ಬೆಂಗಳೂರು; ಮೂರು ದಿನ ದೀಪಾವಳಿ, ಕನ್ನಡ ರಾಜ್ಯೋತ್ಸವ ಮತ್ತು ವಾರಾಂತ್ಯದ ರಜೆ ಅನುಭವಿಸಿ ಭಾನುವಾರ ಸಂಜೆ ಮತ್ತು ಸೋಮವಾರ ಬೆಳಗ್ಗೆ ಬೆಂಗಳೂರು ಪ್ರವೇಶಿಸಲು ನಾಗರೀಕರು ಹರ ಸಾಹಸ ಪಡುತ್ತಿದ್ದಾರೆ. 20 ಜಿಲ್ಲೆಗಳಿಗೆ ಸಂಪರ್ಕ ಕಲ್ಪಿಸುವ ತುಮಕೂರು ರಸ್ತೆ, ಮೈಐಸೂರು ರಸ್ತೆ, ದೇವನಹಳ್ಳಿ ರಸ್ತೆಗಳಲ್ಲಿ ಸಾಗಿ ಬರುತ್ತಿರುವ ವಾಹನಗಳು ಆಮೆ ವೇಗದಲ್ಲಿ ಚಲಿಸುತ್ತಿವೆ. ಬಸ್ಸು, ಕಾರು , ಕ್ಯಾಬ್ ನಿಧಾನ ಎಂದು ತುಮಕೂರು ರಸ್ತೆಯ ನಾಗಸಂದ್ರ, ಕೆಂಗೇರಿ ಮೆಟ್ರೋ ನಿಲ್ದಾಣಗಳಲ್ಲೂ ಪ್ರಯಾಣಿಕರ ಜನಜಾತ್ರೆಯೇ ನೆರದಿದೆ.
ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್ ! ಜಾಮ್ ! ಬಸ್ಸು ಕಾರುಗಳಲ್ಲಿ ಹೋಗುವವರು ಮೆಟ್ರೋ ಹತ್ತಬೇಕಿತ್ತುಎಂದು ಮೆಟ್ರೋ ಹತ್ತಲು ಬಂದವರು ಬಸ್ಸು, ಆಟೋ ಕ್ಯಾಬ್ ಗಳಲ್ಲೇ ಹೋಗಬೇಕಿತ್ತು ಎಂದು ಪೇಚಾಡುತ್ತಿದ್ದ ದೃಶ್ಯಗಳು ಸಾಮಾನ್ಯವಾಗಿದ್ದವು. ಗೊರಗುಂಟೆಪಾಳ್ಯ, ಯಶವಂತಪುರ, ತುಮಕೂರು ರಸ್ತೆ. ಹೆಬ್ಬಾಳ ಸೇರಿದಂತೆ ಹಲವು ರಸ್ತೆಗಳಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಪೊಲೀಸರು ಹರಸಾಹಸಪಡುತ್ತಿದ್ದಾರೆ.
ಇನ್ನು ಸರ್ಕಾರಿ ಮತ್ತು ಖಾಸಗಿ ಕಂಪನಿಗಳ ಉದ್ಯೋಗಿಗಳು ಕಚೇರಿ ತಲುಪಲಾಗದೆ ಗೊಣಗಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ಅರ್ಧ ದಿನ ರಜೆ ಕೇಳಿದರೆ ಇನ್ನೂ ಕೆಲವರು ತಡವಾಗಿ ಬರುತ್ತೇನೆ ಎಂದು ಬಾಸ್ ಗಳಿಗೆ ಮೊಬೈಲ್ ಮೂಲಕ ವಿನಂತಿಸಿಕೊಳ್ಳುತ್ತಿದ್ದ ದೃಶ್ಯಗಳು ಕಂಡು ಬಂದವು.
ಭಾನುವಾರ 4 ಗಂಟೆಯ ನಂತರವೇ ಟ್ರಾಫಿಕ್ ದಟ್ಟಣೆ ಉಂಟಾಗಿತ್ತು. ಸೋಮವಾರ ಬೆಳಗ್ಗೆಯೂ ಇದೇ ಪರಿಸ್ಥಿತಿ ಮುಂದುವರೆದಿತ್ತು. ಗೊರಗುಂಟೆ ಪಾಳ್ಯ ಮೇಲ್ಸೇತುವೆ ಮೇಲೆ ಕಿಲೋಮೀಟರ್ ಉದ್ದ ವಾಹನಗಳು ನಿಂತಿದ್ದವು. ಸೋಮವಾರ 12 ಗಂಟೆಯವರೆಗೂ ಇದೇ ಪರಿಸ್ಥಿತಿ ನಿರ್ಮಾಣವಾಗಿತ್ತು. ನಂತರ ವಾಹನ ದಟ್ಟಣೆ ಕರುಗುತ್ತಾ ಬಂದಿತು ಎಂದು ಸಂಚಾರಿ ಪೊಲೀಸರು ತಿಳಿಸಿದ್ದಾರೆ.