ಬೆಂಗಳೂರು: ಸ್ವೀಟ್ ಅಂಗಡಿಯೊಂದರ ವ್ಯವಸ್ಥಾಪಕರ ಮನೆಯ ಬಾಗಿಲು ಮುರಿದು ಚಿನ್ನಾಭರಣ ಹಾಗೂ ನಗದು ಕಳ್ಳತನ ಮಾಡಿದ್ದ ಅಂತಾರಾಜ್ಯ ಆರೋಪಿಯೊಬ್ಬನನ್ನು ಸುಬ್ರಮಣ್ಯಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕೋಲಾರ ಜಿಲ್ಲೆಯ ನಾಗರಾಜ ಬಂಧಿತ ಆರೋಪಿ. ಆತನಿಂದ 25 ಲಕ್ಷ ರೂ. ಮೌಲ್ಯದ 208 ಗ್ರಾಂ ಚಿನ್ನಾಭರಣ, 1 ಕೆಜಿ ಬೆಳ್ಳಿ ವಸ್ತುಗಳು ಹಾಗೂ 2.5 ಲಕ್ಷ ಹಣ ವಶಪಡಿಸಿಕೊಳ್ಳಲಾಗಿದೆ.
62 ವರ್ಷದ ನಾಗರಾಜ ತಮಿಳುನಾಡಿನಲ್ಲಿ ವಾಸವಾಗಿದ್ದ. ಈತನ ವಿರುದ್ಧ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ 32 ಕಳ್ಳತನದ ಪ್ರಕರಣಗಳು ದಾಖಲಾಗಿವೆ. ಕೋಣನಕುಂಟೆ ಕ್ರಾಸ್ ನಲ್ಲಿ ವಾಸವಿರುವ ಕಾಂತಿ ಸ್ವೀಟ್ಸ್ ಮ್ಯಾನೇಜರ್ ನಾಗೇಶ್ ಆಯುಧ ಪೂಜೆ ನಿಮಿತ್ತ ವಹಿವಾಟು ಹೆಚ್ಚಾಗಿದ್ದರಿಂದ ರಾತ್ರಿ ಅಂಗಡಿಯಲ್ಲೇ ಉಳಿದುಕೊಂಡಿದ್ದರು. ಮರುದಿನ ಮನೆಗೆ ಮರಳಿದಾಗ ಬಾಗಿಲು ಒಡೆದಿರುವುದು ಕಂಡುಬಂದಿದೆ.
ಒಳಗೆ ಹೋಗಿ ನೋಡಿದಾಗ ಬೀರುವಿನಲ್ಲಿದ್ದ ಹಣ, ಆಭರಣಗಳು ಕಳ್ಳತನವಾಗಿರುವ ಬಗ್ಗೆ ತಿಳಿದು ಸುಬ್ರಮಣ್ಯಪುರ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ವಿವಿಧ ಆಯಾಮಗಳಲ್ಲಿ ಮಾಹಿತಿಯನ್ನು ಕಲೆ ಹಾಕಿ ಅತ್ತಿಬೆಲೆ ಬಸ್ ನಿಲ್ದಾಣದ ಬಳಿ ವ್ಯಕ್ತಿಯೊಬ್ಬನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಪೊಲೀಸರು ಆರೋಪಿ ವಾಸವಾಗಿದ್ದ ಕೃಷ್ಣಗಿರಿ ತಾಲ್ಲೂಕಿನ ಸೂಳಗೇರಿಯ ಮನೆಯಿಂದ 140 ಗ್ರಾಂ ಚಿನ್ನಾಭರಣ, 200 ಗ್ರಾಂ ಬೆಳ್ಳಿ ವಸ್ತುಗಳು ಹಾಗೂ 2.5 ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೆ ಆರೋಪಿಯು ತನ್ನ ಬಾಮೈದನಿಗೆ ನೀಡಿದ್ದ 67 ಗ್ರಾಂ ಚಿನ್ನಾಭರಣ ಹಾಗೂ 900 ಗ್ರಾಂ ಬೆಳ್ಳಿ ವಸ್ತುಗಳನ್ನು ವಶಪಡಿಸಿಕೊಳ್ಳುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.