ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ A-2 ಆಗಿರುವ ಖ್ಯಾತ ಚಿತ್ರ ನಟ ದರ್ಶನ್ ತೂಗುದೀಪ ಅವರ ಜಾಮೀನು ಆದೇಶ ನಾಳೆ ಹೊರಬೀಳಲಿದೆ. ಇಂದು ಮಧ್ಯಾಹ್ನ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ಅದೇಶವನ್ನು ನಾಳೆ ಬುಧವಾರಕ್ಕೆ ಕಾಯ್ದಿರಿಸಿದೆ. ದರ್ಶನ್ ಅವರಿಗೆ ಕನಿಷ್ಠ 3 ತಿಂಗಳ ಮಧ್ಯಂತರ ಜಾಮೀನು ನೀಡಿ ಎಂದು ಅವರ ಪರ ವಕೀರು ಇಂದು ಮನವಿ ಮಾಡಿಕೊಂಡರು.
ದರ್ಶನ್ ಪರ ವಕೀಲ ಖ್ಯಾತ ಕ್ರಿಮಿನಲ್ ವಕೀಲ ಸಿ.ವಿ.ನಾಗೇಶ್ ಪ್ರಬಲ ವಾದ ಮಂಡಿಸಿ ದರ್ಶನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಜಾಮೀನು ನೀಡಬೇಕು. ಚಿಕಿತ್ಸೆ ಪಡೆಯುವುದು ವ್ಯಕ್ತಿಯ ಮೂಲಭೂತ ಹಕ್ಕು. ಆಸ್ಪತ್ರೆಗೆ ದಾಖಲಿಸಿದ ಬಳಿಕವೇ ಅವರ ಅನಾರೋಗ್ಯ ಕುರಿತು ಹೆಚ್ಚಿನ ಮಾಹಿತಿ ಲಭಿಸುತ್ತದೆ. ಚಿಕಿತ್ಸೆಗೆ ಎಷ್ಟು ದಿನಗಳು ಬೇಕೆಂದು ವೈದ್ಯರು ಹೇಳಬಹುದು. ನಾವು ಕೇಳುತ್ತಿರುವುದು ಕೇವಲ ಮಧ್ಯಂತರ ಜಾಮೀನು ಮಾತ್ರ. ಬಳ್ಳಾರಿಯ ವೈದ್ಯರು ಈಗಾಗಲೇ ವರದಿ ನೀಡಿದ್ದಾರೆ. ಇದನ್ನು ಅನುಮಾನಿಸಲು ಯಾವುದೇ ಕಾರಣವಿಲ್ಲ ಎಂದು ವಾದಿಸಿದರು.
ನೀವು ಎಲ್ಲಿ ಚಿಕಿತ್ಸೆ ಪಡೆಯಲು ಬಯಸುತ್ತೀರಿ ಎಂಬ ನ್ಯಾಯಮೂರ್ತಿಗಳ ಪ್ರಶ್ನೆಗೆ ಉತ್ತರಿಸಿದ ವಕೀಲರು ದರ್ಶನ್ ಮೈಸೂರಿನ ನಿವಾಸಿಯಾಗಿದ್ದು, ಈ ಹಿಂದೆ ಅಲ್ಲಿಯೇ ಚಿಕಿತ್ಸೆ ಪಡೆದಿದ್ದಾರೆ. ಬೆಂಗಳೂರಿನಲ್ಲಿ ಸಾಕ್ಷಿಗಳಿರುವುದರಿಂದ ಅವರು ಇಲ್ಲಿ ಇರುವುದಿಲ್ಲ. ಮೈಸೂರಿನ ಅಪೊಲೊ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾರೆ ಮತ್ತು ಕಾಲಕಾಲಕ್ಕೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಾರೆ. ಹೀಗಾಗಿ ದರ್ಶನ್ ಗೆ ಮಧ್ಯಂತರ ಜಾಮೀನು ನೀಡಬೇಕು ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದರು.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಪ್ರಕರಣವನ್ನು ಪ್ರಸ್ತಾಪಿಸಿದ ಸಿ.ವಿ. ನಾಗೇಶ್ ಅವರು, ದೆಹಲಿ ಹೈಕೋರ್ಟ್ ಅನಾರೋಗ್ಯ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರಿಗೆ ಜಾಮೀನು ನೀಡಿತ್ತು.. ಬಿಪಿ, ಶುಗರ್, ಥೈರಾಯಿಡ್ ಸಮಸ್ಯೆಗಳಿಗೆ ಡಿಕೆಶಿ 3 ಬಾರಿ ದಾಖಲಾಗಿ ಚಿಕಿತ್ಸೆ ಪಡೆದಿದ್ದರು. ಅವೆಲ್ಲ ಸಾಮಾನ್ಯವಾದ ಖಾಯಿಲೆಗಳಾಗಿದ್ದರೂ ಜಾಮೀನು ನೀಡಲಾಗಿತ್ತು. ಆದರೆ ದರ್ಶನ್ ದೊಡ್ಡ ಪ್ರಮಾಣದ ಸಮಸ್ಯೆ ಎದುರಿಸುತ್ತಿದ್ದಾರೆ. ದರ್ಶನ್ ಗೆ MRI ಸ್ಕ್ಯಾನ್ ಮಾಡಿಸಲಾಗಿದೆ. ಬೆನ್ನಿನ ನರದ L5, S1 ನಲ್ಲಿ ಸಮಸ್ಯೆ ಇದೆ. ದರ್ಶನ್ ಒಂದು ಕಾಲಿನ ಪಾದದಲ್ಲಿ ಸಮಸ್ಯೆ ಆಗಿದೆ ಎಂದು ವಿವರಣೆ ನೀಡಿದರು.
ಇಂತಹುದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಂದು ಪ್ರಾಸಿಕ್ಯೂಷನ್ ಹೇಳಬಾರದು. ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆತಂಕ ಇದ್ದೇ ಇರುತ್ತದೆ. ಆದ್ದರಿಂದ ದರ್ಶನ್ ತಮಗೆ ಬೇಕಾದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬಹುದು. ಈ ಸಂಬಂಧ ಸುಪ್ರೀಂಕೋರ್ಟ್ ಆದೇಶವೂ ಇದೆ ಎಂದರು.
ಮೆಡಿಕಲ್ ಬೋರ್ಡ್ ಅಭಿಪ್ರಾಯ ಪಡೆದಿರುವ ಹಲವು ತೀರ್ಪುಗಳಿವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ಹೇಳಿದಾಗ 2ನೇ ಅಭಿಪ್ರಾಯವನ್ನು ಬೆಂಗಳೂರಿನಲ್ಲಿ ಪಡೆಯಬಹುದಲ್ಲವೇ ಎಂದು ನ್ಯಾಯಮೂರ್ತಿಗಳು ಪ್ರಶ್ನಿಸಿದರು. ಎರಡನೇ ಅಭಿಪ್ರಾಯ ಏಕೆ ಬೇಕು? ನ್ಯೂರಾಲಜಿಸ್ಟ್ ಆಪರೇಷನ್ ಮಾಡಿಸಬೇಕು ಎಂದು ಹೇಳಿದ್ದಾರೆ ಎಂದು ನಾಗೇಶ್ ಉತ್ತರಿಸಿದರು.
ಕನಿಷ್ಠ 3 ತಿಂಗಳು ಮಧ್ಯಂತರ ಜಾಮೀನು ನೀಡುವಂತೆ ವಕೀಲರು ಮನವಿ ಮಾಡಿಕೊಂಡರು . 3 ತಿಂಗಳು ಜಾಮೀನು ಕೊಡಲು ಹೇಗೆ ಸಾಧ್ಯ ಎಂದು ನ್ಯಾಯಮೂರ್ತಿಗಳು ಮರು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ಪರೀಕ್ಷಿಸಿ ಮೈಸೂರಲ್ಲಿ ಚಿಕಿತ್ಸೆ ಪಡೆಯಬಹುದಲ್ಲವೇ ಎಂದರು. ಆಗ ಸಿ.ವಿ. ನಾಗೇಶ್ ಅವರು ಭದ್ರತೆಯ ಸಮಸ್ಯೆ ಉಂಟಾಗುತ್ತದೆ ಎಂದರು. ಆ ಸಮಸಸ್ಯೆಯನ್ನು ಗೃಹ ಇಲಾಖೆ ನೋಡಿಕೊಳ್ಳುತ್ತದೆ ಎಂದರು. ಅಂತಿಮವಾಗಿ ನಾಳೆ ಆದೇಶ ಹೊರಡಿಸುವುದಾಗಿ ನ್ಯಾಯಮೂರ್ತಿಗಳು ತಿಳಿಸಿದರು.