3 ಕ್ಷೇತ್ರಗಳಲ್ಲಿ ಕಾಂಗ್ರೆಸ್ಸಿಗೆ ತಕ್ಕ ಪಾಠ: ವಿಜಯೇಂದ್ರ

Most read

ಬೆಂಗಳೂರು: ಈ ನಾಡಿನ ಜನವಿರೋಧಿ, ಬಡವರ ವಿರೋಧಿ, ರೈತವಿರೋಧಿ, ದಲಿತ ವಿರೋಧಿ ಕಾಂಗ್ರೆಸ್ ಸರಕಾರ ಏನಿದೆಯೋ ಇದಕ್ಕೆ ತಕ್ಕ ಪಾಠ ಕಲಿಸಲು 3 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾರರು ತೀರ್ಮಾನ ಹಾಗೂ ಸಂಕಲ್ಪ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ವಿಶ್ಲೇಷಿಸಿದರು.

ಸಂಡೂರಿನಲ್ಲಿ ಮಾತನಾಡಿದ ಅವರು, ಸಂಡೂರಿನಲ್ಲಿ ಬಿಜೆಪಿ ಯುವ ಮುಖಂಡ ಬಂಗಾರು ಹನುಮಂತು ಅವರನ್ನು ಅಭ್ಯರ್ಥಿಯಾಗಿ ಘೋಷಿಸಿದ್ದು, ಇಂದು ನಾಮಪತ್ರ ಸಲ್ಲಿಸಿದ್ದಾರೆ. ಬಿಜೆಪಿ ಒಗ್ಗಟ್ಟಿನಿಂದ ಚುನಾವಣೆ ಎದುರಿಸಲಿದೆ. ಜೆಡಿಎಸ್ ಪಕ್ಷವೂ ಸಂಪೂರ್ಣ ಸಹಕಾರ ನೀಡುತ್ತಿದೆ ಎಂದರು.

ಸಂಡೂರಿನಲ್ಲಿ ಹಿಂದೆಂದೂ ಬಿಜೆಪಿ ಕಮಲ ಅರಳಿಲ್ಲ. ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ ರೆಡ್ಡಿ ಅವರ ಶ್ರಮದಿಂದ ಮೊದಲ ಬಾರಿಗೆ ಕಮಲದ ಹೂ ಅರಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ರಾಜ್ಯ ರಾಜಕೀಯದ ದಿಕ್ಸೂಚಿಯನ್ನು ಬದಲಿಸುವ ಶಕ್ತಿ ಈ 3 ಕ್ಷೇತ್ರಗಳ ಉಪ ಚುನಾವಣೆಗೆ ಇದೆ. ಶಿಗ್ಗಾವಿ, ಚನ್ನಪಟ್ಟಣ, ಸಂಡೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಗಳು ರಾಜಕೀಯ ದಿಕ್ಕನ್ನು ಬದಲಿಸುವ ಶಕ್ತಿ ಹೊಂದಿವೆ. ರಾಜ್ಯದಲ್ಲಿ ರೈತರ ವಿರೋಧಿ ಸರಕಾರ ಇದೆ. ಬರಗಾಲ ಇದ್ದಾಗಲೂ ಈ ಸರಕಾರ ರೈತರ ಸಂಕಷ್ಟಕ್ಕೆ ಸ್ಪಂದಿಸಿಲ್ಲ. ನೆರೆ ಇದ್ದರೂ ರೈತರ ಸಂಕಷ್ಟಕ್ಕೆ ಸ್ಪಂದಿಸುತ್ತಿಲ್ಲ. ಮೆಕ್ಕೆಜೋಳ, ಮೆಣಸಿನ ಕಾಯಿ, ಹತ್ತಿ ಬೆಳೆಗಾರರು ಕಂಗಾಲಾಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.

ರಾಜ್ಯ ಸರಕಾರ ಕೇಂದ್ರ ಸರಕಾರದ ಕಡೆ ಬೊಟ್ಟು ಮಾಡಿ ಕುಳಿತಿದೆಯೇ ವಿನಾ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕತೆಯನ್ನು ತೋರಿಸುತ್ತಿಲ್ಲ. ಇದು ರೈತವಿರೋಧಿ, ಬಡವರ ವಿರೋಧಿ ಸರಕಾರ. ಮತ್ತೊಂದು ಕಡೆ ಎಸ್‍ಇಪಿ, ಟಿಎಸ್‍ಪಿ ಹಣವನ್ನು ಬೇರೆ ಬೇರೆ ಕಾರ್ಯಕ್ರಮಗಳಿಗೆ ವರ್ಗಾಯಿಸಿದ್ದಾರೆ. ಅಹಿಂದ ಹೆಸರು ಹೇಳಿ ಅಧಿಕಾರದ ಚುಕ್ಕಾಣಿ ಹಿಡಿದ ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿ, ಪಂಗಡಗಳಿಗೆ ಅನ್ಯಾಯ ಮಾಡಿದ್ದಾರೆ ಎಂದು ಆರೋಪಿಸಿದರು.

ಎರಡು ಕಾರಣಗಳಿಗೆ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಿದೆ. ಭ್ರಷ್ಟಾಚಾರರಹಿತ ಆಡಳಿತ ನೀಡುವುದಾಗಿ ತಿಳಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರ ಆಡಳಿತದಲ್ಲಿ ಸಾಲು ಸಾಲು ಹಗರಣಗಳನ್ನು ಬಿಜೆಪಿ ಬೀದಿಗೆ ತರುವ ಕೆಲಸ ಮಾಡಿದೆ. ಮೈಸೂರು ಮುಡಾ ಹಗರಣದಲ್ಲಿ ತಪ್ಪೇ ಮಾಡಿಲ್ಲವೆಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು 14 ನಿವೇಶನ ಹಿಂದಿರುಗಿಸುವ ಘೋಷಣೆ ಮಾಡಿ ತಪ್ಪನ್ನು ಒಪ್ಪಿಕೊಂಡಿದ್ದಾರೆ ಎಂದು ವಿವರಿಸಿದರು.
ವಾಲ್ಮೀಕಿ ನಿಗಮದ ಹಗರಣ- ಭ್ರಷ್ಟಾಚಾರದಲ್ಲಿ ಲೆಕ್ಕಾಧಿಕಾರಿ ಚಂದ್ರಶೇಖರ್ ಅವರು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಂತರ ಅನೇಕ ಬೆಳವಣಿಗೆ ಆಗಿದೆ. ಹಗರಣ ಆಗಿಲ್ಲವೆಂದು ಮುಖ್ಯಮಂತ್ರಿಗಳು ಹೇಳಿದ್ದರು. ಬಳಿಕ ಅಧಿವೇಶನ ನಡೆಯುವ ಸಂದರ್ಭದಲ್ಲಿ ಸದನದಲ್ಲಿ 187 ಕೋಟಿ ಹಗರಣ ಅಲ್ಲ; 87 ಕೋಟಿ ಹಗರಣ ಎಂದು ಒಪ್ಪಿಕೊಂಡರು. ಸಚಿವರೂ ರಾಜೀನಾಮೆ ಕೊಟ್ಟರು ಎಂದು ಮಾಹಿತಿ ನೀಡಿದರು.

ಕೇಂದ್ರದ ಮಾಜಿ ಸಚಿವ ಭಗವಂತ ಖೂಬಾ, ಮಾಜಿ ಸಚಿವ ಜನಾರ್ದನ ರೆಡ್ಡಿ, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್, ಅಭ್ಯರ್ಥಿ ಬಂಗಾರು ಹನುಮಂತು, ಪಕ್ಷದ ಪ್ರಮುಖರು ಇದ್ದರು.

More articles

Latest article