ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದ ವಿವಾದ ಭುಗಿಲೇಳುತ್ತಿದ್ದಂತೆ ಇದೆ ಮೊದಲ ಬಾರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ(ಮುಡಾ) ಸಾಮಾನ್ಯ ಸಭೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ನಿವೇಶನಗಳನ್ನು ಪಡೆದಿರುವ ವಿಷಯ ಕುರಿತು ತನಿಖೆ ನಡಯುತ್ತಿರುವ ಬೆನ್ನಲ್ಲೇ ಸಭೆ ನಡೆಯುತ್ತಿರುವುದು ತೀವ್ರ ಕುತೂಹಲ ಮೂಡಿಸಿದೆ.
ಮುಡಾದ ಪ್ರಭಾರ ಅಧ್ಯಕ್ಷರೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಭೆ ನಡೆಯುತ್ತಿದೆ. ಸಭೆಯಲ್ಲಿ ಶಾಸಕರಾದ ಜಿ. ಟಿ. ದೇವೇಗೌಡ, ಶ್ರೀವತ್ಸ, ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ದರ್ಶನ್, ಎಚ್ ವಿಶ್ವನಾಥ್, ಸಿ ಎನ್ ಮಂಜೇಗೌಡ, ವಿವೇಕಾನಂದ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಸಾಮಾನ್ಯ ಸಭೆಯಲ್ಲಿ ಭಾಗಿಯಾಗಿದ್ದಾರೆ.
ಸಭೆಯ ಹಿನ್ನೆಲೆಯಲ್ಲಿ ಮುಡಾ ಕಚೇರಿಗೆ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಜಿಲ್ಲಾಧಿಕಾರಿ ಲಕ್ಷ್ಮೀಕಾಂತ್ ರೆಡ್ಡಿ ಪ್ರತಿಕ್ರಿಯಿಸಿ ಹಲವು ತಿಂಗಳಿಂದ ಮುಡಾ ಸಭೆ ನಡೆದಿರಲಿಲ್ಲ. ಸಭೆ ನಡೆಯದ ಕಾರಣ ಸಾರ್ವಜನಿಕರಿಗೆ ಸಾಕಷ್ಟು ತೊಂದರೆ ಉಂಟಾಗಿತ್ತು. ಈ ಕಾರಣಕ್ಕೆ ಜನಪ್ರತಿನಿಧಿಗಳ ಸಭೆ ಕರೆಯಲಾಗಿದೆ. ಮುಖ್ಯಮಂತ್ರಿಗಳೂ ಕೂಡ ಮುಡಾ ಸದಸ್ಯರಾಗಿದ್ದಾರೆ. ಅವರಿಗೂ ನೋಟಿಸ್ ನೀಡಿದ್ದೇವೆ. ಮುಡಾ ಹಗರಣದ ಬಗ್ಗೆ ಅಜೆಂಡಾ ಹೊರಡಿಸಿಲ್ಲ. ಸಭೆಯಲ್ಲಿ ಹಗರಣದ 14 ಸೈಟುಗಳ ವಿಚಾರ ಪ್ರಸ್ತಾಪ ಮಾಡುವುದಿಲ್ಲ. ಚರ್ಚೆ ನಡೆಸಬೇಕಾದ ವಿಷಯಗಳ ಪಟ್ಟಿ ಮಾಡಿದ್ದೇವೆ. ಪಟ್ಟಿಯಲ್ಲಿರುವ ವಿಷಯಗಳನ್ನು ಕುರಿತು ಮಾತ್ರ ಚರ್ಚೆ ನಡೆಸುತ್ತೇವೆ ಎಂದು ಹೇಳಿದ್ದಾರೆ.
ಸಭೆಗೂ ಮುನ್ನ ಮಾತನಾಡಿದ ಶಾಸಕ ಜಿ.ಟಿ.ದೇವೇಗೌಡ 50:50 ಅನುಪಾತ ರದ್ದಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಅಕ್ರಮವಾಗಿ ಹಂಚಿಕೆಯಾಗಿದ್ದರೆ ನಿವೇಶನಗಳನ್ನು ಸರ್ಕಾರ ವಾಪಸ್ ಪಡೆಯಲಿ. 50:50 ಅನುಪಾತದಡಿ ಭೂಮಿ ನೀಡಲಾಗುತ್ತದೆ. ನಿವೇಶನಕ್ಕೆ ಬದಲಾಗಿ 4 ಪಟ್ಟು ಭೂಮಿ ಕೊಡಬೇಕಾಗುತ್ತದೆ. ಇದರಿಂದ ಮುಡಾಗೆ ಹೆಚ್ಚು ನಷ್ಟ ಉಂಟಾಗುತ್ತದೆ. ನಿಯಮಾನುಸಾರ 50:50 ಅನುಪಾತದಡಿಯಲ್ಲೇ ಸೈಟ್ ನೀಡಲಿ ಎಂದು ಹೇಳೀದ್ದಾರೆ.