ಶೂನ್ಯದಿಂದ ಪ್ರಾರಂಭಿಸಲು ಹೆದರಬೇಡಿ; ಪತ್ರಿಕೋದ್ಯಮ ವಿದ್ಯಾರ್ಥಿನಿಯರಿಗೆ ಕಿವಿಮಾತು

Most read

ಬೆಂಗಳೂರು: ಕಲಿಯಲು ಹಸಿವು ಇರಬೇಕು. ಗುರಿ ಸಾಧನೆಗೆ ಮೊದಲು ಜೀವನದಲ್ಲಿ ಕನಸುಗಳಿರಬೇಕು. ಆ ಕನಸನ್ನು ನನಸು ಮಾಡಲಿಕ್ಕೆ ಸತತ ಪ್ರಯತ್ನ ಪಡಬೇಕು. ಅದಕ್ಕೆ ಮೊದಲು ಕಂಫರ್ಟ್ ಜೋನ್‌ನಿಂದ ಆಚೆ ಬರಬೇಕು. ಆಗಲೇ ನಾವು ಜೀವನದಲ್ಲಿ ಏನಾದರೂ ಸಾಧಿಸಲು ಸಾಧ್ಯ ಎಂದು ಕೈಗಾರಿಕಾ ಅಭಿವೃದ್ಧಿ ಆಯುಕ್ತರು ಮತ್ತು ಕೈಗಾರಿಕೆಗಳು ಮತ್ತು ವಾಣಿಜ್ಯ ಇಲಾಖೆಯ ನಿರ್ದೇಶಕಿ ಗುಂಜನ್ ಕೃಷ್ಣ ಅಭಿಪ್ರಾಯಪಟ್ಟಿದ್ದಾರೆ.

`ಹಣಕಾಸಿನ ವಹಿವಾಟು-ಮಾಹಿತಿ’ ಕುರಿತು ಬೆಂಗಳೂರು ಪ್ರೆಸ್‌ಕ್ಲಬ್‌ನ ಮಹಿಳಾ ವಿಭಾಗ ಇಂದು ಏರ್ಪಡಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು ಶೂನ್ಯದಿಂದ ಪ್ರಾರಂಭಿಸಲು ಹೆದರದಿರಿ ಎಂದು ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಪತ್ರಕರ್ತೆಯರಿಗೆ ಹಾಗೂ ಪತ್ರಿಕೋದ್ಯಮದ ವಿದ್ಯಾರ್ಥಿನಿಯರಿಗೆ ಕಿವಿಮಾತು ಹೇಳಿದರು.

ಯಾವುದೇ ಗುರಿ ತಲುಪಲು ನಮಗೆ ಜೀವನದಲ್ಲಿ ಶಿಸ್ತು ಅತಿ ಮುಖ್ಯ. ಆ ಶಿಸ್ತನ್ನು ನಾವೇ ಹಾಕಿಕೊಳ್ಳಬೇಕು. ಸಮಯ ಪಾಲನೆ ಬಹಳ ಮುಖ್ಯ ಜೊತೆಜೊತೆಗೆ ನಮ್ಮ ಆಸೆ ಏನು? ನಮ್ಮ ಕನಸೇನು? ನಮ್ಮ ಸಾಮರ್ಥ್ಯ ಎಷ್ಟಿದೆ ಅಂತ ಮೊದಲು ತಿಳಿದುಕೊಳ್ಳಬೇಕು. ಶೂನ್ಯದಿಂದ ಪ್ರಾರಂಭಿಸಲು ಎಂದು ಕೂಡ ಹೆದರಬಾರದು. ಆಸೆ, ಕನಸುಗಳನ್ನು ಹೊಂದಲು ವಯಸ್ಸಿನ ಅಡ್ಡಿ ಇಲ್ಲ. ಪ್ರತಿಯೊಂದರಲ್ಲೂ ನಮಗೆ ಅವಕಾಶ ಸಿಗುತ್ತಾ? ಅವಕಾಶವನ್ನು ಹೇಗೆ ಪಡೆದುಕೊಳ್ಳಬೇಕು ಅನ್ನುವುದನ್ನು ಚಿಂತಿಸಬೇಕು ಮತ್ತು ಸಿಕ್ಕ ಅವಕಾಶವನ್ನ ಬಹಳ ಅಚ್ಚುಕಟ್ಟಾಗಿ ನಿಭಾಯಿಸಿ ಸೈ ಅನ್ನಿಸಿಕೊಳ್ಳಬೇಕು. ಆಗ ಮಾತ್ರ ಕನಸು ನನಸಾಗುತ್ತೆ ಎಂದು ಅಭಿಪ್ರಾಯಪಟ್ಟರು.

ನಾವು ಮಾಡುವಂತಹ ಕೆಲಸ ಬರೀ ನಮ್ಮ ಜೀವನದ ಖರ್ಚಿಗಾಗಿ ಅಷ್ಟೇ ಇರುವುದಿಲ್ಲ. ಹಸಿವು ನೀಗಿಸಿಕೊಳ್ಳುವುದಕ್ಕೆ ಮಾತ್ರ ನಾವು ಕೆಲಸಕ್ಕೆ ಹೋಗುತ್ತೇವೆ ಅಂದ್ರೆ ಅದು ದೊಡ್ಡ ತಪ್ಪು. ವಿಶೇಷವಾಗಿ ಮಹಿಳೆಯರು ತಮ್ಮನ್ನು ತಾವು ಅರಿತುಕೊಳ್ಳಲು, ಅಸ್ಮಿತೆ ಕಂಡುಕೊಳ್ಳಲು ಅವಕಾಶ ನೀಡುವುದೇ ಉದ್ಯೋಗ. ದುಡಿಮೆ ಬರೀ ಉಪಜೀವನಕ್ಕೆ ಅಂತ ಅರ್ಥ ಅಲ್ಲ. ಮಹಿಳೆಯರು ದೈಹಿಕವಾಗಿ ಅಷ್ಟೇ ಅಲ್ಲ ಮಾನಸಿಕವಾಗಿ ಸದೃಢರಾಗಿ ಮುನ್ನಗ್ಗಬೇಕಾಗಿದೆ. ಹಣವನ್ನು ಉಳಿತಾಯ ಮಾಡುವಂತಹ ಮನೋಭಾವ ನಮ್ಮಲ್ಲಿ ಹುಟ್ಟುಬೇಕಾಗಿದೆ. ಅದನ್ನು ಯಾವ ರೀತಿಯಾಗಿ ಉಳಿತಾಯ ಮಾಡಬೇಕು ಎಂಬುದನ್ನು ಮುಂದಾಲೋಚಿಸಿ ಉಳಿತಾಯ ಮಾಡುವ ಯೋಜನೆಗಳತ್ತ ಗಮನಹರಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದ ಎಂ.ಎಸ್. ಶರತ್ ಹಾಗೂ ಅಭಿಷೇಕ ರಾಮಪ್ಪ ಅವರು ಹಣಕಾಸಿನ ವಹಿವಾಟು ಹಾಗೂ ಉಳಿತಾಯಗಳ ಕುರಿತು ಉಪಯುಕ್ತ ಮಾಹಿತಿಗಳನ್ನು ನೀಡಿದರು. ದುಡಿದ ದುಡ್ಡಿನಿಂದ ದುಡಿಸುವುದು ಹೇಗೆ ಅಥವಾ ಎರಡನೇ ಆದಾಯ ಹೇಗಿರಬೇಕು? ಮೊದಲನೇ ಆದಾಯದಿಂದ ಉಳಿತಾಯ ಹೇಗೆ ಮಾಡಬೇಕು ಉಳಿತಾಯದಿಂದ ಹೂಡಿಕೆಯೆಡೆಗೆ ಸಾಗುವುದು ಹೇಗೆ? ಹೂಡಿಕೆ ಮಾಡುವ ಪ್ರಕ್ರಿಯೆಯಲ್ಲಿ ತಾಳ್ಮೆ ಎಷ್ಟು ಮುಖ್ಯ ಎಂಬುದರ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು. ಇನ್ನು ವೃದ್ಧಾಪ್ಯದ ವೇಳೆಗೆ ದುಡ್ಡನ್ನು ಹೇಗೆ ಸಂಗ್ರಹಿಸಿಟ್ಟುಕೊಳ್ಳಬೇಕು. ಹಣಕಾಸಿನ ತೊಂದರೆ ಇಲ್ಲದೆ ಜೀವನ ಸಾಗಿಸುವುದು ಹೇಗೆ? ಅದಕ್ಕಾಗಿ ಆರಂಭದಿಂದಲೇ ಹೇಗೆ ಉಳಿತಾಯ ಮಾಡಬೇಕು. ಯಾವ ಕ್ರಮ, ವಿಧಾನಗಳನ್ನು ಅನುಸರಿಸಬೇಕು ಎಂದು ಅಭಿಷೇಕ ರಾಮಪ್ಪ ಮಾಹಿತಿ ನೀಡಿದರು.

More articles

Latest article