ಧರ್ಮ, ಭಾಷೆ, ಆಚಾರ, ವಿಚಾರ, ಸಂಸ್ಕೃತಿಗಳು ಒಂದು ಕಾಲದಲ್ಲಿ ನೆಲದಲ್ಲಿ ನಾಡನ್ನು, ಮನದಲ್ಲಿ ಹಾಡನ್ನು ಕಟ್ಟಿತ್ತೋ ಅದು ಈಗ ನಮ್ಮ ನಡುವಿನ ಗೋಡೆಯಾಗುತ್ತಿದೆ. ಮತ್ತೆ ಅವುಗಳ ಮೂಲ ಆಶಯಗಳು ಗುಡಿಯಿಂದ ಹೊರಬಂದು ನಮ್ಮ ನಡೆಯಲ್ಲಿ, ನುಡಿಯಲ್ಲಿ ವ್ಯಕ್ತವಾಗುವ ಮೂಲಕ ಬಣ್ಣದಾಚೆಗಿನ ಬದುಕು ಎಲ್ಲರ ಹಕ್ಕಾಗುವ ಕನಸು ಮುಕ್ಕಾಗದಂತ ಬೆಳಕು ನಮ್ಮನ್ನು ಆವರಿಸಲಿ -ಡಾ.ಉದಯ ಕುಮಾರ ಇರ್ವತ್ತೂರು.
ದೀಪಾವಳಿ, ಬೆಳಕಿನ ಹಬ್ಬ ಮತ್ತೆ ಬಂದಿದೆ. ಬೆಳಕು ಎನ್ನುವುದು ಜ್ಞಾನದ ಸಂಕೇತ. ಎಲ್ಲಿ ಬೆಳಕಿರುತ್ತದೆಯೋ ಅಲ್ಲಿ ಕತ್ತಲೆಗೆ, ಅಜ್ಞಾನಕ್ಕೆ ಆಸ್ಪದವಿಲ್ಲ. ಬೆಳಕಿನ ಸಾಲು ಸಾಲು ಹಣತೆಗಳನ್ನು ಹಚ್ಚುವ ಮೂಲಕ ಅಜ್ಞಾನವೆನ್ನುವ ಕತ್ತಲೆಯನ್ನು ಕಳೆದು ಜ್ಞಾನವೆಂಬ ತಿಳಿವಿನ ತೆರೆಗಳು ನಮ್ಮದೆಯ ತೀರವನ್ನು ನಿರಂತರ ತೊಯ್ಯಿಸುತ್ತ ಇರುವಂತೆ ಸಂಭ್ರಮದಿಂದ ದೀಪಾವಳಿಯ ಹಬ್ಬವನ್ನು ಆಚರಿಸುತ್ತೇವೆ. ಎಲ್ಲ ಹಬ್ಬಗಳ ಕುರಿತು ಇರುವಂತೆ ದೀಪಾವಳಿಯ ಸುತ್ತವೂ ಅನೇಕ ಚಾರಿತ್ರಿಕ ಮತ್ತು ಐತಿಹಾಸಿಕ ಮಹತ್ತ್ವದ ಕತೆಗಳಿವೆ. ಇಂತಹ ಎಲ್ಲ ಕಥೆಗಳು ಸಮುದಾಯದಲ್ಲಿ ಎಲ್ಲರ ಬದುಕೂ ಸುಂದರ ಸಮೃದ್ಧವಾಗಿರಬೇಕು ಎನ್ನುವ ಆಶಯವನ್ನು ಹೊಂದಿವೆ ಎನ್ನುವುದನ್ನು ಮರೆಯದಿರೋಣ.
ಸಮಾಜದಲ್ಲಿನ ಎಲ್ಲ ಜನ ನಾಡು, ನುಡಿ, ಮತ್ತು ಪರಂಪರೆಯ ಕೊಡುಗೆಯನ್ನು ಸ್ವೀಕರಿಸಿ ಸಂಭ್ರಮಿಸಬೇಕೆನ್ನುವುದು ನಮ್ಮೆಲ್ಲರ ಆಶಯವಾಗಿದೆ. ಸಮಾಜದ ಸ್ಥಿತಿ ಯಾವತ್ತೂ ಒಂದು ಪರಿಪಕ್ವವಾದ ಆದರ್ಶದ ಸ್ಥಿತಿಯಲ್ಲಿ ಇರುವುದಿಲ್ಲ. ನಮ್ಮ ಕನಸಿನ, ಸದಾಶಯಗಳ ಬೀಜಗಳನ್ನು ಬಿತ್ತ ಬೇಕಿದ್ದರೆ ಭೂಮಿಕೆ ಸಿದ್ಧಪಡಿಸಿಕೊಳ್ಳಬೇಕಾಗುತ್ತದೆ. ಇಂತಹ ಆಶಯಕ್ಕೆ ಪರಿಸ್ಥಿತಿ ಪೂರಕವಾಗಿದೆಯೇ? ಅವಕಾಶ ನೀಡುತ್ತಿದೆಯೇ? ಎಷ್ಟರ ಮಟ್ಟಿಗೆ ನಾವು ಬೆವರು ಹರಿಸಬೇಕಿದೆ? ಎನ್ನುವ ಪ್ರಶ್ನೆಯೂ ನಮ್ಮೆದುರು ಸಾಮಾನ್ಯವಾಗಿ ಇರುತ್ತದೆ. ಸಮಾಜದಲ್ಲಿ ಫಲವತ್ತಾದ ಭೂಮಿಯಲ್ಲಿ ಬದುಕು ಕಟ್ಟಿಕೊಳ್ಳುತ್ತಿರುವವರು ಇದಕ್ಕೆ ಉತ್ತರಿಸದೆ ನುಣುಚಿಕೊಳ್ಳುವ ಜಾಣತನ ಸದ್ಯದ ಮಟ್ಟಿಗೆ ನಾವು ಪ್ರದರ್ಶಿಸಬಹುದಾದರೂ, ಅದೊಂದು ಶಾಶ್ವತವಾದ ಪರಿಹಾರವಂತೂ ಖಂಡಿತಾ ಆಗಲಾರದು. ಪ್ರಶ್ನೆ ಎಷ್ಟೇ ಸರಳವೆಂದು ಗೋಚರಿಸಿದರೂ ಅದನ್ನು ನಗಣ್ಯವೆಂದು ನಿರಾಕರಿಸಬಾರದು, ಅಲಕ್ಷಿಸಬಾರದು. ಯಾಕೆಂದರೆ ಯಾವುದನ್ನು ನಗಣ್ಯ ಎಂದು ನಾವಂದುಕೊಳ್ಳುತ್ತೇವೋ ಅದು ಮುಂದೊಂದು ದಿನ ಬೃಹದಾಕಾರವಾಗಿ ನಮ್ಮ ಮುಂದೆ ನಿಂತಾಗ, ಅಯ್ಯೋ ಇದನ್ನು ನಾವು ನಿರ್ಲಕ್ಷಿಸಬಾರದಾಗಿತ್ತು, ಮೊದಲೇ ಸೂಕ್ತ ಕ್ರಮ ಕೈಗೊಂಡಿದ್ದರೆ ಇದನ್ನು ಸುಲಭದಲ್ಲಿ ಪರಿಹರಿಸಬಹುದಾಗಿತ್ತು ಎನ್ನುವ ಆಲೋಚನೆ ನಮ್ಮನ್ನು ಕಾಡದೇ ಬಿಡುವುದಿಲ್ಲ.
ಮನುಷ್ಯನ ಆಸೆಗಳನ್ನೇ ಬಂಡವಾಳ ಮಾಡಿಕೊಂಡಿರುವ ಒಂದು ವ್ಯವಸ್ಥೆ ನಮಗರಿವಿಲ್ಲದಂತೆ ನಮ್ಮನ್ನು ಆವರಿಸಿಕೊಂಡಿದೆ. ಆಸೆಗಳಿಗೆ ಮಿತಿಯೆಂಬುದು ಇಲ್ಲ. ಆಸೆಗಳಿಗೆ ಅಂಕುಶ ತೊಡಿಸಿ ಹದ್ದು ಬಸ್ತಿನಲ್ಲಿಟ್ಟುಕೊಳ್ಳುವುದು ಸುಲಭದ ಕೆಲಸವಲ್ಲ. ಬಲ್ಲವರು ಹೇಳಿದಂತೆ “ಈ ಭೂಮಿಗೆ ಎಲ್ಲರ ಅಗತ್ಯಗಳನ್ನು ಪೂರೈಸಬಲ್ಲಷ್ಟು ಸಾಮರ್ಥ್ಯ ಖಂಡಿತಾ ಇದೆ. ಆದರೆ ಎಲ್ಲರ ದುರಾಸೆಗಳನ್ನಲ್ಲ”. ಎಷ್ಟೊಂದು ನಿಜ ಈ ಮಾತು. ಇವತ್ತಿನ ಅಭಿವೃದ್ಧಿಯ, ಪರಿಸರ ರಕ್ಷಣೆ, ಆರೋಗ್ಯ, ಕಾನೂನು ಸುವ್ಯವಸ್ಥೆ, ಸಾಮಾಜಿಕ ನ್ಯಾಯ, ಯುದ್ಧ, ಅಶಾಂತಿ, ಅಸಮಾಧಾನ ಇತ್ಯಾದಿಗಳೆಲ್ಲದರ ಬೀಜವಿರುವುದೇ ಅತಿಯಾಸೆ, ದುರಾಸೆಯಲ್ಲಿ. ಈ ಜಗತ್ತಿನಲ್ಲಿ ಹಲವು ಆದರ್ಶಗಳಿವೆ ಎನ್ನುವುದು ನಮಗೆಲ್ಲಾ ತಿಳಿದಿದೆ. ಈ ಹಲವುಗಳನ್ನು, ಪಳಗಿಸಿ ಕೆಲವೇ ಕೆಲವನ್ನಾಗಿ ಮಾಡುವ ಒಂದು ನಾಜೂಕಿನ ತಂತ್ರಗಾರಿಕೆ ಕೂಡಾ ಪ್ರಸ್ತುತ ಜಗತ್ತಿನಲ್ಲಿ ನಡೆಯುತ್ತಿರುವ ಒಂದು ಅಗೋಚರ, ಅವ್ಯಕ್ತ ವಿದ್ಯಮಾನ. ಇದು ನಮ್ಮ ಬಹಳಷ್ಟು ಸಂಕಟಗಳನ್ನು ಹೆಚ್ಚು ಮಾಡಿದೆ, ಮಾಡುತ್ತಿದೆ, ಮಾಡಲಿದೆ ಎಂದರೆ ತಪ್ಪಾಗಲಾರದೇನೋ?
ಒಂದು ಕಾಲದಲ್ಲಿ ಹೊರಗಿನ ಶಕ್ತಿಗಳು “ನೀವು ನಾಗರೀಕತೆಯಲ್ಲಿ ಹಿಂದಿದ್ದೀರಿ, ನಮ್ಮಂತೆ ಮುಂದುವರಿಯಬೇಕು; ನೀವೇನೋ ಒಳ್ಳೆಯವರೇ, ಆದರೆ ಕೆಲವೊಂದು ಕಾರಣಗಳಿಂದ ಹಿಂದೆ ಇದ್ದೀರಿ. ನೀವೂ ನಮ್ಮಂತೆ ಆಗಬೇಕು, ಅದಕ್ಕೆ ನಾವು ಹೇಳುವ ದಾರಿಯಲ್ಲಿ ನಡೆಯಿರಿ, ನಮ್ಮನ್ನು ಅನುಕರಿಸಿ, ಅನುಸರಿಸಿ” ಎಂದೆಲ್ಲ ಹೇಳಿದಾಗ ಒಂದುಕ್ಷಣ ಗೊಂದಲಕ್ಕೆ ಒಳಗಾದರೂ, ನಮ್ಮ ದೇಸೀಯ ವ್ಯವಸ್ಥೆಯ ಆಯಕಟ್ಟಿನ ಜನ ಹೊಸ ರೀತಿಯ ವಿದ್ಯಾಭ್ಯಾಸ, ಆಧುನಿಕ ವ್ಯವಸ್ಥೆಯ ಅನುಕೂಲಗಳನ್ನು ಒಪ್ಪಿಕೊಂಡಾಗ, ಅಪ್ಪಿಕೊಂಡಾಗ ಉಳಿದವರಿಗೂ ಇದೊಂದು ಅನುಕೂಲ ಸಿಂಧುವಾಗಿಯೇ ಕಂಡಿತು. ಆದರೆ ಬರುಬರುತ್ತಾ ಅದರೊಳಗಿದ್ದ ಆಳುವವರ ಶ್ರೇಷ್ಠತೆಯ ವ್ಯಸನ, ಆಳಿಸಿಕೊಂಡವರ ಅಸ್ತಿತ್ವವನ್ನೇ ನಿರಾಕರಿಸುವಂತಹ ಅನುಭವ ಭಯಾನಕ ಸ್ವರೂಪವನ್ನೇ ಪಡೆಯತೊಡಗಿದ್ದು ದಿಗಿಲು ಉಂಟುಮಾಡಿತ್ತು. ಇಂತಹ ಹೊತ್ತಲ್ಲಿಯೇ ಉಣ್ಣಲು ಇಲ್ಲದಿದ್ದರೂ ಆದೀತು ಆದರೆ ಉಸಿರಾಡಲು ತೊಂದರೆ ಇಲ್ಲದ ಪಾಡು ಇರುವ ನಾಡು ನಮ್ಮದಾಗಿರಲಿ ಎನ್ನುವ ಅಭಿಪ್ರಾಯಕ್ಕೆ ಸಮುದಾಯ ಸಹಮತ ವ್ಯಕ್ತಪಡಿಸಿದ್ದನ್ನು ಇತಿಹಾಸ ದಾಖಲಿಸಿದೆ. ನಮ್ಮ ಉಪಖಂಡದ ಜನ ಸಮುದಾಯ ನೆಲದ ಮಣ್ಣಿನಿಂದಲೇ ಸ್ವಾತಂತ್ರ್ಯದ ಹಣತೆಯನ್ನು ಮಾಡಿ ಸ್ವಾಭಿಮಾನದ ದೀಪ ಹಚ್ಚಿಯೇ ಬಿಟ್ಟಿತು.
ಅಲ್ಲಿಗೆ ನಮ್ಮ ಸಂಕಟವೇನೂ ಮುಗಿದು ಹೋಗಲಿಲ್ಲ. ದೀಪದ ಬೆಳಕು, ದೂರವುಳಿದವರಿಗೆ ದ್ವೀಪವಾದಾಗ ಮತ್ತೆ ಸಿರಿಯ ಗರ, ಬಡತನ ಸಾಗರಗಳನ್ನು ಬೆಸೆಯಲು ನಾಡಿನ ಜನಮನದ ಆಶೋತ್ತರದ ಗದ್ದಿಗೆಯ ಮೇಲೆ, ಸ್ವಾಭಿಮಾನದ ಕಂದೀಲು ಇರಿಸಿದಾಗಲೇ ತಿಳಿದಿದ್ದು ಬೆಳಕಿಗೆ ಭಯಗೊಳ್ಳುವ ಜನರೂ ನಮ್ಮೆಲ್ಲರ ನಡುವೆ ಇದ್ದಾರೆ ಎನ್ನುವ ಕಟು ಸತ್ಯ. ಬಟ್ಟೆ ತೊಟ್ಟವರಿಗೆ, ಆಭರಣ ತೊಟ್ಟವರಿಗೆ ಬೆಳಕಿಗೆ ತೆರೆದುಕೊಳ್ಳುವ ಕಾತರವಾದರೆ, ಉಡಲಿಲ್ಲದವರ, ಒಡಲಿಗಿಲ್ಲದವರ ಸಂಕಟ ಇನ್ನೊಂದು ಬಗೆಯದಾಗಿತ್ತು. ಅವರಿಗೆ ಲೋಕದೆದುರು ತಮ್ಮ ಇಲ್ಲಗಳು ಬೆತ್ತಲಾಗುವ ಭಯ, ಅದಕ್ಕಾಗಿ ಕತ್ತಲೆಯೇ ಕ್ಷೇಮ ಎನ್ನುವ ಭಾವ.. ಇದೆಲ್ಲವನ್ನೂ ಅರಿತು, ಎಲ್ಲರನ್ನೂ ಮುನ್ನಡೆಸುವ ಸವಾಲು ಸರಳವಾದದ್ದೇನೂ ಆಗಿರಲಿಲ್ಲ. ಎಲ್ಲರೂ ಉಂಡ ಮೇಲೆ ತಾನುಣ್ಣಬೇಕೆನ್ನುವ ತುಡಿತವಿದ್ದ ತಾಯಿ ಮನಸುಗಳು, ಉಳಿದವರೆದುರು, ತುಳಿದವರೆದುರು, ನಮ್ಮವರೂ ಎದೆಯುಬ್ಬಿಸಿ ನಡೆಯಬೇಕೆನ್ನುವ ತಮ್ಮದೇ ತಂದೆ ಮನಸ್ಸುಗಳು ತಮ್ಮದೆಲ್ಲವನ್ನೂ ಪಣಕ್ಕಿಟ್ಟು ದುಡಿದದ್ದು ಸತ್ಯವಾದರೂ, ಸಿಕ್ಕಿದೆಲ್ಲವನ್ನೂ ದಕ್ಕಿಸಿಕೊಂಡವರು ಕೆಲವರು, ಕನಸು ಮಾತ್ರ ಉಳಿಸಿಕೊಂಡವರು ಹಲವರು. ಎಲ್ಲ ದಿನಗಳೂ ಒಂದೇ ಆಗಿರಲಾರದು ಎನ್ನುವ ಭರವಸೆಯಲ್ಲಿ ಬದುಕು ಕಟ್ಟುವ ಕೆಲಸ ಮಾತ್ರ ಈ ಮಣ್ಣಿನಲ್ಲಿ ಎಂದಿಗೂ ನಿಂತಿರಲೇ ಇಲ್ಲ. ಕತ್ತಲೆಯ ದಾರಿಯಲ್ಲಿ ಕನಸು ಹುಟ್ಟುಹಾಕುವ ಕೆಲಸ ಸವಾಲಿನದ್ದೇ ಆದರೂ ಅದರಿಂದ ವಿಮುಖರಾಗದೆ ಮುನ್ನಡೆದ ನಮ್ಮವರ ಶ್ರಮ ನೆನಪಿಡಬೇಕಾದದ್ದೇ.
ಉಂಡವರ ಮತ್ತು ಉಪವಾಸಿಗರೆಲ್ಲರ ತಾಣವಾದ ನಮ್ಮ ಸಮಾಜದಲ್ಲಿ ಇತ್ತೀಚೆಗೆ ಭವಿಷ್ಯ ನಿರ್ಮಿಸುವುದಕ್ಕಿಂತ ಇತಿಹಾಸದ ಗೋರಿ ಅಗೆಯುವುದೇ ಕೆಲವರ ಆದ್ಯತೆಯಾಗುತ್ತ ಬಂದು, ನಾವು ಹೋಗಬೇಕಿರುವುದು ಮುಂದಕ್ಕೋ ಹಿಂದಕ್ಕೋ ಎನ್ನುವುದೇ ಗೊಂದಲಮಯವಾದಂತಹ ಪರಿಸ್ಥಿತಿಯೂ ಕೆಲವೊಮ್ಮೆ ಆಗುವುದಿದೆ. ವ್ಯವಸ್ಥೆಯ ಬಹಿರಂಗದ ಆಡಂಬರ ಅಂತರಂಗದ ಅಹಂಕಾರದ ಭರಾಟೆಯಲ್ಲಿ ಮುಂದಿನ ಗುರಿ, ಮತ್ತು ಹಿಡಿಯಬೇಕಿರುವ ಹಾದಿ ಕಳೆದು ಹೋಗದಿರುವಂತೆ ಎಚ್ಚರಿಕೆಯ ಹೆಜ್ಜೆಯಿಡಬೇಕಿದೆ. ಒಂದು ಕಾಲಕ್ಕೆ ನೊಂದವರ ನೋವಿಗೆ ನಾಲಗೆಯಾಗುತ್ತಿದ್ದ ಸೃಜನಶೀಲತೆ ಅದೇಕೋ ವಿಶ್ರಾಂತಿಯಲ್ಲಿರುವಂತಹ ಅನುಭವ. ಬದುಕಿನ ಎಲ್ಲ ನೆಲೆಗಳನ್ನೂ ಆಕ್ರಮಿಸುತ್ತಿರುವ ಕಾಂಚಾಣಕ್ಕೆ, ಅಧಿಕಾರದ, ಪರಂಪರೆಯ ಮುಖವಾಡ. ಒಂದು ಕಾಲಕ್ಕೆ ನಮ್ಮ ಅಸ್ಮಿತೆಯಾಗಿದ್ದ ಭಾಷೆ, ಜಾತಿ, ಸಂಸ್ಕೃತಿಗಳನ್ನು ಮಾರುಕಟ್ಟೆಯ ಮಾಯಾಜಾಲ ಸಂತೆಯ ಸರಕು ಮಾಡುತ್ತಿದೆ. ನಮ್ಮ ನೆಲದ, ಮನದ ಭಾಷೆ ಬದಲಾಗಿ ನಮ್ಮ ರುಚಿ, ಅಭಿರುಚಿಗಳೆಲ್ಲ ಕಲುಷಿತವಾಗುತ್ತಿದೆ. ಧರ್ಮ, ಭಾಷೆ, ಆಚಾರ, ವಿಚಾರ, ಸಂಸ್ಕೃತಿಗಳು ಒಂದು ಕಾಲದಲ್ಲಿ ನೆಲದಲ್ಲಿ ನಾಡನ್ನು ಮನದಲ್ಲಿ ಹಾಡನ್ನು ಕಟ್ಟಿತ್ತೋ ಅದು ಈಗ ನಮ್ಮ ನಡುವಿನ ಗೋಡೆಯಾಗುತ್ತಿದೆ. ಮತ್ತೆ ಅವುಗಳ ಮೂಲ ಆಶಯಗಳು ಗುಡಿಯಿಂದ ಹೊರಬಂದು ನಮ್ಮ ನಡೆಯಲ್ಲಿ, ನುಡಿಯಲ್ಲಿ ವ್ಯಕ್ತವಾಗುವ ಮೂಲಕ ಬಣ್ಣದಾಚೆಗಿನ ಬದುಕು ಎಲ್ಲರ ಹಕ್ಕಾಗುವ ಕನಸು ಮುಕ್ಕಾಗದಂತ ಬೆಳಕು ನಮ್ಮನ್ನು ಆವರಿಸಲಿ.
ಡಾ.ಉದಯ ಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು
ಇದನ್ನೂ ಓದಿ-ಇತಿಹಾಸದಲ್ಲಿ ದಾಖಲಾಗುವತ್ತ ನ್ಯಾ.ಚಂದ್ರಚೂಡರ ಚಿತ್ತ