Thursday, December 11, 2025

ಅಮೆರಿಕದ ಪಾಲಿಗೆ ಸುವರ್ಣ ಯುಗದ ಆರಂಭ: ಟ್ರಂಪ್

Most read

ಫ್ಲೋರಿಡಾ: ಮಹತ್ತರವಾದ ಉದ್ದೇಶಕ್ಕಾಗಿಯೇ ದೇವರು ನನ್ನನ್ನು ಬದುಕುಳಿಸಿದ್ದಾರೆ. ಅಮೆರಿಕದ ಪಾಲಿಗೆ ಸುವರ್ಣ ಯುಗದ ಆರಂಭಕ್ಕಾಗಿ ಈ ಬಹುಮತ ಲಭಿಸಿದೆ ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆಲುವಿನ ಸಮೀಪ ತಲುಪಿರುವ ರಿಪಬ್ಲಿಕನ್ ಪಕ್ಷದ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.


ಫ್ಲೋರಿಡಾದ ವೆಸ್ಟ್ ಪಾಮ್ ಬೀಚ್‌ನಲ್ಲಿ ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಬುಧವಾರ ಮಾತನಾಡಿದ ಅವರು, ಅಭೂತಪೂರ್ವ ಹಾಗೂ ಸಂಪೂರ್ಣ ಬೆಂಬಲವನ್ನು ಅಮೆರಿಕ ನೀಡಿದೆ ಎಂದು ಹೇಳಿದ್ದಾರೆ. ಅಮೆರಿಕನ್ನರ ಪಾಲಿಗೆ ಇದೊಂದು ಅಭೂತಪೂರ್ವ ವಿಜಯ. ಅಮೆರಿಕವನ್ನು ಮತ್ತೊಮ್ಮೆ ಅದ್ಭುತ ರಾಷ್ಟ್ರವನ್ನಾಗಿಸಲು ಈ ಗೆಲುವು ಸಹಕಾರಿಯಾಗಿದೆ. ಈ ದೇಶವನ್ನು ರಕ್ಷಿಸಲು ಹಾಗೂ ಅಮೆರಿಕದ ಹಿರಿಮೆಯನ್ನು ಕಾಪಾಡುವ ಸಲುವಾಗಿಯೇ ದೇವರು ನನ್ನನ್ನು ರಕ್ಷಿಸಿದ್ದಾನೆ ಎಂದು ಟ್ರಂಪ್ ಹೇಳಿದ್ದಾರೆ. ಈ ಮೂಲಕ ಅವರು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಮೇಲೆ ನಡೆದ ಎರಡು ಗುಂಡಿನ ದಾಳಿಯನ್ನು ಪರೋಕ್ಷವಾಗಿ ನೆನಪಿಸಿಕೊಂಡಿದ್ದಾರೆ.


ರಾಜಕೀಯ ವಲಯದಲ್ಲಿ ಇದೊಂದು ಅನಿರೀಕ್ಷಿತ ವಿದ್ಯಮಾನ. ಇದನ್ನು ಯಾರೂ ಊಹಿಸಿರಲಿಲ್ಲ. ನಮ್ಮ ದೇಶದ ಸದ್ಯದ ಪರಿಸ್ಥಿತಿಯನ್ನು ಬಲಪಡಿಸಲು ಈ ಗೆಲುವು ಸಹಕಾರಿಯಾಗಲಿದೆ. ನಮ್ಮ ಗಡಿಯನ್ನು ಭದ್ರಪಡಿಸಲಾಗುವುದು. ನಮ್ಮ ದೇಶಕ್ಕೆ ಸಂಬಂಧಿಸಿದ ಎಲ್ಲವನ್ನೂ ಸರಿಪಡಿಸಲಾಗುವುದು ಎಂದು ಟ್ರಂಪ್ ಹೇಳಿದ್ದಾರೆ. ನೀವು, ನಿಮ್ಮ ಕುಟುಂಬ ಹಾಗೂ ನಿಮ್ಮ ಭವಿಷ್ಯದ ಪ್ರತಿಯೊಂದು ದಿನವನ್ನೂ ಸುರಕ್ಷಿತವಾಗಿಡಲು ನಾನು ಹೋರಾಡುತ್ತೇನೆ. ಅಮೆರಿಕದ ಮಕ್ಕಳು ಹಾಗೂ ಪ್ರತಿಯೊಬ್ಬರೂ ಅದ್ಭುತ ಜೀವನ ನಡೆಸಲು ಅಗತ್ಯವಿರುವುದನ್ನು ಸ್ಥಾಪಿಸದ ಹೊರತೂ ನಾನು ವಿರಮಿಸುವುದಿಲ್ಲಎಂದು ಟ್ರಂಪ್ ಘೋಷಿಸಿದ್ದಾರೆ.

More articles

Latest article