ಕೈಗಾರಿಕೆ ಸ್ಥಾಪನೆ ಅನುಮತಿಗೆ ʼಉಮಾʼ ಸಾಫ್ಟ್ ವೇರ್; ಈ ತಂತ್ರಾಂಶ ಏಕೆ ಮತ್ತು ಹೇಗೆ ಕೆಲಸ ಮಾಡಲಿದೆ ?

Most read

ಏಕಗವಾಕ್ಷಿ ಯೋಜನೆಯಡಿಯಲ್ಲಿ ಹಸಿರು ನಿಶಾನೆ ನೀಡಲಾಗಿರುವ ಕೈಗಾರಿಕಾ ಯೋಜನೆಗಳಿಗೆ ಗರಿಷ್ಠ 100 ದಿನಗಳ ಒಳಗಾಗಿ ಅಗತ್ಯವಿರುವ ಎಲ್ಲ ಅನುಮೋದನೆಗಳನ್ನು ನೀಡಲು ʼಉಮಾʼ (ಉದ್ಯೋಗ ಮಿತ್ರ ಅಸಿಸ್ಟೆಂಟ್) ಎಂಬ ತಂತ್ರಾಂಶವನ್ನು ಸರ್ಕಾರ ಅಭಿವೃದ್ಧಿಪಡಿಸಿದೆ. ಮೈಕ್ರೋಸಾಫ್ಟ್ ಅಭಿವೃದ್ದಿಪಡಿಸಿರುವ ಈ ಸಾಫ್ಟ್ ವೇರ್ ಅನ್ನು 2025ರ ಫೆಬ್ರವರಿ ತಿಂಗಳಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಅನಾವರಣಗೊಳಿಸಲು ಸರ್ಕಾರ ಉದ್ಧೇಶಿಸಿದೆ.


ಕೈಗಾರಿಕೆಗಳ ತ್ವರಿತ ಸ್ಥಾಪನೆಗೆ ಅನುಷ್ಠಾನದ ಪ್ರಕ್ರಿಯೆಗಳನ್ನು ಸುಗಮಗೊಳಿಸುವುದು ಅವಶ್ಯಕವಾಗಿದೆ. ಈ ಹಿನ್ನೆಲೆಯಲ್ಲಿ ‘ಉಮಾ’ ತಂತ್ರಾಂಶ ಅಭಿವೃದ್ಧಿಪಡಿಸಲಾಗಿದ್ದು ಏಕಗವಾಕ್ಷಿ ಯೋಜನೆಯಡಿ ಹಸಿರು ನಿಶಾನೆ ಪಡೆದ ಯೋಜನೆಗಳ ಅನುಷ್ಠಾನಕ್ಕೆ ವೇಗ ನೀಡಲಾಗುತ್ತದೆ ಎಂದು ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ತಿಳಿಸಿದ್ದಾರೆ.

ಕೆಲವು ರಾಜ್ಯಗಳಲ್ಲಿ ಕೈಗಾರಿಕೆಗಳಿಗೆ ಬಂಡವಾಳ ಹೂಡಿಕೆ ಮಾಡುವ ಯೋಜನೆಗಳಿಗೆ 60-70 ದಿನಗಳ ಒಳಗಾಗಿ ಅನುಮೋದನೆ ನೀಡಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ 300 ದಿನಗಳವರೆಗೆ ಕಾಲಾವಕಾಶ ಬೇಕಾಗುತ್ತಿತ್ತು. ಇದರಿಂದ ಅದೆಷ್ಟೋ ಕೈಗಾರಿಕೆಗಳು ರಾಜ್ಯದ ಕೈತಪ್ಪಿ ಹೋಗುತ್ತಿದ್ದವು. ಇನ್ನು ಮುಂದೆ ಆ ಸಮಸ್ಯೆ ಇರುವುದಿಲ್ಲ ಎಂದು ನಿರೀಕ್ಷಿಸಲಾಗಿದೆ.


ಕರ್ನಾಟಕದಲ್ಲಿ ಏಕೆ ಹೂಡಿಕೆ ಮಾಡಬೇಕು? ಹೇಗೆ ಮಾಡಬೇಕು? ಏನೆಲ್ಲಾ ಸೌಲಬ್ಯಗಳು ಲಭ್ಯವಾಗುತ್ತವೆ ಎಂಬ ಮಾಹಿತಿ ಎಲ್ಲ ಭಾಷೆಗಳಲ್ಲೂ ಸಾಫ್ಟ್ ವೇರ್ ನಲ್ಲಿ ಲಭ್ಯವಾಗಲಿದೆ. ಇದಕ್ಕಾಗಿ ಕೃತಕ ಬುದ್ದಿಮತ್ತೆಯ ನೆರವನ್ನು ಪಡೆಯಲಾಗಿದೆ. ಉದ್ಯಮಿಗಳು ತಮಗೆ ಬೇಕಾದ ಧ್ವನಿ ಮಾಧ್ಯಮದಲ್ಲೂ ಮಾಹಿತಿಯನ್ನು ಪಡೆಯಲು ಅವಕಾಶ ಇದೆ. ದೇಶದಲ್ಲೇ ಇಂತಹ ವ್ಯವಸ್ಥೆ ಹೊಂದಿರುವ ಮೊದಲ ರಾಜ್ಯ ಕರ್ನಾಟಕ ಎಂಬ ಹೆಗ್ಗಳಿಕೆ ನಮ್ಮದು ಎಂದು ಸಚಿವರು ತಿಳಿಸಿದ್ದಾರೆ.

More articles

Latest article