ವಕ್ಫ್ ಸ್ವತ್ತು ರಾಷ್ಟ್ರೀಕರಣಗೊಳಿಸಿ; ಯತ್ನಾಳ: ಈತ ಹುಚ್ಚ ಎಂದ ಡಿಕೆಶಿ

Most read

ಬೆಂಗಳೂರು: ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಒತ್ತಾಯಿಸಿ ಬಿಜೆಪಿ ಮುಖಂಡ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

ಈ ಪತ್ರ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ವಕ್ಫ್ ಮಂಡಳಿಯು ದೇಶದಾದ್ಯಂತ ರೈತರು, ಭೂಮಾಲೀಕರು, ದೇವಸ್ಥಾನಗಳು, ಟ್ರಸ್ಟ್ಗಳು ಮತ್ತು ಮಠಗಳ ಜಮೀನುಗಳ ಮೇಲೆ ಹಕ್ಕು ಸಾಧಿಸಲು ಪ್ರಯತ್ನ ನಡೆಸುತ್ತಿವೆ. ಈ ಅನಿಯಂತ್ರಿತ, ಸ್ಪಷ್ಟ ಉಲ್ಲಂಘನೆಯನ್ನು ಗಮನದಲ್ಲಿಟ್ಟುಕೊಂಡು ವಕ್ಫ್ ಆಸ್ತಿಗಳನ್ನು ರಾಷ್ಟ್ರೀಕರಣಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದೇನೆ ಎಂದು ತಿಳಿಸಿದ್ದಾರೆ.

ದೇಶದ ಎಲ್ಲಾ ಪ್ರಜೆಗಳಿಗೂ ಭೂಮಿಯ ಮೇಲೆ ಸಮಾನ ಹಕ್ಕಿದೆ. ವಕ್ಫ್ ನ ಉದ್ದೇಶವು ಕಲ್ಯಾಣ ಮತ್ತು ಸಮಾಜ ಸೇವೆಯಾಗಿದ್ದರೆ, ಭಾರತವು ಜಾತ್ಯತೀತ ರಾಷ್ಟ್ರವಾಗಿರುವುದರಿಂದ ಪಕ್ಷಪಾತ ಮತ್ತು ಧಾರ್ಮಿಕ ತಾರತಮ್ಯವಿಲ್ಲದೆ ಇದನ್ನು ಮಾಡಬೇಕಾಗಿದೆ. ದೇಶದ ಸಂಪನ್ಮೂಲ ಯಾವುದೇ ಒಂದು ಕೋಮಿಗೆ ಸೇರುವುದು ಜಾತ್ಯತೀತ ತತ್ವಕ್ಕೆ ವಿರುದ್ಧವಾಗಿರುತ್ತದೆ. ಆದ್ದರಿಂದ, ಅದನ್ನು ಸದ್ಬಳಕೆ ಮಾಡುವ ಸದುದ್ದೇಶದಿಂದ ಪ್ರಧಾನಿ ಅವರಿಗೆ ಮನವಿ ಸಲ್ಲಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.


ಯತ್ನಾಳ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೆಲವರು ಹುಚ್ಚರಿರುತ್ತಾರೆ, ಅವರ ಬಗ್ಗೆ ಮಾತನಾಡುವುದಿಲ್ಲ ಎಂದು ಯತ್ನಾಳ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ. ಮಾನಸಿಕ ಸ್ಥಿತಿ ಸರಿಯಿಲ್ಲದವರ ಬಗ್ಗೆ ನಾನು ಮಾತನಾಡಲು ಹೋಗಲ್ಲ ಎಂದು ಹೇಳಿದ್ದಾರೆ.

More articles

Latest article