ಬೆಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದಂತೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೋ) ಕಾಯ್ದೆ ಅಡಿ ಬಿಜೆಪಿ ವರಿಷ್ಠ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧದ ವಿಚಾರಣೆ ಅ.30, ನಾಳೆ ನಡೆಯಲಿದೆ.
ತಮ್ಮ ವಿರುದ್ಧ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿ ವಿಚಾರಣೆ ಅ. 27 ರಂದು ನಿಗಧಿಯಾಗಿತ್ತು. ಆದರೆ ಅಂದು ಸಮಯವಕಾಶದ ಕೊರತೆಯಿಂದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 30 ಕ್ಕೆ ಮುಂದೂಡಿತ್ತು.
ಬೆಂಗಳೂರಿನ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪೋಕ್ಸೋ ಪ್ರಕರಣ ರದ್ದುಪಡಿಸುವಂತೆ ಹಾಗೂ ಇದೇ ಪ್ರಕರಣದಲ್ಲಿ ಜಾಮೀನು ಮಂಜೂರು ಮಾಡುವಂತೆ ಕೋರಿ ಯಡಿಯೂರಪ್ಪ ಅರ್ಜಿ ಸಲ್ಲಿಸಿದ್ದಾರೆ. ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಅರ್ಜಿಯ ವಿಚಾರಣೆಯನ್ನು ಅ. 30ಕ್ಕೆ ಮುಂದೂಡಿದೆ. ಅದುವರೆಗೂ ಯಡಿಯೂರಪ್ಪ ಅವರನ್ನು ಬಂಧಿಸದಂತೆ ಮತ್ತು ಅವರಿಗೆ ವಿಚಾರಣೆಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿ ಈ ಹಿಂದೆ ಹೊರಡಿಸಿದ್ದ ಮಧ್ಯಂತರ ಆದೇಶ ಮುಂದುವರೆಯಲಿದೆ ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.