ನವದೆಹಲಿ: ಬುಲ್ಡೋಜರ್ ನ್ಯಾಯಕ್ಕೆ ಸಾಂವಿಧಾನಿಕ ಮಾನ್ಯತೆ ಇದೆಯೇ ಎಂಬ ಬಗ್ಗೆ ವಿಚಾರಣೆ ನಡೆಸುತ್ತಿರುವ ಸುಪ್ರೀಂ ಕೋರ್ಟ್ ಅಧಿಕಾರಿಗಳು ನ್ಯಾಯಾಧೀಶರಾಗಲು ಸಾಧ್ಯವಿಲ್ಲ. ಅಧಿಕಾರಿಗಳು ಕಾನೂನು ಕೈಗೆತ್ತಿಕೊಳ್ಳುವುದು ಸರಿಯಲ್ಲ. ವಿಚಾರಣೆಯಿಲ್ಲದೆ ಕ್ರಮ ಕೈಗೊಳ್ಳುವುದು ಸಂವಿಧಾನ ಬಾಹಿರ ಎಂದು ಬುಧವಾರ ಅಭಿಪ್ರಾಯಪಟ್ಟಿದೆ. ನ್ಯಾಯದ ಹೆಸರಿನಲ್ಲಿ ಯಾವುದೇ ಅರೋಪಿಯ ಮನೆಯನ್ನು ಧ್ವಂಸಗೊಳಿಸುವ ಅಧಿಕಾರ ಅಧಿಕಾರಿಗೆ ಇಲ್ಲ ಎಂದೂ ಸ್ಪಷ್ಟಪಡಿಸಿದೆ.
ಒಂದು ವೇಳೆ ಕಾನೂನು ಪಾಲಿಸದೆ ಮನೆಯನ್ನು ಧ್ವಂಸಗೊಳಿಸಿದರೆ ಸಂಬಂಧಪಟ್ಟ ಅಧಿಕಾರಿ ಪರಿಹಾರ ನೀಡಬೇಕಾಗುತ್ತದೆ ಎಂದು ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಕೆ.ವಿ.ವಿಶ್ವನಾಥನ್ ಅವರ ಪೀಠ ಹೇಳಿದೆ.
ಕೇವಲ ಮೌಖಿಕ ಆದೇಶಗಳ ಮೂಲಕ ನಿರ್ಧಾರ ಕೈಗೊಳ್ಳುವಂತಿಲ್ಲ. ಮನೆಯನ್ನು ಧ್ವಂಸಗೊಳಿಸುವುದಕ್ಕೂ ಮುನ್ನ ಷೋ ಕಾಸ್ ನೋಟಿಸ್ ನೀಡಬೇಕು. ಮುನ್ಸಿಪಲ್ ನಿಯಮಗಳ ಪ್ರಕಾರ 15 ದಿನಗಳ ಕಾಲಾವಕಾಶ ನೀಡಬೇಕು ಎಂದು ಸೂಚಿಸಿದೆ. ಕಟ್ಟಡದ ಮಾಲೀಕರಿಗೆ ರಿಜಿಸ್ಟರ್ ಪೋಸ್ಟ್ ಮೂಲಕ ನೋಟಿಸ್ ಕಳುಹಿಸಬೇಕು. ಈ ನೋಟಿಸ್ ನಲ್ಲಿ ಕಟ್ಟಡದ ಮಾಲೀಕರು ಕಟ್ಟಡ ಕಟ್ಟುವಾಗ ಯಾವ ನಿಯಮಗಳನ್ನು ಉಲ್ಲಂಘಿಸಿದ್ದಾರೆ. ಕಟ್ಟಡದ ಯಾವ ಭಾಗದಲ್ಲಿ ಧ್ವಸಂಗೊಳಿಸಲು ನಿರ್ಧರಿಸಲಾಗಿದೆ ಎಂಬ ಮಾಹಿತಿಯನ್ನು ನೀಡಬೇಕು ಎಂದು ಸೂಚಿಸಿದೆ.
ಒಂದು ವೇಳೆ ಮನೆ ಮಾಲೀಕರು ಸೂಕ್ತ ಉತ್ತರನೀಡಲು ವಿಫಲರಾದರೆ ಮಾತ್ರ ಕಟ್ಟಡ ಕೆಡವಲು ಅವಕಾಶವಿದೆ. ಆಗಲೂ ಕಟ್ಟಡದ ಧ್ವಂಸದ ಕಾರ್ಯಾಚರಣೆಯ ವಿಡಿಯೋ ಮಾಡಬೇಕು. ರಾಜ್ಯ ಸರ್ಕಾರ ಅಥವಾ ಅಧಿಕಾರಿಗಳು ಕಾನೂನು ಮೀರಿ ಅಧಿಕಾರ ಚಲಾಯಿಸುವಂತಿಲ್ಲ. ಪ್ರತಿಯೊಬ್ಬ ನಾಗರೀಕನಿಗೂ ಸಂವಿಧಾನ ರಕ್ಷಣೆಯನ್ನು ನೀಡಿದೆ ಎನ್ನುವುದನ್ನು ಅರಿತುಕೊಳ್ಳಬೇಕು ಎಂದೂ ಅಭಿಪ್ರಾಯಪಟ್ಟಿದೆ.
ಮುಂದಿನ ಆದೇಶ ನೀಡುವವರೆಗೆ ಯಾವುದೇ ಮನೆಯನ್ನು ಧ್ವಂಸಗೊಳಿಸುವಂತಿಲ್ಲ ಎಂಬ ಮಧ್ಯಂತರ ಆದೇಶವನ್ನು ಮುಂದುವರೆಸಿದೆ. ಆದರೆ ಈ ಆದೇಶ ರಸ್ತೆ ಮತ್ತು ಪಾದಾಚಾರಿ ರಸ್ತೆಗಳಲ್ಲಿ ನಿರ್ಮಿಸಿರುವ ಅಕ್ರಮ ಕಟ್ಟಡ, ಧಾರ್ಮಿಕ ಕಟ್ಟಡಗಳಿಗೆ ಅನ್ವಯಿಸುವುದಿಲ್ಲ.