ಬೆಳಗಾವಿ: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಅಧಿಕಾರದಲ್ಲಿ ಮುಂದುವರಿದರೆ ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಪ್ರಚಾರ ಮಾಡುವುದಿಲ್ಲ ಎಂದು ಮಾಜಿ ಸಚಿವ ಹಾಗೂ ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಸದ್ಯಕ್ಕೆ ರಾಜ್ಯದಲ್ಲಿ ಉಪಚುನಾವಣೆಯ ಕಣ ರಂಗೇರಿದೆ. ಹಲವಾರು ದಿನಗಳಿಂದ ವಿಜಯೇಂದ್ರ ಮತ್ತು ರಮೇಶ್ ಜಾರಕಿಹೊಳಿ ಬಹಿರಂಗವಾಗಿಯೇ ವಾಕ್ಸ್ಸಮರ ನಡೆಸುತ್ತಲೆ ಬಂದಿದ್ದಾರೆ. ಮೇಲಿನ ಈ ಹೇಳಿಕೆ ಈಗಾಗಲೇ ಬಿಜೆಪಿಯೊಳಗಡೆ ಸಾಕಷ್ಟು ಸದ್ದು ಮಾಡುತ್ತಿದೆ.
“ಉಪಚುನಾವಣೆಯ ಮೂರು ಸ್ಥಾನಗಳಲ್ಲಿ ಬಿಜೆಪಿ ಗೆಲ್ಲಬೇಕು ಎಂದು ಬಯಸುತ್ತೇವೆ, ಆದರೆ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರನ್ನಾಗಿ ನಾವು ಒಪ್ಪಿಕೊಳ್ಳುವುದಿಲ್ಲ ಎಂದು ಈಗಾಗಲೇ ಹೈಕಮಾಂಡ್ಗೆ ತಿಳಿಸಿದ್ದೆವೆ. ಹೈಕಮಾಂಡ್ ಬಯಸಿದರೆ ನಾನು ಪ್ರಚಾರ ಮಾಡುತ್ತೇನೆ” ಎಂದು ಸುದ್ದಿಗಾರರಿಗೆ ತಿಳಿಸಿದರು.
ʼಯೋಗೇಶ್ವರ್ ಅವರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷವನ್ನು ಸೇರಿ ಉಪಚುನಾವಣೆಯ ಅಭ್ಯರ್ಥಿಯಾಗಿದ್ದಾರೆ. ಇದು ಅವರ ರಾಜಕೀಯ ನಿರ್ದಾರ. ಅವರು ನಮ್ಮ ಪಕ್ಷದಲ್ಲಿಯೇ ಇದ್ದಿದ್ದರೆ ಚನ್ನಪಟ್ಟಣ ಗೆಲ್ಲುವ ಉತ್ತಮ ನಿರೀಕ್ಷೆ ಇತ್ತುʼ ಎಂದು ರಮೇಶ್ ಜಾರಕಿಹೊಳಿ ಬೇಸರವನ್ನು ಹೊರಹಾಕಿದ್ದಾರೆ.
ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಬಗ್ಗೆಯೂ ಪ್ರತಿಕ್ರಿಯಿಸಿದ ಅವರು, ಈ ಬಾರಿ ಎನ್ಡಿಎ ಬಹುಮತ ಪಡೆದು ಸರ್ಕಾರ ರಚನೆ ಮಾಡುತ್ತದೆ ಎಂದು ಭವಿಷ್ಯ ನುಡಿದರು.