್ತಪಡಿಸುವುದನ್ನೆಲ್ಲಾ ಅಹಂಕಾರ ಎನ್ನಲಾದೀತೆ? ಬೇರೆಯವರ ಮಾತು ಬಿಡಿ, ಸಾಧಕರಿಗೆ ಒಂದಿಷ್ಟು ತಮ್ಮ ಸಾಧನೆಯ ಬಗ್ಗೆ ಹೆಮ್ಮೆ ಇರುತ್ತದೆ, ಇರಬೇಕು. ಎಷ್ಟೋ ಸಲ ತನ್ನ ಬಗ್ಗೆ, ತನ್ನ ಕೆಲಸದ ಬಗ್ಗೆ, ತನ್ನ ಸಾಧನೆಗಳ ಬಗ್ಗೆ ಪಡುವ ಅಹಮಿಕೆಯೇ ಇನ್ನೂ ಹೆಚ್ಚಿನ ಸಾಧನೆಗೆ ಪ್ರೇರಕವಾಗಬಹುದಾಗಿದೆ.
ಇನ್ನು ಬಹುತೇಕ ಸ್ರ್ತೀವಾದಿಗಳು ಪುರುಷಹಂಕಾರದ ಬಗ್ಗೆ ಆರೋಪ ಮಾಡುತ್ತಲೇ ಇರುತ್ತಾರೆ. ಪುರುಷರು ಅಹಂಕಾರ ಪಡುವ ಮಹಿಳೆಯರ ಬಗ್ಗೆ ವಿಡಂಬನೆ ಮಾಡುತ್ತಲೇ ಇರುತ್ತಾರೆ. ಅಹಂಕಾರಕ್ಕೆ ಲಿಂಗ ಬೇಧ ಇಲ್ಲವೆನ್ನುವುದೇ ಸತ್ಯ. ಹೀಗೆ ಒಬ್ಬರ ಮೇಲೊಬ್ಬರು ಆರೋಪಿಸುತ್ತಾ ಇದ್ದಾಗಲೇ ಲಿಂಗಾಧಾರಿತ ಮನಸ್ತಾಪ ಅತಿಯಾಗುತ್ತದೆ. ಅವರವರ ಬಗ್ಗೆ ಅವರವರು ಹೆಮ್ಮೆ ಪಡುವುದು, ಸೌಂದರ್ಯದ ಬಗ್ಗೆ, ಬುದ್ಧಿಶಕ್ತಿಯ ಬಗ್ಗೆ, ಶಕ್ತಿ ಸಾಮರ್ಥ್ಯಗಳ ಬಗ್ಗೆ ಅಹಮಿಕೆ ತೋರಿದರೆ ತಪ್ಪೇನೂ ಇಲ್ಲ. ಆದರೆ ಬೇರೆಯವರನ್ನು ಹೋಲಿಕೆ ಮಾಡಿ ನಾವೇ ಶ್ರೇಷ್ಠರು, ಅನ್ಯರು ತನಗಿಂತ ಕನಿಷ್ಠರು ಎಂದು ತಮ್ಮ ನಡೆ ನುಡಿಯಲ್ಲಿ ವ್ಯಕ್ತಪಡಿಸುತ್ತಾರೋ ಅದು ದುರಹಂಕಾರವಾಗುತ್ತದೆ. ಆಸೆ ತಪ್ಪಲ್ಲ, ಆಸೆಗಳಿಲ್ಲದ ಮನುಷ್ಯರಿಲ್ಲ. ಅಹಂಕಾರ ತಪ್ಪಲ್ಲ, ಅಹಂಕಾರ ಪಡದ ವ್ಯಕ್ತಿಗಳಿಲ್ಲ. ಆದರೆ ದುರಾಸೆ ಪಡುವುದು ಸರಿಯಲ್ಲಾ, ದುರಹಂಕಾರ ಒಳಿತು ಮಾಡುವುದಿಲ್ಲ.
ಯಾರೇ ಆಗಲಿ ತನ್ನ ಬಗ್ಗೆ ತಾನೇ ಹೇಳಿಕೊಂಡರೆ ನೋಡಿ ಅವರ ಅಹಂಕಾರ ಎಂದು ಹೇಳಲಾಗುತ್ತದೆ. ಹೇಳಿಕೊಳ್ಳದೇ ಇದ್ದರೆ ಬೇರೆಯವರಿಗೆ ಹೇಗೆ ಗೊತ್ತಾಗುತ್ತದೆ?. ಹೀಗಾಗಿ ಹೆಣ್ಣು ತನ್ನ ಬಗ್ಗೆ ತಾನು ಹೇಗೆ ಹೆಮ್ಮೆಯಿಂದ ಅಹಂಕಾರ ವ್ಯಕ್ತಪಡಿಸಲು ಸಾಧ್ಯವೋ ಹಾಗೆಯೇ ಗಂಡೂ ಸಹ ಅಹಂಕಾರಿಯಾಗಿರಲು ಸಾಧ್ಯ. ಅದಕ್ಕೇ ಹೇಳುವುದು ಆಸೆಗೂ ಅಹಂಕಾರಕ್ಕೂ ಲಿಂಗಬೇಧ ಇಲ್ಲ ಎಂದು. ಅದೇ ರೀತಿ ದುರಾಸೆಗೂ ದುರಹಂಕಾರಕ್ಕೂ ಸಹ ಲಿಂಗಬೇಧವೆಂಬುದಿಲ್ಲ. ಹೀಗಿರುವಾಗ ಪುರುಷಹಂಕಾರ ಎಂದು ಸ್ರ್ತೀಯರೂ, ಮಹಿಳಾ ಅಹಂಕಾರ ಎಂದು ಪುರುಷರೂ ಆಪಾದಿಸುವುದರಲ್ಲಿ ಅರ್ಥವಿಲ್ಲ.
ಗೊತ್ತಿದ್ದೋ ಗೊತ್ತಿಲ್ಲದೆಯೋ ಶ್ರೇಷ್ಠತೆಯ ವ್ಯಸನವೆನ್ನುವುದು ಪ್ರಕೃತಿದತ್ತವಾಗಿಯೇ ಮನುಷ್ಯರಿಗೆ ಬಂದಿರುತ್ತದೆ. ಅದು ಶಾಪವೋ ವರವೋ, ರೋಗವೋ ಔಷಧವೋ ಎಂಬುದು ಅವರವರ ಭಾವಕ್ಕೆ ಬಿಟ್ಟಿದ್ದು. ಆದರೆ ಈ ಮನೋಸಹಜ ಅಹಂಕಾರವನ್ನು ಮುಂದಿಟ್ಟುಕೊಂಡು ವೈದಿಕಶಾಹಿ ಪರಂಪರೆಯು ಶೂದ್ರ ದಲಿತ ವರ್ಗಗಳಿಗೆ ಶರಣಾಗತಿಯನ್ನು ಬೋಧಿಸುತ್ತವೆ. ಬ್ರಹ್ಮನ ಮುಖದಿಂದ ಹುಟ್ಟಿದ ಬ್ರಾಹ್ಮಣರು ಸರ್ವಶ್ರೇಷ್ಠರು ಹಾಗೂ ಬೇರೆ ಅಂಗಗಳಿಂದ ಜನಿಸಿದವರು ತಮಗಿಂತಾ ಕನಿಷ್ಠರು, ಅದರಲ್ಲೂ ದಲಿತರು ನಿಕೃಷ್ಟರು ಎಂದು ಮನುವಾದಿ ಸನಾತನಿಗಳು ತಮ್ಮ ಜಾತಿ ಹುಟ್ಟು ಹಾಗೂ ಆಚರಣೆಗಳ ಬಗ್ಗೆ ಅಹಂಕಾರ ಪಡುತ್ತಲೇ ಬಂದಿದ್ದಾರೆ. ಆದರೆ ತಮ್ಮ ಶಾಸ್ತ್ರ ಪುರಾಣ ಪುಣ್ಯಕಥೆಗಳ ಸಂಕಥನಗಳ ಮೂಲಕ ಅಹಂಕಾರ ಎಂಬುದು ಆಪತ್ತಿಗೆ ಮೂಲ, ಅದೊಂದು ರೋಗ ಎಂದು ಬಹುಸಂಖ್ಯಾತ ದುಡಿಯುವ ವರ್ಗದವರನ್ನು ನಂಬಿಸುತ್ತಾ ಬಂದಿದ್ದಾರೆ. ಬ್ರಾಹ್ಮಣರು ಸೃಷ್ಟಿಸಿ ಆರಾಧಿಸುವ ವೆಜ್ ದೇವರುಗಳು ಶ್ರೇಷ್ಠ ಹಾಗೂ ದಲಿತರು ಪೂಜಿಸುವ ನಾನ್ವೆಜ್ ದೇವರುಗಳು ಕನಿಷ್ಠ ಎಂದು ದೇವರಲ್ಲೂ ಭಿನ್ನಬೇಧ ಮಾಡುತ್ತಲೇ ಬಂದಿದ್ದಾರೆ. ಎಲ್ಲಿ ದಲಿತ ಶೂದ್ರರು ತಾವೇ ಶ್ರೇಷ್ಠರೆಂದುಕೊಂಡು ವೈದಿಕರಿಗೆ ಸವಾಲು ಹಾಕುತ್ತಾರೋ, ಎಲ್ಲಿ ದಲಿತ ದೇವರುಗಳು ವೈದಿಕರ ದೇವರಿಗಿಂತ ಮೇಲು ಎಂದು ಅಹಂಕಾರ ಪಡುತ್ತಾರೋ ಎಂಬ ಭಯದಿಂದಲೇ ಪುರೋಹಿತಶಾಹಿ ಪಂಡಿತರುಗಳು ಅಹಂಕಾರವನ್ನು ಕೆಟ್ಟದ್ದು ಎಂದು ಉಲ್ಲೇಖಿಸಿ, ಬೇರೆ ವರ್ಣದವರಿಗೆ ನಿಷೇಧಿಸಿ ತಮ್ಮ ಶ್ರೇಷ್ಠತೆಯ ಅಹಂಕಾರವನ್ನು ಸರ್ವಮಾನ್ಯ ಮಾಡಿಕೊಳ್ಳುತ್ತಲೇ ಬಂದಿದ್ದಾರೆ.
ಪೌರಾಣಿಕ ಪರಿಕಲ್ಪನೆಯ ರಾಮನ ಮೂಲಕ, ಕೃಷ್ಣನ ಮೂಲಕ ಅಹಂಕಾರ ಕೆಡುಕನ್ನುಂಟು ಮಾಡುತ್ತದೆ ಎಂದು ಅನೇಕಾನೇಕ ದೃಷ್ಟಾಂತಗಳ ಸೃಷ್ಟಿ ಮಾಡುತ್ತಾ ಜನರನ್ನು ಅಹಂಕಾರದ ವ್ಯಾಪ್ತಿಯಿಂದ ಹೊರಗಿಟ್ಟು ಶರಣಾಗತಿಯ ಗುಲಾಮಗಿರಿಗೆ ಪ್ರೇರೇಪಿಸುತ್ತಾರೆ. ಅದಕ್ಕಾಗಿಯೇ ನಾರದ ಎನ್ನುವ ಋಷಿಯನ್ನು ಸೃಷ್ಟಿಸಿದ್ದಾರೆ. ದೇವಾನುದೇವತೆಗಳಿಗೂ ಅಹಂಕಾರ ಬಂದಾಗ ಅದನ್ನು ಹೇಗೆ ನಿವಾರಿಸಿ ಅಹಂಕಾರ ಪೀಡಿತರಿಗೆ ಬುದ್ದಿ ಕಲಿಸಬೇಕು ಎನ್ನುವುದಕ್ಕೆಂದೇ ನಾರದ ಪಾತ್ರ ಸೃಷ್ಟಿ ಮಾಡಲಾಗಿದೆ. ಅಹಂಕಾರ ಎನ್ನುವುದು ದೇವರಿಗೂ, ರಾಜರಿಗೂ ಬಿಟ್ಟಿದ್ದಲ್ಲಾ, ಅಹಂಕಾರ ಪಟ್ಟರೆ ಏನೆಲ್ಲಾ ಅನಾಹುತಗಳಾಗುತ್ತವೆ ಎಂಬುದನ್ನು ಶೂದ್ರ ವರ್ಗದವರಿಗೆ ಮನದಟ್ಟು ಮಾಡಲೆಂದೇ ಈ ಸಂಕಥನಗಳು ಹಾಗೂ ಅದಕ್ಕೆ ಪೂರಕ ಪಾತ್ರಗಳು ಸೃಷ್ಟಿಯಾಗಿವೆ.
ಈ ಅಹಂಕಾರವನ್ನು ಬಹುಮಟ್ಟಿಗೆ ಒಡೆದು ಹಾಕಿದ ಕೀರ್ತಿ ಬಸವಾದಿ ಶಿವಶರಣರಿಗೆ ಸಲ್ಲಬೇಕಿದೆ. “ಎನಗಿಂತ ಕಿರಿಯರಿಲ್ಲ” ಎಂದು ಬಸವಣ್ಣ ಹೇಳಿದಾಗಲೇ ಶ್ರೇಷ್ಟತೆಯ ಅಹಂಕಾರ ಛಿದ್ರವಾಗಿದೆ. “ಎನ್ನ ನಡೆಯೊಂದು ಪರಿ, ನುಡಿಯೊಂದು ಪರಿ, ಎನ್ನೊಳಗೇನೂ ಶುದ್ಧವಿಲ್ಲ” ಎನ್ನುವ ಬಸವಣ್ಣ ಸ್ವವಿಮರ್ಶೆಯ ಮೂಲಕವೇ ಶುದ್ಧತೆ, ಪವಿತ್ರತೆ, ಶ್ರೇಷ್ಟತೆ ಎಂದು ದುರಹಂಕಾರ ಪಡುವ ವೈದಿಕರಿಗೆ ಮುಟ್ಟಿನೋಡಿಕೊಳ್ಳುವಂತೆ ಟಾಂಗ್ ಕೊಟ್ಟಿದ್ದಾರೆ.
ಅವರವರ ಅನುಭವ ಮತ್ತು ಅನುಭಾವದಂತೆ ಶಿವಶರಣರು ಮುನ್ನಡೆದರು. ಬಹುತೇಕ ವಚನಕಾರರಲ್ಲಿ ಇದ್ದದ್ದು ವೈದಿಕಶಾಹಿ ಪ್ರತಿಗಾಮಿ ಶಕ್ತಿಗಳ ವಿರುದ್ದದ ಪ್ರತಿರೋಧ. ಆಗಿನಂತೆ ಈಗಲೂ ಮನುವಾದಿಗಳಿಗೆ ವಚನಗಳು ಹೇಳುವ ಸತ್ಯಗಳೇ ಶತ್ರುಗಳು. ಹೀಗಾಗಿ ಬಸವಾದಿ ಶರಣರಲ್ಲಿ ಇದ್ದದ್ದು ಶ್ರೇಷ್ಟತೆಯ ಅಹಂಕಾರವಲ್ಲ. ಅದು ನೈತಿಕವಾದ, ಆತ್ಮಸ್ಥೈರ್ಯದ, ಪ್ರತಿರೋಧದ ಅಹಂಕಾರ. ವಚನಕಾರರ ಹೆಮ್ಮೆಯ ಅಹಂಕಾರ ಇದ್ದರೆ ನಮಗದು ಇರಲಿ. ವೈದಿಕಶಾಹಿಗಳ ಶ್ರೇಷ್ಟತೆಯ ವ್ಯಸನ ಪೀಡಿತ ದುರಹಂಕಾರ ಖಂಡನೀಯವಾಗಲಿ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ.
ಇದನ್ನೂ ಓದಿ- ಗ್ಯಾರಂಟಿ ಗಲಾಟೆ ಮತ್ತು ಕಾಪಿ ಪೇಸ್ಟ್ ರಾಜಕಾರಣ!