ಬಿಎಂಟಿಸಿ ಚಾಲಕ ಸಾವು; ಬ್ರೇಕ್ ಒತ್ತಿ ಅನಾಹುತ ತಪ್ಪಿಸಿದ ಕಂಡಕ್ಟರ್

Most read

ಬೆಂಗಳೂರು: ಬಿಎಂಟಿಸಿ ಬಸ್ ಚಾಲನೆ ಮಾಡುತ್ತಿದ್ದಾಗಲೇ ಚಾಲಕ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಆದರೆ ನಿರ್ವಾಹಕ ಕೂಡಲೆ ಬಸ್ ನ ಬ್ರೇಕ್ ಒತ್ತಿ ಅಪಘಾತವಾಗುವುದನ್ನು ತಪ್ಪಿಸಿದ್ದಾರೆ.


ಹಾಸನ ನಿವಾಸಿ ಕಿರಣ್ ಕುಮಾರ್ (38) ಮೃತಪಟ್ಟ ಚಾಲಕ. ಬುಧವಾರ ನೆಲಮಂಗಲದಿಂದ ದಾಸನಪುರ ಘಟಕಕ್ಕೆ ಬಸ್ ಚಲಾಯಿಸಿಕೊಂಡು ಬರುತ್ತಿದ್ದರು. ನೆಲಮಂಗಲ ತಾಲ್ಲೂಕಿನ ಬಿನ್ನಮಂಗಲ ಬಸ್ ನಿಲ್ದಾಣದ ಹತ್ತಿರ ಬರುತ್ತಿದ್ದಂತೆ ಚಾಲಕ ಕಿರಣ್ ಕುಮಾರ್‌ಗೆ ಹೃದಯಾಘಾತವಾಗಿದೆ. ನಿಯಂತ್ರಣ ತಪ್ಪಿ ಅವರು ವಾಲಿದ್ದಾರೆ. ಕೂಡಲೇ ನಿರ್ವಾಹಕ ಓಬಳೇಶ್ ಓಡಿ ಬಂದು ಬ್ರೇಕ್ ಹಾಕಿ ವಾಹನವನ್ನು ನಿಲ್ಲಿಸಿದ್ದಾರೆ. ಈ ಮೂಲಕ ಅವರು ಆಗಬಹುದಾಗಿದ್ದ ದೊಡ್ಡ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಕೂಡಲೇ ಚಾಲಕ ಕಿರಣ್ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಅವರು ಮೃತಪಟ್ಟಿದ್ದಾರೆ ಎಂದು ಬಿಎಂಟಿಸಿ ಅಧಿಕಾರಿಗಳು ತಿಳಿಸಿದ್ದಾರೆ.


ಈ ಬಗೆ ಪ್ರತಿಕ್ರಿಯಿಸಿರುವ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಕಂಡಕ್ಟರ್ ಧೈರ್ಯವನ್ನು ಮೆಚ್ಚಲೇಬೇಕು. ತಕ್ಷಣ ನೆರವಿಗೆ ಧಾವಿಸಿದ ಕಂಡಕ್ಟರ್ ಗೆ ಅಭಿನಂದನೆ ಸಲ್ಲಿಸುತ್ತೇನೆ. ಪ್ರತಿ ವರ್ಷ ಕೆ ಎಸ್ ಆರ್ ಟಿಸಿ ಮತ್ತು ಬಿಎಂಟಿಸಿ ಸೇರಿ ಎಲ್ಲಾ ಸಿಬ್ಬಂದಿಗೂ ಜಯದೇವ ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಗುತ್ತದೆ ಎಂದು ಹೇಳಿದ್ದಾರೆ. ಚಾಲಕನ ಕುಟುಂಬಕ್ಕೆ ಇಲಾಖೆಯಿಂದ ಪರಿಹಾರ ನೀಡುತ್ತೇವೆ ಎಂದೂ ಅವರು ಭರವಸೆ ನೀಡಿದ್ದಾರೆ.

More articles

Latest article