ಪ್ರಭಾ ಅರುಣ್ ಕುಮಾರ್ ಹತ್ಯೆ; ಆರೋಪಿಗಳ ಸುಳಿವಿಗೆ 1 ಮಿಲಯನ್‌ ಡಾಲರ್‌ ಬಹುಮಾನ

Most read

ಸರಿಯಾಗಿ ಹತ್ತು ವರ್ಷಗಳ ಹಿಂದೆ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ನಲ್ಲಿ ಬೆಂಗಳೂರು ಮೂಲದ ಸಾಫ್ಟ್ವೇರ್ ಇಂಜಿನಿಯರ್ ಪ್ರಭಾ ಅರುಣ್ ಕುಮಾರ್ ಅವರ ಹತ್ಯೆ ನಡೆದಿತ್ತು. ಆದರೆ ಈ ಹತ್ಯೆ ಪ್ರಕರಣವನ್ನು ಭೇದಿಸಲು ಅಲ್ಲಿನ ಸರ್ಕಾರಕ್ಕೆ ಸಾಧ್ಯವಾಗಲೇ ಇಲ್ಲ. ಇದೀಗ ಆಸ್ಟ್ರೇಲಿಯಾದ ನ್ಯೂ ಸೌತ್ ವೇಲ್ಸ್ ಸರ್ಕಾರ ಹಂತಕರ ಸುಳಿವು ನೀಡುವವರಿಗೆ ಬೃಹತ್‌ ಬಹುಮಾನ ಘೋಷಣೆ ಮಾಡಿದೆ.

2015ರ ಮಾರ್ಚ್ 7ರಂದು ಸಿಡ್ನಿಯ ಪಶ್ಚಿಮದಲ್ಲಿನ ಪರಮಟ್ಟ ಪಾರ್ಕ್‌ನಲ್ಲಿ ಪ್ರಭಾ ಅರುಣ್ ಕುಮಾರ್ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಕೆಲಸ ಮುಗಿಸಿ ಕಚೇರಿಯಿಂದ ಮನೆಗೆ ಮರಳುತ್ತಿದ್ದ 41 ವರ್ಷದ ಪ್ರಭಾ ಅವರ ಕತ್ತಿಗೆ ಇರಿದು ಹತ್ಯೆ ಮಾಡಲಾಗಿತ್ತು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿತಾದರೂ ಬದುಕುಳಿಯಲಿಲ್ಲ. ಹತ್ಯೆ ನಡೆದು 10 ವರ್ಷಗಳಾದರೂ ಹಂತಕರ ಸುಳಿವು ದೊರಕಿರಲಿಲ್ಲ. ಹಾಗಾಗಿ, ಹಂತಕರ ಸುಳಿವು ನೀಡಿದವರಿಗೆ ಸರ್ಕಾರ 1 ಮಿಲಿಯನ್ ಡಾಲರ್ ಬಹುಮಾನ ಘೋಷಿಸಿದೆ.

ಪ್ರಕರಣದ ತನಿಖೆಗಾಗಿ ಪೊಲೀಸರ ವಿಶೇಷ ತಂಡವನ್ನು ರಚಿಸಿ ಬಹು ಆಯಾಮಗಳಲ್ಲಿ ತನಿಖೆ ನಡೆಸಿದ್ದರೂ ಹಂತಕರ ಪತ್ತೆಯಾಗಿರಲಿಲ್ಲ.
ಬೆಂಗಳೂರಿನ ಮೈಂಡ್ ಟ್ರೀ ಕಂಪನಿಯ ಉದ್ಯೋಗಿಯಾಗಿದ್ದ ಪ್ರಭಾ ಅವರು, ಕೆಲಸದ ಮೇರೆಗೆ ಮೇರೆಗೆ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಕೆಲಸ ಮುಗಿಸಿ ಬೆಂಗಳೂರಿನಲ್ಲಿದ್ದ ಪತಿ ಅರುಣ್ ಕುಮಾರ್ ಜೊತೆ ಮೊಬೈಲ್ ನಲ್ಲಿ ಮಾತನಾಡುತ್ತಾ ತೆರಳುತ್ತಿದ್ದರು. ಅವರಿಗೆ ತಮ್ಮನ್ನು ಯಾರೋ ಹಿಂಬಾಲಿಸುತ್ತಿದ್ದಾರೆ ಎಂಬ ಅನುಮಾನ ಮೂಡಿತ್ತು. ಅದನ್ನು ಪತಿಯ ಬಳಿ ಹೇಳಿಕೊಂಡಿದ್ದರು. ಅದೇ ವೇಳೆ ಅವರ ಮೇಲೆ ದಾಳಿ ನಡೆದಿತ್ತು. ಅವರು ವಾಸವಿದ್ದ ಮನೆಯಿಂದ ಕೇವಲ 300 ಮೀಟರ್ ದೂರದಲ್ಲಿ ಈ ಹತ್ಯೆ ನಡೆದಿತ್ತು.

ಹತ್ಯೆ ಮಾಡಿದ ವ್ಯಕ್ತಿ ಪ್ರಭಾ ಅವರಿಗೆ ಅಪರಿಚಿತನಾದರೂ, ಆಸ್ಟ್ರೇಲಿಯಾ ಅಥವಾ ಭಾರತದಲ್ಲಿರುವ ಅವರ ಪರಿಚಿತರೇ ಈ ಕೊಲೆ ಮಾಡಿಸಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ತನಿಖೆ ವೇಳೆ ಅನೇಕ ಸಾಕ್ಷಿಗಳು ದೊರಕಿದ್ದರೂ, ಹಂತಕರ ಬಂಧನ ಸಾಧ್ಯವಾಗಿರಲಿಲ್ಲ.

ಪ್ರಭಾ ಅವರು ಮನೆ ಸಮೀಪದ ಪಾರ್ಕ್‌ನಲ್ಲಿ ನಡೆದುಕೊಂಡು ಬರುತ್ತಿರುವುದು ಸಮೀಪದ ಸಿಸಿಟಿವಿ ಗಳಲ್ಲಿ ದಾಖಲಾಗಿದೆ. ಆದರೆ, ಅವರನ್ನು ಹಿಂಬಾಲಿಸುತ್ತಿದ್ದವರು ಯಾರು ಎನ್ನುವುದು ಸ್ಪಷ್ಟವಾಗಿಲ್ಲ. ಸಿಸಿಟಿವಿ ಕ್ಯಾಮರಾದಲ್ಲಿ ಕಂಡುಬಂದ ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದರೂ ಹಂತಕರ ಸುಳಿವು ಪತ್ತೆಯಾಗಿಲ್ಲ.

ಇದು ಜನಾಂಗೀಯ ದಾಳಿ ಎನ್ನುವುದನ್ನು ಈ ಹಿಂದೆ ತನಿಖಾಧಿಕಾರಿಗಳು ಅಲ್ಲಗಳೆದಿದ್ದರು. 2 ಸಾವಿರಕ್ಕೂ ಅಧಿಕ ಮಂದಿಯನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ಪ್ರಭಾ ಅವರ ಮೃತದೇಹವನ್ನು ಬೆಂಗಳೂರಿಗೆ ತಂದು ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕಲ್ಲಡ್ಕದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿತ್ತು.

More articles

Latest article