ಏನಿದು ವಕ್ಫ್ ತಿದ್ದುಪಡಿ ಕಾಯ್ದೆ?ಯಾಕೆ ಇಷ್ಟು ವಿರೋಧ ? 

Most read

ವಕ್ಫ್ ಎಂದರೇನು ? 

ಇದು ವಿಶಿಷ್ಟವಾಗಿ ಆಸ್ತಿಗಳನ್ನು ಮರುಪಡೆಯುವ ಉದ್ದೇಶವಿಲ್ಲದೆ ಮುಸ್ಲಿಂ ಧಾರ್ಮಿಕ ಅಥವಾ ದತ್ತಿ ಉದ್ದೇಶಗಳಿಗಾಗಿ ಕಟ್ಟಡ, ಜಮೀನು ಅಥವಾ ಇತರ ಸ್ವತ್ತುಗಳನ್ನು ದಾನ ಮಾಡುವುದೇ ವಕ್ಫ್. 

ವಕ್ಫ್ ತಿದ್ದುಪಡಿ ಕಾಯ್ದೆಗೆ ಮುಸ್ಲಿಮರ ವಿರೋಧಕ್ಕೆ 5 ಪ್ರಮುಖ ಕಾರಣಗಳು ಏನು?? 

1. Wakf By User ತೆಗೆದಿದ್ದಾರೆ. 

ಅಂದರೆ 100/200 ವರ್ಷಗಳಿಂದ ಎಲ್ಲಿ ಮಸೀದಿ ಇದೆಯೋ ಆ ಮಸೀದಿ ವಕ್ಫ್ ಆಸ್ತಿ. ಪುರಾತನ ದರ್ಗಾಗಳು ವಕ್ಫ್ ಆಸ್ತಿ. ಪುರಾತನ ಖಬರಸ್ತಾನಗಳು ವಕ್ಫ್ ಆಸ್ತಿ. ಇದು BY USER. ಒಂದು ವೇಳೆ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಯಾದರೆ 

ಪ್ರತಿ ಮಸೀದಿ, ಪ್ರತಿ ದರ್ಗಾ, ಪ್ರತಿ ಸ್ಮಶಾನವು ವಕ್ಫ್ ಆಸ್ತಿ ಅಲ್ಲ ಎಂದು ಸರ್ಕಾರ ಹೇಳಿದರೆ ಅಚ್ಚರಿ ಇಲ್ಲ. 

ಯಾಕೆಂದರೆ ಇದು ವಕ್ಫ್ ಆಸ್ತಿಯೋ ಅಲ್ಲವೋ ಎಂದು ನಿರ್ಧರಿಸುವ ಅಧಿಕಾರ ವಕ್ಫ್ ಬೋರ್ಡ್ ಗೆ ಇರುವುದಿಲ್ಲ. ಬದಲಾಗಿ ಆಯಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ನೀಡಲಾಗುತ್ತದೆ. 

ಉತ್ತರ ಪ್ರದೇಶದಂತಹ ರಾಜ್ಯದಲ್ಲಿ ಇದು ವಕ್ಫ್ ಆಸ್ತಿ, ಇದು ಸರ್ಕಾರದ ಆಸ್ತಿ ಅಲ್ಲ ಅಂತ ಅದೆಷ್ಟು ಅಧಿಕಾರಿಗಳು ಆದೇಶ ನೀಡುತ್ತಾರೆ ಎಂಬುದು ಸಂದೇಹ. ಮುಸಲ್ಮಾನರಿಗೆ ದರ್ಗಾಗಳು ಮಸೀದಿಗಳು ಇಲ್ಲದಂತೆ ಮಾಡುವ ತಿದ್ದುಪಡಿ ಕಾಯ್ದೆ ಇದು. 

2. ವಕ್ಫ್ ಬೋರ್ಡ್ ನಲ್ಲಿ ಇನ್ನು ಮುಸ್ಲಿಮರೇತರರು ಇರಲಿದ್ದಾರೆ : ಹೌದು…. ಇಷ್ಟು ದಿನ ವಕ್ಫ್ ಬೋರ್ಡ್ ನಲ್ಲಿ ಕೇವಲ ಮುಸ್ಲಿಮರು ಮಾತ್ರ ಇದ್ದರು.  ಕಾರಣ ಮುಸ್ಲಿಮರಿಗೆ ಶರೀಯ ಕಾನೂನು ತಿಳಿದಿರುತ್ತೆ. ಒಂದು ವೇಳೆ ಈ ತಿದ್ದುಪಡಿ ಕಾಯ್ದೆ ಜಾರಿಯಾದರೆ ವಕ್ಫ್ ಬೋರ್ಡ್ ನಲ್ಲಿ ಮುಸ್ಲಿಮರಲ್ಲದ ವ್ಯಕ್ತಿಗಳು ಇರಲಿದ್ದಾರೆ. ಸಂಘಿ ಮನಸ್ಥಿತಿಯ ವ್ಯಕ್ತಿ ವಕ್ಫ್ ಬೋರ್ಡ್ ಗೆ ಬಂದರೆ ಮುಸ್ಲಿಮರಿಗೆ ಏನು ಒಳಿತು ಮಾಡೋಕೆ ಸಾಧ್ಯ ಅಂತ ಊಹೆ ಮಾಡಬಹುದು. 

3. ವಕ್ಫ್ ಆಸ್ತಿ ನೋಂದಣಿ ಅಧಿಕಾರ ಇರುವುದಿಲ್ಲ: 

ವಕ್ಫ್ ಬೋರ್ಡ್ ಆಸ್ತಿ ನೋಂದಣಿ ಮಾಡುವ ಅಧಿಕಾರ ಇನ್ನು ವಕ್ಫ್ ಬೋರ್ಡ್ ಗೆ ನೀಡಲಾಗುವುದಿಲ್ಲ. ಸೆಕ್ಷನ್ 40 ತೆಗೆದಿದ್ದಾರೆ. ಬದಲಿಗೆ ಆಯಾ ಜಿಲ್ಲೆ ಜಿಲ್ಲಾಧಿಕಾರಿ ಪರಿಶೀಲನೆ ನಡೆಸಿ ಆದೇಶ ಕೊಟ್ಟರೆ ಮಾತ್ರ ವಕ್ಫ್ ಆಸ್ತಿ ನೋಂದಣಿ ಮಾಡಲಾಗುತ್ತೆ. 

4. ಯಾರು ಬೇಕಾದರೂ ವಕ್ಫ್ ಗೆ ಆಸ್ತಿ ದಾನ ಮಾಡುವಂತಿಲ್ಲ. 

ಅದಿರಲಿ ಇನ್ನೊಂದು ಅಚ್ಚರಿಯ ಅಂಶ ವಕ್ಫ್ ಅಮೆಂಡ್ ಮೆಂಟ್ ಬಿಲ್ ನಲ್ಲಿ ಇದೆ. ಇನ್ನು ಯಾರು ಬೇಕಾದರೂ ವಕ್ಫ್ ಗೆ ಆಸ್ತಿ ದಾನ ಮಾಡುವಂತಿಲ್ಲ. ವಕ್ಫ್ ಗೆ ದಾನ ಮಾಡುವವರು ಮುಸ್ಲಿಮರಾಗಿರಬೇಕು. ಅಥವಾ ಕನಿಷ್ಟ 5 ವರ್ಷಗಳಿಂದ ಇಸ್ಲಾಂ ಸ್ವೀಕರಿಸಿರಬೇಕು. ಯಾಕೆ ಹೀಗೆ  ಅಂದರೆ ಮುಸ್ಲಿಮರಲ್ಲದ ಯಾರೂ ಕೂಡ ವಕ್ಫ್ ಗೆ ದಾನ ಮಾಡಬಾರದು ಎಂಬುದು ಕೇಂದ್ರದ ಉದ್ದೇಶ.

5.  ಮುಸಲ್ಮಾನರ ಪುರಾತನ ಮಸೀದಿಗಳು ದರ್ಗಾಗಳು ಇಲ್ಲದಂತೆ ಮಾಡುವುದು

ಸಬ್ ಕಾ ಸಾಥ್… ಸಬ್ ಕಾ ವಿಕಾಸ್ ಕೇವಲ ಮಾತು ಅಷ್ಟೇ. ಮುಸಲ್ಮಾನರ ಪುರಾತನ ಮಸೀದಿಗಳು ದರ್ಗಾಗಳು ಇಲ್ಲದಂತೆ ಮಾಡುವುದು ಈ ಕಾಯ್ದೆಯ ಉದ್ದೇಶ. ಉದಾಹರಣೆಗೆ ಮುಂಬೈಯ ಹಾಜಿ ಮಲಂಗ್ ದರ್ಗಾ ವಕ್ಫ್ ಆಸ್ತಿ ಅಲ್ಲ ಎಂಬ ಕೂಗು ಈಗಾಗಲೇ ಶುರುವಾಗಿದೆ. 700 ವರ್ಷ ಪುರಾತನ ದರ್ಗಾ ವಕ್ಫ್ ಆಸ್ತಿಯೇ ಎಂದು ಯಾವ ದಾಖಲೆ ತೋರಿಸಬೇಕು? ಹೀಗೆಯೇ ಮುಂದೆ ಇತರೆ ದರ್ಗಾ, ಮಸೀದಿ ಮತ್ತು ಖಬ್ರಸ್ಥಾನಗಳು ವಕ್ಫ್ ಆಸ್ತಿ ಅಲ್ಲ ಎಂದು ಕೂಗು ಶುರುವಾಗೋದ್ರಲ್ಲಿ ಯಾವುದೇ ಅನುಮಾನವಿಲ್ಲ.  

9.40.000 ಎಕರೆ… 9.40.000 ಎಕರೆ… ಬಿಜೆಪಿಗರು 9.40.000 ಎಕರೆ ಜಮೀನು ವಕ್ಫ್ ಬಳಿ ಇದೆ ಅಂತ ಬೊಬ್ಬೆ ಹೊಡೆಯುತ್ತಿದ್ದಾರೆ. ಬಿಜೆಪಿಗರ ನಿದ್ದೆಗೆಡಿಸಿದೆ 9.40.000 ಎಕರೆ ಜಮೀನು. 

ಆದರೆ ನೆನಪಿರಲಿ. ಹಿಂದೂ ದತ್ತಿ ಮಂಡಳಿ (Hindu Endowment Board ) ನಲ್ಲಿ ಕೇವಲ 3 ರಾಜ್ಯಗಳಲ್ಲಿ ಸುಮಾರು 10 ಲಕ್ಷ ಎಕರೆಯಷ್ಟು ಆಸ್ತಿ ಇದೆ ಎಂದು ಕೆಲ ವರದಿಗಳು ತಿಳಿಸುತ್ತಿವೆ. ಇಲ್ಲಿ ಹಿಂದೂ ಮುಸ್ಲಿಂ ಪ್ರಶ್ನೆ ಅಲ್ಲ. ವಕ್ಫ್ ಬಳಿ 9.40.000 ಎಕರೆ ಆಸ್ತಿ ಇದೆ ಎಂದಾದರೆ ಇರಲಿ ಬಿಡಿ. ತಪ್ಪೇನಿದೆ?? ಸಬ್ ಕಾ ಸಾಥ್ ಸಬ್ ಕಾ ವಿಕಾಸ್. ನೀವೇ ಹೇಳಿದ್ದು ಅಲ್ಲವೇ ? 

ಮುಸ್ಲಿಂ ನಾಯಕರು ಮಾಡಿದ ತಪ್ಪೇನು ? 

ಮುಸ್ಲಿಂ ನಾಯಕರು ವಕ್ಫ್ ಆಸ್ತಿಯ ವಾಣಿಜ್ಯೀಕರಣದ ಬಗ್ಗೆ ಸರಿಯಾದ ಯೋಜನೆಗಳನ್ನು ರೂಪಿಸಿಲ್ಲ. ಹಾಗಂತ ವಕ್ಫ್ ಆಸ್ತಿಯಲ್ಲೂ ವಾಣಿಜ್ಯೀಕರಣ ಬೇಕಾ ಅಂತ ಪ್ರಶ್ನೆ ಕೇಳಿದರೆ ಅದರಲ್ಲೇ ಬರುವ ಆದಾಯದಲ್ಲಿ ಮದರಸ ಸಬಲೀಕರಣ ಮತ್ತು ವಕ್ಫ್ ಗೆ ಸಂಬಂಧ ಪಟ್ಟ ಇತರೆ ಕಾರ್ಯಗಳಿಗೆ ಬಳಸಬಹುದಿತ್ತು. ವಕ್ಫ್ ಜಾಗದಲ್ಲಿ ಶಾಲಾ ಕಾಲೇಜುಗಳ ನಿರ್ಮಾಣ, ಮೆಡಿಕಲ್ ಯೂನಿವರ್ಸಿಟಿ ನಿರ್ಮಾಣ ಮಾಡಬೇಕಿತ್ತು. ಅಂದರೆ ನಿರೀಕ್ಷಿತ ಮಟ್ಟದಲ್ಲಿ ಈ ಕೆಲಸ ನಡೆದಿಲ್ಲ ಎನ್ನುವುದು ಅಷ್ಟೇ ಸತ್ಯ. 

ಟ್ರಿಪಲ್ ತಲಾಕ್ ಆಯ್ತು… NRC CAA ಆಯ್ತು… UCC ಗುಮ್ಮ ತೋರಿಸಿದ್ದಾಯ್ತು.. ಇನ್ನು ಬಿಜೆಪಿಗರಿಗೆ ಉಳಿದಿದ್ದೆ ವಕ್ಫ್ ತಿದ್ದುಪಡಿ ಕಾಯ್ದೆ. ಮುಸಲ್ಮಾನರೇ ಈಗಲೂ ಇದಕ್ಕೆ ವಿರೋಧಿಸದಿದ್ದರೆ ಇನ್ನು ಯಾವಾಗ?

ಡಾ.ನಾಜಿಯಾ ಕೌಸರ್

ಪತ್ರಕರ್ತರು

ಇದನ್ನೂ ಓದಿ- ವಕ್ಫ್ ಆಸ್ತಿಯ ಹಿನ್ನೆಲೆ ಮತ್ತು ಕಾನೂನು‌

More articles

Latest article