ವೈದ್ಯರ ಮೇಲೆ ಮಾರಣಾಂತಿಕ ಹಲ್ಲೆ; ಚೆನ್ನೈನಲ್ಲಿ ವೈದ್ಯರ ದಿಢೀರ್ ಮುಷ್ಕರ

Most read

ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನ ಕಲೈನರ್ ಸೆಂಟಿನರಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ (ಕೆಸಿಎಂಎಸ್ಎಚ್) ಕರ್ತವ್ಯದಲ್ಲಿ ನಿರತರಾಗಿದ್ದ ವೈದ್ಯರೊಬ್ಬರ ಮೇಲೆ ರೋಗಿಯೊಬ್ಬರ ಸಂಬಂಧಿಕರು ಹಲ್ಲೆ ನಡೆಸಿರುವ ಘಟನೆಯನ್ನು ಖಂಡಿಸಿ ತಮಿಳುನಾಡು ಸರ್ಕಾರಿ ವೈದ್ಯರ ಸಂಘ (ಟಿಎನ್ಜಿಡಿಎ) ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಘೋಷಿಸಿದೆ. ತುರ್ತು ಸೇವೆಗಳನ್ನು ಹೊರತುಪಡಿಸಿ ವೈದ್ಯರು ಬುಧವಾರ ಮಧ್ಯಾಹ್ನದಿಂದಲೇ ಕೆಲಸಕ್ಕೆ ಹಾಜರಾಗುವುದಿಲ್ಲ ಎಂದು ಟಿಎನ್ಜಿಡಿಎ ಅಧ್ಯಕ್ಷ ಡಾ. ಕೆ. ಸೆಂಥಿಲ್ ತಿಳಿಸಿದ್ದಾರೆ.


ಇಂದು ಆಸ್ಪತ್ರೆಯಲ್ಲಿ ವೈದ್ಯ ಜೆ. ಬಾಲಾಜಿ ಅವರು ಬೆಳಿಗ್ಗೆ ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ದರು. ಇದೇ ಸಂದರ್ಭದಲ್ಲಿ ಚಾಕುವಿನಿಂದ ಏಕಾಏಕಿ ದಾಳಿ ನಡೆಸಿದ ಆರೋಪಿಗಳು, ಬಾಲಾಜಿಯವರ ಕುತ್ತಿಗೆ ಸೇರಿ ದೇಹದ ವಿವಿಧ ಭಾಗಗಳಿಗೆ ಹಲವು ಬಾರಿ ಇರಿದಿದ್ದಾರೆ. ತೀವ್ರವಾಗಿ ಗಾಯಗೊಂಡಿರುವ ಬಾಲಾಜಿ ಅವರಿಗೆ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಅವರ ಸ್ಥಿತಿ ಗಂಭೀರವಾಗಿದೆ ಎಂದು ಹಿರಿಯ ವೈದ್ಯರು ತಿಳಿಸಿದ್ದಾರೆ.


ಕೆಸಿಎಂಎಸ್ಎಚ್ನ ವೈದ್ಯರು ಹಲ್ಲೆಯನ್ನು ಖಂಡಿಸಿದ್ದು, ರೋಗಿಗಳು ಮತ್ತು ಅವರ ಸಂಬಂಧಿಕರಿಂದ ರಕ್ಷಣೆ ನೀಡುವಂತೆ ಒತ್ತಾಯಿಸಿ ವೈದ್ಯರು ಪ್ರತಿಭಟನೆ ನಡೆಸಿದ್ದಾರೆ. ಹಲ್ಲೆಗೊಳಗಾಗಿರುವ ವೈದ್ಯರನ್ನು ಭೇಟಿ ಮಾಡಲು ಬಂದಿದ್ದ ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರಿಗೆ ವೈದ್ಯರು ಫೇರಾವ್ ಹಾಕಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಪಡಿಸಿದ್ದಾರೆ.
ಸರ್ಕಾರಿ ವೈದ್ಯರು ತಕ್ಷಣವೇ ಕೆಲಸಕ್ಕೆ ಹಾಜರಾಗುವುದನ್ನು ನಿಲ್ಲಿಸಬೇಕು. ಜತೆಗೆ, ಖಾಸಗಿ ಆಸ್ಪತ್ರೆಗಳಲ್ಲಿ ಕೆಲಸ ಮಾಡುವ ವೈದ್ಯರಿಗೆ ಒಗ್ಗಟ್ಟಿನ ಸಂಕೇತವಾಗಿ ಮುಷ್ಕರದಲ್ಲಿ ಪಾಲ್ಗೊಳ್ಳುವಂತೆ ಟಿಎನ್ಜಿಡಿಎ ಮನವಿ ಮಾಡಿದೆ ಎಂದು ಸೆಂಥಿಲ್ ಹೇಳಿದ್ದಾರೆ.


ಕೆಲಸ ಮಾಡುವ ಸ್ಥಳದಲ್ಲಿ ನಮಗೆ ಸೂಕ್ತ ಭದ್ರತೆ ಇಲ್ಲದಿರುವಾಗ ನಾವು ಕೆಲಸ ಮಾಡುವುದಾದರೂ ಹೇಗೆ ? ನಾವು ಕಳೆದ ಹಲವು ವರ್ಷಗಳಿಂದ ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಆದರೆ ಸರ್ಕಾರಿ ಆಸ್ಪತ್ರೆಗಳಲ್ಲಿ ಭದ್ರತೆಯನ್ನು ಹೆಚ್ಚಿಸಲು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸೆಂಥಿಲ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.


ಇಡೀ ತಮಿಳುನಾಡಿನಲ್ಲಿ ಪ್ರತದಿನ 5 ಲಕ್ಷ ರೋಗಿಗಳು ಸರ್ಕಾರಿ ಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇವರಲ್ಲಿ60 ಸಾವಿರ ಮಂದಿ ಒಳರೋಗಿಗಳಾಗಿ ಚಿಕಿತ್ಸೆ ಪಡೆಯುತ್ಥಾರೆ. ಆದರೆ ವೈದ್ಯರಿಗೆ ಮಾತ್ರ ರಕ್ಷಣೆ ಇಲ್ಲವಾಗಿದೆ ಎಂದು ಅವರು ಆಪಾದಿಸಿದ್ದಾರೆ.

More articles

Latest article