ವಿವಾದಿತ ಮಾಜಿ ಐಎಎಸ್ ಟ್ರೈನಿ ಅಧಿಕಾರಿ ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಅಹ್ಮದ್‌ನಗರ ಜಿಲ್ಲೆಯ ಶೇವಗಾಂವ್ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಅವರು ಸಲ್ಲಿಸಿರುವ ನಾಮಪತ್ರದಲ್ಲಿನ ಅಫಿಡೆವಿಟ್‌ನಲ್ಲಿ ಮತ್ತೊಂದು ವಿವಾದ ಹುಟ್ಟಿಕೊಂಡಿದೆ. ದಿಲೀಪ್ ಅವರು ತಮ್ಮ ಪತ್ನಿ ಮನೋರಮಾ ಖೇಡ್ಕರ್ ಅವರಿಗೆ ವಿಚ್ಛೇದನ ನೀಡಿದ್ದಾರೆ ಎಂದು ಅಫಿಡೆವಿಟ್‌ನಲ್ಲಿ ತಿಳಿಸಿದ್ದಾರೆ. ಆದರೆ ಇದು, 2024ರ ಲೋಕಸಭಾ ಚುನಾವಣೆಗೆ ಸಮಯದಲ್ಲಿ ಅವರು ಸಲ್ಲಿಸಿರುವ ಅಫಿಡೆವಿಟ್‌ನಲ್ಲಿ ಒದಗಿಸಿದ ಮಾಹಿತಿಗೆ ಇದು ವ್ಯತಿರಿಕ್ತವಾಗಿದೆ ಎಂದು ತಿಳಿದುಬಂದಿದೆ.
ಹಲವಾರು ವರ್ಷಗಳಿಂದ ರಾಜಕೀಯದಲ್ಲಿ ಗುರುತಿಸಿಕೊಂಡಿರುವ ಅವರು ಕಳೆದ ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ಅಂಬೇಡ್ಕರ್ ಅವರ ಎಬಿಪಿ ಪಕ್ಷದಿಂದ ಅಹ್ಮದ್‌ನಗರ ಕ್ಷೇತ್ರದಲ್ಲಿ ಸ್ಪರ್ಧಿಸಿ, 13 ಸಾವಿರಕ್ಕೂ ಹೆಚ್ಚು ಮತಗಳನ್ನು ಪಡೆದು ಎಲ್ಲರ ಗಮನ ಸೆಳೆದಿದ್ದರು.
ದಿಲೀಪ್ ಖೇಡ್ಕರ್ ಮತ್ತು ಮನೋರಮಾ ಖೇಡ್ಕರ್ ಅವರ ಪುತ್ರಿಯಾಗಿರುವ ಪೂಜಾ ಖೇಡ್ಕರ್ ಅವರು ಒಬಿಸಿ ಹಾಗೂ ಅಂಗವಿಕಲ ಕೋಟಾವನ್ನು ದುರಪಯೋಗ ಪಡಿಸಿಕೊಂಡಿದ್ದಾರೆ ಎಂಬ ಅರೋಪದ ಮೇಲೆ ಕೇಂದ್ರ ಲೋಕಸೇವಾ ಆಯೋಗ ಅವರನ್ನು ಕೆಲಸದಿಂದ ವಜಾ ಮಾಡಿ ಸೆಪ್ಟೆಂಬರ್ 7 ರಂದು ಆದೇಶ ಮಾಡಿತ್ತು.