ಗೊತ್ತಿದ್ದೋ ಗೊತ್ತಿಲ್ಲದೆಯೋ? ಉದ್ದೇಶಪೂರ್ವಕವೋ ಕಾಕತಾಳಿಯವೋ? ಪ್ರತ್ಯಕ್ಷವಾಗಿಯೋ ಇಲ್ಲಾ ಪರೋಕ್ಷವಾಗಿಯೋ? ಒಟ್ಟಾರೆಯಾಗಿ ಸುಪ್ರೀಂ ನ್ಯಾಯಮೂರ್ತಿಗಳು ತೆಗೆದುಕೊಂಡ ತೀರ್ಮಾನಗಳು ಪ್ರಧಾನಿ ಮೋದಿಯವರ ಪರವಾಗಿರುವುದಕ್ಕಾಗಿ, ಹಿಂದುತ್ವವಾದಿಗಳ ಪಕ್ಷಪಾತಿಯಾಗಿದ್ದಕ್ಕಾಗಿ, ಸಂಘ ಪರಿವಾರದತ್ತ ವಾಲಿದ್ದಕ್ಕಾಗಿ ಈ ದೇಶದ ಇತಿಹಾಸ ಸಿಜೆಐ ಚಂದ್ರಚೂಡರವರನ್ನು ನೆನಪಲ್ಲಿಟ್ಟುಕೊಳ್ಳುತ್ತದೆ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಇನ್ನೇನು ಎರಡೇ ವಾರದಲ್ಲಿ ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳಾದ ಸಿಜೆಐ ಡಿ.ವೈ. ಚಂದ್ರಚೂಡರವರು ನಿವೃತ್ತಿ ಹೊಂದಲಿದ್ದಾರೆ. ಸಂವಿಧಾನ, ಸಾಕ್ಷಿ ಪುರಾವೆಗಳಿಗಿಂತಲೂ ದೇವರ ಮಾರ್ಗದರ್ಶನ ಆಧರಿಸಿ ತೀರ್ಪು ಕೊಡುವುದಾಗಿ ಹೇಳಿದ ಈ ಮಹಾನ್ ದೈವಭಕ್ತ ನ್ಯಾಯಮೂರ್ತಿಗಳಿಗೆ ವೃತ್ತಿಯ ಅಂತಿಮ ಹಂತದಲ್ಲಿ ತಮ್ಮ ಮೇಲೆಯೇ ಅನುಮಾನ ಶುರುವಾದಂತಿದೆ.
“ನಾನು ದೇಶಕ್ಕೆ ಅತ್ಯಂತ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿದ್ದೇನೆ. ಇತಿಹಾಸ ನನ್ನನ್ನು ಹೇಗೆ ನೆನಪಿಸಿಕೊಳ್ಳುತ್ತದೆ ಎನ್ನುವ ಆತಂಕ ನನಗಿದೆ” ಎಂದು ಹೇಳುವ ಮೂಲಕ ತಮ್ಮ ಸೇವೆಯನ್ನು ಸ್ಮರಿಸಿಕೊಳ್ಳುತ್ತಲೇ ಜನ ತಮ್ಮ ಬಗ್ಗೆ ಏನು ಎಂದುಕೊಳ್ಳುವರೋ ಎನ್ನುವ ಆತಂಕವನ್ನೂ ನ್ಯಾಯಮೂರ್ತಿಗಳು ವ್ಯಕ್ತಪಡಿಸಿದ್ದಾರೆ. ಅವರು ನ್ಯಾಯದಂಡಾಧಿಕಾರಿಯಾಗಿ ತೆಗೆದುಕೊಂಡ ತೀರ್ಮಾನ ಹಾಗೂ ತೀರ್ಪುಗಳ ಬಗ್ಗೆ ಅವರಿಗೇ ಅನುಮಾನಗಳು ಇರುವುದರಿಂದಲೇ ಈ ರೀತಿ ಆತಂಕವನ್ನು ಅಭಿವ್ಯಕ್ತಿಸಿದ್ದಾರೆ.
ಆದರೆ ಸಂದೇಹವೇ ಬೇಡ. ಈ ದೇಶದ ಈಗಿನ ಮತ್ತು ಮುಂದಿನ ತಲೆಮಾರು ಹಾಗೂ ಭಾರತೀಯ ಇತಿಹಾಸ ಖಂಡಿತಾ ಸಿಜೆಐ ಚಂದ್ರಚೂಡರನ್ನು ಹಲವು ಕಾರಣಗಳಿಗೆ ನೆನಪಲ್ಲಿಟ್ಟುಕೊಳ್ಳುತ್ತದೆ. ಅವರು ಕೊಟ್ಟ ತೀರ್ಪುಗಳು, ತೆಗೆದುಕೊಂಡ ನಿರ್ಣಯಗಳೇ ಅದಕ್ಕೆ ಸಾಕ್ಷಿಯಾಗಿವೆ.
ಮೊದಲನೆಯದಾಗಿ ಅಯೋಧ್ಯೆಯ ರಾಮಜನ್ಮಸ್ಥಳ ಹಾಗೂ ಬಾಬರಿ ಮಸೀದಿ ವಿವಾದವನ್ನು ಇತ್ಯರ್ಥಗೊಳಿಸಿದ ಐವರು ನ್ಯಾಯಮೂರ್ತಿಗಳಲ್ಲಿ ಒಬ್ಬರಾಗಿದ್ದವರು ಮಾನ್ಯ ಚಂದ್ರಚೂಡರವರು. ಸಾಕ್ಷ್ಯಗಳನ್ನು ಬದಿಗಿಟ್ಟು ಭಾವನೆಗಳಿಗೆ ಬೆಲೆಕೊಟ್ಟು ಹಿಂದುತ್ವವಾದಿಗಳ ಪರವಾಗಿ ಕೊಟ್ಟ ತೀರ್ಪನ್ನು ಈ ದೇಶದ ಸಮಸ್ತ ಮುಸ್ಲಿಂ ಸಮುದಾಯ ಹಾಗೂ ಬಹುತೇಕ ಜಾತ್ಯತೀತ ಪ್ರಜ್ಞಾವಂತ ಸಮೂಹ ಎಂದೆಂದೂ ಮರೆಯಲು ಸಾಧ್ಯವೇ ಇಲ್ಲ. ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ದೇವರ ಮಾರ್ಗದರ್ಶನವೇ ಕಾರಣವೆಂದು ಇತ್ತೀಚೆಗೆ ನ್ಯಾಯಮೂರ್ತಿಗಳು ಕೊಟ್ಟ ಹೇಳಿಕೆಯನ್ನೂ ಇತಿಹಾಸ ಮರೆಯಲು ಎಂದೂ ಆಗದು.
ಯಾಕೆಂದರೆ ಈ ದೇಶದ ನ್ಯಾಯಾಂಗ ವ್ಯವಸ್ಥೆ ಸಂವಿಧಾನಕ್ಕೆ ನಿಷ್ಠೆಯಿಂದ ಇರಬೇಕು. ನ್ಯಾಯಾಧೀಶರುಗಳು ಕಾನೂನಿನ ಚೌಕಟ್ಟಿನ ಮಿತಿಯಲ್ಲಿ ನ್ಯಾಯಾಂಗದ ಮಾರ್ಗದರ್ಶನದಲ್ಲಿ ವಿಚಾರಣೆ ಮಾಡಿ ತೀರ್ಪು ಕೊಡಬೇಕು. ಆದರೆ ಸನ್ಮಾನ್ಯ ಚಂದ್ರಚೂಡರವರು ಹೇಳಿದಂತೆ ಈ ಚೌಕಟ್ಟನ್ನು ಮೀರಿ ದೇವರ ಮಾರ್ಗದರ್ಶನ ಪಡೆದು ರಾಮಮಂದಿರದ ಪರವಾದ ತೀರ್ಪಿಗೆ ಬೆಂಬಲ ಕೊಟ್ಟಿದ್ದನ್ನೂ ಸಹ ಚರಿತ್ರೆ ನೆನಪಿನಲ್ಲಿಟ್ಟುಕೊಳ್ಳುತ್ತದೆ.
ಚುನಾವಣಾ ಬಾಂಡ್ ವಸೂಲಾತಿಯನ್ನು ಅಸಾಂವಿಧಾನಿಕ ಹಾಗೂ ಕಾನೂನುಬಾಹಿರ ಕ್ರಮವೆಂದು ಸುಪ್ರೀಂ ಕೋರ್ಟ್ ತೀರ್ಮಾನ ಕೊಟ್ಟಿದ್ದೂ ಸಹ ಐತಿಹಾಸಿಕ ತೀರ್ಪಾಗಿದೆ. ಆದರೆ ಈ ಹಗರಣದಲ್ಲಾದ ಬ್ರಹ್ಮಾಂಡ ಭ್ರಷ್ಟಾಚಾರದ ಕುರಿತು ತನಿಖೆಗೂ ವಹಿಸದೇ, ಆ ಹಗರಣದ ರೂವಾರಿಗಳನ್ನು ಶಿಕ್ಷೆಗೆ ಒಳಪಡಿಸಲೂ ಆದೇಶಿಸದೇ ಮೌನಕ್ಕೆ ಶರಣಾದ ಆದರಣೀಯ ಜಸ್ಟೀಸ್ ಚಂದ್ರಚೂಡರವರನ್ನು ಈ ದೇಶ ಖಂಡಿತಾ ನೆನಪಲ್ಲಿಟ್ಟುಕೊಳ್ಳುತ್ತದೆ.
ಚಂಢೀಗಡದಲ್ಲಿ ಚುನಾವಣಾ ಅಧಿಕಾರಿ ಬಿಜೆಪಿ ಪಕ್ಷದ ಪರವಾಗಿ ಮತ ಎಣಿಕೆ ಅಕ್ರಮವನ್ನು ಎಸಗಿದಾಗ ಆತನನ್ನು ಕ್ರಿಮಿನಲ್ ಎಂದು ತೀರ್ಪಿತ್ತ ಸಿಜೆಐ ಚಂದ್ರಚೂಡರವರು ಆ ಪಕ್ಷಪಾತಿ ಕ್ರಿಮಿನಲ್ ಅಧಿಕಾರಿ ವಿರುದ್ಧ ಯಾವುದೇ ರೀತಿಯ ಕ್ರಮಕ್ಕೆ ಆದೇಶಿಸದೇ ಬಿಟ್ಟಿದ್ದನ್ನೂ ಸಹ ಚುನಾವಣಾ ಅಕ್ರಮದ ನೆನಪು ಬಂದಾಗಲೆಲ್ಲಾ ಜನರು ಮರೆಯದೇ ನೆನಪಿಸಿಕೊಳ್ಳುತ್ತಾರೆ.
ಮಹಾರಾಷ್ಟ್ರದಲ್ಲಿ ಅಘಾಡಿ ಸರಕಾರವನ್ನು ಬೀಳಿಸಿ ಬಿಜೆಪಿಯ ನೇತೃತ್ವದಲ್ಲಿ ಶಿಂಧೆ ಫಡ್ನವೀಸ್, ಅಜಿತ್ ಪವಾರ್ ಸಮ್ಮಿಶ್ರ ಸರಕಾರ ರಚಿಸಲು ಅನುಮತಿಸಿದ ರಾಜ್ಯಪಾಲರ ಕ್ರಮವನ್ನು ಕಾನೂನು ಬಾಹಿರವೆಂದು ಘೋಷಿಸಿದ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡರವರು ಈ ಕಾನೂನು ಬಾಹಿರ ಅಕ್ರಮ ಕೂಡಾವಳಿಯ ವಿರುದ್ಧ ಯಾವುದೇ ನಿರ್ದಿಷ್ಟ ನಿರ್ಧಾರವನ್ನೂ ತೆಗೆದುಕೊಳ್ಳದೇ ಅಕ್ರಮ ಸರಕಾರ ಸಕ್ರಮವಾಗಿ ಮುಂದುವರೆಯುವುದಕ್ಕೆ ಅವಕಾಶ ಕೊಟ್ಟಿದ್ದನ್ನು ರಾಜಕೀಯ ಇತಿಹಾಸ ಸುದೀರ್ಘ ಕಾಲ ನೆನಪಲ್ಲಿಟ್ಟುಕೊಳ್ಳುತ್ತದೆ.
ಬಿಜೆಪಿ ಸರಕಾರವು ಜಮ್ಮು ಕಾಶ್ಮೀರಿಗರ ಸಂವಿಧಾನ ಬದ್ಧವಾಗಿದ್ದ ವಿಶೇಷ ಅಧಿಕಾರವಾದ 370 ನೇ ವಿಧಿಯನ್ನು ತೆಗೆದುಹಾಕಿದಾಗ, ಜಮ್ಮು ಕಾಶ್ಮೀರದ ರಾಜ್ಯದ ಸ್ಥಾನಮಾನವನ್ನು ಕಿತ್ತುಕೊಂಡು ರಾಷ್ಟ್ರಪತಿ ಆಡಳಿತ ಹೇರಿ, ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಿದಾಗ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಯಾಗಿ ಮೌನ ಸಮ್ಮತಿಯನ್ನು ಕೊಟ್ಟ ಸನ್ಮಾನ್ಯ ಚಂದ್ರಚೂಡರವರನ್ನು ಜಮ್ಮು ಕಾಶ್ಮೀರದ ಜನತೆ ಯಾವಾಗಲೂ ನೆನಪಿನಲ್ಲಿಟ್ಟುಕೊಳ್ಳುತ್ತಾರೆ..
ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಪ್ರಭುತ್ವದ ಸಂಚಿಗೆ ಒಳಗಾಗಿ ಕರಾಳ ಕಾಯ್ದೆಯ ಅಡಿಯಲ್ಲಿ ವಿಚಾರವಾದಿಗಳನ್ನು ಬಂಧಿಸಿ ಬಂಧೀಖಾನೆಯಲ್ಲಿಟ್ಟು ಜಾಮೀನು ಕೊಡದೇ ಹಿಂಸಿಸಿದ್ದಕ್ಕಾಗಿ, ಜೈಲಿನಲ್ಲಿ ಚಿಕಿತ್ಸೆ ಕೊಡದೇ ಫಾದರ್ ಸ್ಟಾನ್ ಸ್ವಾಮಿ ಸಾವಾಗಿದ್ದಕ್ಕಾಗಿ ಹಾಗೂ ಸಂಪೂರ್ಣ ಅಂಗವಿಕಲರಾಗಿದ್ದ ಪ್ರೊ.ಜಿ.ಎನ್.ಸಾಯಿಬಾಬಾರವರನ್ನು ಅಮಾನವೀಯವಾಗಿ ನಡೆಸಿಕೊಂಡು ಅವರ ಸಾವಿಗೂ ಕಾರಣವಾದ ಕೇಂದ್ರ ಸರಕಾರದ ಹುನ್ನಾರವನ್ನು ಖಂಡಿಸದೇ, ಜಾಮೀನು ಸಹ ಕೊಡದೇ ಇರುವಂತೆ ಮಾಡಿದ ನ್ಯಾಯಾಂಗ ವ್ಯವಸ್ಥೆಯ ಸುಪ್ರೀಂ ನ್ಯಾಯಮೂರ್ತಿಗಳಾದ ಮಾನ್ಯ ಚಂದ್ರಚೂಡರವರನ್ನು ಜನಹೋರಾಟದ ಇತಿಹಾಸ ನೆನಪಿಸಿಕೊಳ್ಳುತ್ತಲೇ ಇರುತ್ತದೆ.
ಸಂಘ ಪರಿವಾರ ಹಾಗೂ ಕೇಂದ್ರ ಸರಕಾರವನ್ನು ಪ್ರಶ್ನಿಸಿದ್ದಕ್ಕಾಗಿ ಉಮರ್ ಖಾಲಿದ್, ಶಾರ್ಜೀಲ್ ಇಮಾಮ್, ಖಾಲಿದ್ ಸೈಫಿ ಮತ್ತು ಗುಲ್ಫಿಶಾ ಫಾತಿಮಾ ರವರಂತಹ ಯುವಕರು ಮುಸ್ಲಿಮರು ಎನ್ನುವ ಕಾರಣಕ್ಕೆ ಜಾಮೀನು ಸಹ ಕೊಡದೇ ಕರಾಳ ಕಾಯ್ದೆಯಡಿಯಲ್ಲಿ ಜೈಲಿನಲ್ಲಿ ಕೊಳೆಯುವಂತೆ ಮಾಡಿದ್ದಕ್ಕಾಗಿ ನ್ಯಾಯಾಂಗದ ಅಧಿಪತಿಯಾದ ಸನ್ಮಾನ್ಯ ಚಂದ್ರಚೂಡರನ್ನು ಮುಸ್ಲಿಂ ಸಮುದಾಯದವರು ತಪ್ಪದೇ ನೆನಪಲ್ಲಿಟ್ಟುಕೊಳ್ಳುತ್ತಾರೆ.
ಕೊನೆಯದಾಗಿ ನ್ಯಾಯದೇವತೆಯ ಕಣ್ಣಿಗೆ ಕಟ್ಟಿದ ಪಟ್ಟಿ ತೆಗೆಸಿ ಅನ್ಯಾಯವನ್ನು ನೋಡುವಂತೆ ಮಾಡಿದ್ದಕ್ಕಾಗಿ, ನ್ಯಾಯದೇವತೆಗೆ ಸೀರೆಯುಡಿಸಿ ಹಿಂದೂಕರಣಗೊಳಿಸಿದ್ದಕ್ಕಾಗಿ, ಕೈಯಲ್ಲಿದ್ದ ಖಡ್ಗ ತೆಗೆದು ಹೊತ್ತಿಗೆಯನ್ನು ಹಿಡಿಸಿದ್ದಕ್ಕಾಗಿ, ಒಟ್ಟಾರೆಯಾಗಿ ನ್ಯಾಯದೇವತೆಯ ಪ್ರತಿಮೆಯನ್ನು ಹಿಂದುತ್ವವಾದಿಗಳ ಸಂಸ್ಕೃತಿಯ ಪ್ರತೀಕವಾಗಿಸಿದ್ದಕ್ಕಾಗಿಯಾದರೂ ಮಾನ್ಯ ನ್ಯಾ.ಚಂದ್ರಚೂಡರವರನ್ನು ಈ ದೇಶ ಸದಾ ನೆನಪಿನಲ್ಲಿಟ್ಟುಕೊಳ್ಳುತ್ತದೆ.
ಸನ್ಮಾನ್ಯ ನ್ಯಾಯಮೂರ್ತಿಗಳ ಈ ಎಲ್ಲಾ ಸ್ಮರಣಾರ್ಹ ತೀರ್ಪು ನಿರ್ಧಾರಗಳ ಹಿಂದೆ ಅದ್ಯಾವ ದೇವರ ಮಹಿಮೆ ಕೆಲಸ ಮಾಡಿದೆಯೋ, ಅದ್ಯಾವ ಸಂಘಿ ಶಕ್ತಿ ಅವರನ್ನು ನಿಯಂತ್ರಿಸಿದೆಯೋ, ಅದ್ಯಾವ ಸ್ವಘೋಷಿತ ದೇವಮಾನವ ಪ್ರೇರಣೆ ಇದೆಯೋ ಇತಿಹಾಸಕ್ಕೆ ಗೊತ್ತಾಗುವುದಿಲ್ಲ. ಆದರೆ ಸ್ವ ಗೃಹದಲ್ಲಿ ಮಾಡಲಾದ ಗಣಪತಿ ಪೂಜೆಗೆ ಪ್ರಧಾನಿಗಳನ್ನು ಆಹ್ವಾನಿಸಿ ಮಂಗಳಾರತಿ ಮಾಡಿಸಿದ್ದಕ್ಕಾಗಿ, ಅದೆಲ್ಲವನ್ನೂ ಚಿತ್ರೀಕರಣ ಮಾಡಿ ಪ್ರಚಾರ ಮಾಡಿದ್ದನ್ನು ಆಕ್ಷೇಪಿಸದೇ ಬೆಂಬಲಿಸಿದ್ದಕ್ಕಾಗಿ ನಿಸ್ಸಂದೇಹವಾಗಿ ಯುವರ್ ಆನರ್ ಜಸ್ಟೀಸ್ ಚಂದ್ರಚೂಡರವರನ್ನು ಇತಿಹಾಸ ನಿವೃತ್ತಿಯ ನಂತರವೂ ನೆನಪಿನಲ್ಲಿಟ್ಟುಕೊಳ್ಳುತ್ತದೆ.
ಗೊತ್ತಿದ್ದೋ ಗೊತ್ತಿಲ್ಲದೆಯೋ? ಉದ್ದೇಶಪೂರ್ವಕವೋ ಕಾಕತಾಳಿಯವೋ? ಪ್ರತ್ಯಕ್ಷವಾಗಿಯೋ ಇಲ್ಲಾ ಪರೋಕ್ಷವಾಗಿಯೋ? ಒಟ್ಟಾರೆಯಾಗಿ ಸುಪ್ರೀಂ ನ್ಯಾಯಮೂರ್ತಿಗಳು ತೆಗೆದುಕೊಂಡ ತೀರ್ಮಾನಗಳು ಪ್ರಧಾನಿ ಮೋದಿಯವರ ಪರವಾಗಿರುವುದಕ್ಕಾಗಿ, ಹಿಂದುತ್ವವಾದಿಗಳ ಪಕ್ಷಪಾತಿಯಾಗಿದ್ದಕ್ಕಾಗಿ, ಸಂಘ ಪರಿವಾರದತ್ತ ವಾಲಿದ್ದಕ್ಕಾಗಿ ಈ ದೇಶದ ಇತಿಹಾಸ ಸಿಜೆಐ ಚಂದ್ರಚೂಡರವರನ್ನು ನೆನಪಲ್ಲಿಟ್ಟುಕೊಳ್ಳುತ್ತದೆ.
ಈಗಾಗಲೇ ಬಹುಸಂಖ್ಯಾತ ಧರ್ಮೀಯರ ಭಾವನೆಗಳನ್ನು ಆಧರಿಸಿ ಬಾಬರಿ ಮಸೀದಿ ವಿವಾದದಲ್ಲಿ ಹಿಂದುತ್ವವಾದಿಗಳ ಪರವಾಗಿ ತೀರ್ಪನ್ನು ಕೊಟ್ಟ ನ್ಯಾಯಪೀಠದ ನಾಲ್ಕೂ ನ್ಯಾಯಮೂರ್ತಿಗಳು ಪ್ರಭುತ್ವದ ಫಲಾನುಭವಿಯಾಗಿದ್ದಾರೆ.
ಮುಖ್ಯ ನ್ಯಾಯಮೂರ್ತಿಗಳಾಗಿದ್ದ ರಂಜನ್ ಗೊಗೋಯ್ ರವರು ಬಿಜೆಪಿಯಿಂದ ರಾಜ್ಯ ಸಭಾ ಸದಸ್ಯರಾಗಿದ್ದಾರೆ. ನ್ಯಾ. ಅಶೋಕ್ ಭೂಷಣ್ – NCLAT ಅಧ್ಯಕ್ಷರಾಗಿದ್ದಾರೆ. ನ್ಯಾ. ಅಬ್ದುಲ್ ನಜಿರ್ ರವರು ಆಂಧ್ರದ ರಾಜ್ಯಪಾಲರಾಗಿದ್ದಾರೆ. ನ್ಯಾ. ಬೋಬ್ಡೆಯವರು CJI ಆಗಿ ಪದೋನ್ನತಿ ಪಡೆದಿದ್ದಾರೆ. ಈಗ ಪ್ರಭುತ್ವದ ಫಲಾನುಭವಿಯಾಗಲು ಬಾಕಿ ಇರುವವರು ನ್ಯಾ.ಚಂದ್ರಚೂಡರವರು ಮಾತ್ರ. ಅವರು ಸಿಜೆಐ ಆಗಿ ಪ್ರಭುತ್ವದ ಪರವಾಗಿ ತೆಗೆದುಕೊಂಡ ನಿರ್ಧಾರಗಳಿಗೆ ಪ್ರತಿಫಲವಾಗಿ ನಿವೃತ್ತಿಯ ನಂತರ ಯಾವುದಾದರೂ ಸ್ಥಾನಮಾನಗಳನ್ನು ಪಡೆದಿದ್ದೇ ಆದಲ್ಲಿ ಇತಿಹಾಸ ಅದನ್ನೂ ನೆನಪಿನಲ್ಲಿಟ್ಟುಕೊಳ್ಳುತ್ತದೆ.
ದೇಶಕ್ಕಾಗಿ ಸಮರ್ಪಣಾ ಭಾವದಿಂದ ಸುಪ್ರೀಂ ನ್ಯಾಯಮೂರ್ತಿಗಳು ಸೇವೆ ಸಲ್ಲಿಸಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ಹಿಂದುತ್ವವಾದಿ ಪ್ರಭುತ್ವದ ಪರವಾಗಿ ಅತ್ಯಂತ ಸಮರ್ಪಣಾ ಭಾವದಿಂದ ಸೇವೆ ಸಲ್ಲಿಸಿದ್ದಾರೆ ಎನ್ನುವ ಅನುಮಾನ ಇತಿಹಾಸದಲ್ಲಿ ದಾಖಲಾಗುವ ಅವಕಾಶಗಳೇ ಹೆಚ್ಚಾಗಿವೆ. ನ್ಯಾ.ಡಿ.ವೈ ಚಂದ್ರಚೂಡರವರ ಆಶಯದಂತೆ ನಿಜವಾಗಿಯೂ ರಾಷ್ಟ್ರೀಯವಾದಿಗಳು ರಚಿಸುವ ಇತಿಹಾಸ ಅವರನ್ನು ನೆನಪಿಸಿಕೊಳ್ಳುತ್ತದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು, ರಂಗಕರ್ಮಿ
ಇದನ್ನೂ ಓದಿ- ಗುಲ್ಫಿಶಾ ಫಾತಿಮಾ 40,000 ಗಂಟೆಗಳಿಂದ ಜೈಲಿನಲ್ಲಿ ಕೊಳೆಯುತ್ತಿದ್ದಾಳೆ!!!