ಸಂಡೂರು : ಮಹಾತ್ಮಗಾಂಧಿಯವರನ್ನು ಕೊಂದ ಗೋಡ್ಸೆಯಾಗಲಿ ಹಾಗೆಯೇ ಸಾವರ್ಕರ್ ಅವರಾಗಲೀ, ಗೋಳ್ವಾಲ್ಕರ್ ಅವರಾಗಲಿ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಜೈಲಿಗೆ ಹೋಗಿದ್ದಾರಾ ಎಂದು ಬಿಜೆಪಿ ಪರಿವಾರದ ಚರಿತ್ರೆಯನ್ನು ಕೆದಕಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಠೋರ ಪ್ರಶ್ನೆಗಳನ್ನು ಬಿಜೆಪಿ ಮುಂದಿಟ್ಟಿದ್ದಾರೆ.
ಸಂಡೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಬಿರುಸಿನ ಪ್ರಚಾರ ನಡೆಸಿದ ಅವರು ಬಿಜೆಪಿ, RSS ಪರಿವಾರದ ಯಾರೊಬ್ಬರೂ ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಒಂದೇ ಒಂದು ಉದಾಹರಣೆ ಇದೆಯೇ ಎಂದು ಅವರು ಪ್ರಶ್ನಿಸಿದರು.
ನಾವು ಕೊಟ್ಟ ಕಲ್ಯಾಣ ಕಾರ್ಯಕ್ರಮಗಳು ಪ್ರತಿಯೊಂದು ಮನೆ ತಲುಪಿವೆ. ಬಿಜೆಪಿಯವರದ್ದು ಕೇವಲ ಸುಳ್ಳುಗಳು ಮಾತ್ರ ಮನೆ ಮನೆ ತಲುಪುತ್ತಿವೆ. ನಮ್ಮ ಸರ್ಕಾರ ಇದ್ದಾಗ ಕೊಟ್ಟ ವಸತಿ ಶಾಲೆ, ಆಸ್ಪತ್ರೆ, ರಸ್ತೆ, ಸೇತುವೆ ಸೇರಿ ಹತ್ತು ಹಲವು ಭಾಗ್ಯಗಳು, ಗ್ಯಾರಂಟಿಗಳು ಪ್ರತಿಯೊಬ್ಬರ ಮನೆ ಬಾಗಿಲಿಗೆ ತಲುಪಿವೆ. ಬಿಜೆಪಿಯವರು ಜನರ ಕಲ್ಯಾಣಕ್ಕೆ ಕೊಟ್ಟ ಒಂದೇ ಒಂದು ಕಾರ್ಯಕ್ರಮ ನಿಮ್ಮ ಮನೆ ತಲುಪಿದೆಯಾ ಹೇಳಿ ಎಂದು ಸಿಎಂ ಪ್ರಶ್ನಿಸಿದರು.
ಕಾಂಗ್ರೆಸ್ ಪಕ್ಷದ ಡಾ.ಮನಮೋಹನ್ ಸಿಂಗ್ ಅವರು ಪ್ರಧಾನಿ ಆಗಿದ್ದಾಗ ಇಡೀ ದೇಶದ ರೈತರ ಸಾಲ ಮನ್ನಾ ಮಾಡಿದ್ದರು. ರಾಜ್ಯದಲ್ಲಿ ನಾನು ಹಿಂದೆ ಮುಖ್ಯಮಂತ್ರಿ ಆಗಿದ್ದಾಗ ರೈತರ 8165 ಕೋಟಿ ರೂಪಾಯಿ ಸಾಲ ಮನ್ನಾ ಮಾಡಲಾಗಿತ್ತು. ಯಡಿಯೂರಪ್ಪ ಅವರಿಗೂ ಸಾಲ ಮನ್ನಾ ಮಾಡಿ ಅಂದರೆ, ನನ್ನ ಬಳಿ ನೋಟು ಪ್ರಿಂಟ್ ಹಾಕುವ ಮೆಷಿನ್ ಇಲ್ಲ ಎಂದು ಉತ್ತರಿಸಿದ್ದರು. ಇದೇ ಬಿಜೆಪಿಗೂ ಕಾಂಗ್ರೆಸ್ಸಿಗೂ ಇರುವ ವ್ಯತ್ಯಾಸ.
ಮೊದಲ ಬಾರಿ ಮುಖ್ಯಮಂತ್ರಿಯಾಗಿ ಹಲವಾರು ಭಾಗ್ಯಗಳನ್ನು ಯಶಸ್ವಿಯಾಗಿ ಕೊಟ್ಟ ರೀತಿಯಲ್ಲೇ ಎರಡನೇ ಬಾರಿ ಮುಖ್ಯಮಂತ್ರಿಯಾಗಿ ವರ್ಷಕ್ಕೆ 56 ಸಾವಿರ ಕೋಟಿ ವೆಚ್ಚದಲ್ಲಿ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದೇವೆ ಎಂದರು.
ಗಣಿ ಲೂಟಿ ಮಾಡಿದ ಜನಾರ್ದನ ರೆಡ್ಡಿಯವರು, ಗಣಿ ಉದ್ಯಮಿಗಳಿಂದ ಹಫ್ತಾ ವಸೂಲಿ ಮಾಡಿದವರು ಓಟು ಕೊಡಿ ಅಂತ ಕೇಳೋಕೆ ನಿಮ್ಮ ಬಳಿಗೆ ಬರ್ತಾರೆ. ನಾನಾ ರೀತಿ ಸುಳ್ಳುಗಳನ್ನು ಹೇಳಿ ಮತ ಕೇಳ್ತಾರೆ. ಅವರಿಂದ ಸಂಡೂರಿನ ಅಭಿವೃದ್ಧಿ ಈ ಹಿಂದೆಯೂ ಆಗಿಲ್ಲ, ಮುಂದೆಯೂ ಆಗಲ್ಲ. ಈ.ತುಕಾರಾಮ್ ಸಂಸದರಾಗಿದ್ದಾರೆ. ಇವರ ಪತ್ನಿ ಅನ್ನಪೂರ್ಣಮ್ಮ ಸಂಡೂರಿನ ಶಾಸಕಿ ಆಗ್ತಾರೆ. ಇಬ್ಬರೂ ಸೇರಿ ಸಂಡೂರನ್ನು ಹೆಚ್ಚೆಚ್ಚು ಅಭಿವೃದ್ಧಿ ಮಾಡ್ತಾರೆ ಎಂದರು.

                                    