ಉತ್ತರ ಪ್ರದೇಶದ ಮದರಸಾ ಕಾನೂನನ್ನು ಅಸಂವಿಧಾನಿಕ ಎಂದು ಘೋಷಿಸಿದ ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳ ಮೇಲಿನ ತೀರ್ಪನ್ನು ಸುಪ್ರೀಂ ಕೋರ್ಟ್ ಮಂಗಳವಾರ ಪ್ರಕಟಿಸಿದ್ದು, ಉತ್ತರ ಪ್ರದೇಶ ಮದರಸಾ ಶಿಕ್ಷಣ ಕಾಯ್ದೆ ಸಾಂವಿಧಾನಿಕ ಎಂದು ಹೇಳುವ ಮೂಲಕ ಅಲಹಾಬಾದ್ ಕೋರ್ಟ್ ತೀರ್ಪನ್ನು ತಳ್ಳಿ ಹಾಕಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು ಹೈಕೋರ್ಟ್ ತೀರ್ಪಿನ ವಿರುದ್ಧ ಆದೇಶ ಪ್ರಕಟಿಸಿ, ಉತ್ತರ ಪ್ರದೇಶ ಮದರಸಾ ಕಾನೂನನ್ನು ಸಾಂವಿಧಾನಿಕ ಎಂದು ಹೇಳಿದೆ.
ಮಾರ್ಚ್ 22 ರಂದು, ಅಲಹಾಬಾದ್ ಹೈಕೋರ್ಟ್ ಈ ಕಾಯ್ದೆಯನ್ನು ಅಸಂವಿಧಾನಿಕ ಮತ್ತು ಜಾತ್ಯತೀತತೆಯ ತತ್ವದ ಉಲ್ಲಂಘನೆ ಎಂದು ಘೋಷಿಸಿತ್ತು. ನಂತರ ಏಪ್ರಿಲ್ 5 ರಂದು, ಸಿಜೆಐ ನೇತೃತ್ವದ ಪೀಠವು ಉತ್ತರ ಪ್ರದೇಶ ಬೋರ್ಡ್ ಆಫ್ ಮದರಸಾ ಎಜುಕೇಶನ್ ಆಕ್ಟ್, 2004 ಅನ್ನು ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿಗೆ ತಡೆಯಾಜ್ಞೆ ನೀಡಿ ಸುಮಾರು 17 ಲಕ್ಷ ಮದರಸಾ ವಿದ್ಯಾರ್ಥಿಗಳಿಗೆ ಶಿಕ್ಷಣ ಮುಂದುವರೆಸುವಂತೆ ನೋಡಿಕೊಂಡಿತ್ತು.
ಹೈಕೋರ್ಟ್ ತೀರ್ಪಿನ ವಿರುದ್ಧ ಅಂಜುಮ್ ಕಡಾರಿ ಸಲ್ಲಿಸಿದ ಪ್ರಮುಖ ಸೇರಿದಂತೆ ಎಂಟು ಅರ್ಜಿಗಳ ತೀರ್ಪನ್ನು ಸುಪ್ರೀಂಕೋರ್ಟ್ ಅಕ್ಟೋಬರ್ 22 ರಂದು ಕಾಯ್ದಿರಿಸಿತ್ತು. ಇದೀಗ ತೀರ್ಪು ಪ್ರಕಟಗೊಂಡಿದ್ದು, ಕಾನೂನು ಸಂವಿಧಾನಿಕವಾಗಿದೆ ಎಂದು ಕಾನೂನು ಸಿಂಧುತ್ವವನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿದಿದೆ.
ಜೊತೆಗೆ ಶಿಕ್ಷಣದ ಗುಣಮಟ್ಟವನ್ನು ನಿಗದಿಪಡಿಸುವುದು ಸರ್ಕಾರದ ಹಕ್ಕು ಎಂದು ನ್ಯಾಯಾಲಯ ಹೇಳಿದೆ. ಇದೀಗ ಸುಪ್ರೀಂ ಕೋರ್ಟ್‌ನ ತೀರ್ಪಿನಿಂದ ಮದರಸಾಗಳಿಗೆ ಸರ್ಕಾರಿ ಮಾನ್ಯತೆ ಸಿಗಲು ದಾರಿ ಸುಗಮವಾಗಿದೆ.