ಉಪ ಚುನಾವಣೆ: ಚನ್ನಪಟ್ಟಣದಲ್ಲಿ ನಿಖಿಲ್ ಶಿಗ್ಗಾಂವಿಯಲ್ಲಿ ಭರತ್ ನಾಮಪತ್ರ ಸಲ್ಲಿಕೆ

Most read

ಬೆಂಗಳೂರು: ಚನ್ನಪಟ್ಟಣ ಕ್ಷೇತ್ರದ ಉಪ ಚುನಾವಣೆಗೆ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ಇಂದು ನಾಮಪತ್ರ ಸಲ್ಲಿಸಿದರು.


ನಾಮಪತ್ರ ಸಲ್ಲಿಕೆಗೂ ಮುನ್ನ ನಿಖಿಲ್ ಕುಮಾರಸ್ವಾಮಿ ಭರ್ಜರಿ ರೋಡ್ ಶೋ ನಡೆಸಿದರು. ರೋಡ್ ಶೋನಲ್ಲಿ ಸಾವಿರಾರು ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ಭಾಗಿಯಾಗಿದ್ದರು. ನಿಖಿಲ್ ಅವರಿಗೆ ಕೇಂದ್ರ ಕೈಗಾರಿಕಾ ಸಚಿವ ಎಚ್. ಡಿ. ಕುಮಾರಸ್ವಾಮಿ, ಬಿಜೆಪಿ ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮಾಜಿ ಮುಖ್ಯಮಂತ್ರಿ ಸದಾನಂದ ಗೌಡ ಸೇರದಿಂತೆ ಅನೇಕ ನಾಯಕರು ಸಾಥ್ ನೀಡಿದರು. ಇಲ್ಲಿನ ಶೇರು ಹೋಟೆಲ್ ವೃತ್ತದಿಂದ ಆರಂಭವಾದ ರೋಡ್ ಶೋ, ಸಾತನೂರು ವೃತದ ಬಳಿ ಇರುವ ಚುನಾವಣಾ ಅಧಿಕಾರಿ ಕಚೇರಿವರೆಗೆ ನಡೆಯಿತು.


ರೋಡ್ ಶೋಗೂ ಮುನ್ನ ನಿಖಿಲ್ ಕೆಂಗಲ್ ಆಂಜನೇಯ ದೇವಾಲಯದಲ್ಲಿ ಪೂಜೆ ಸಲ್ಲಿಸಿದರು. ನಂತರ ಬೈಕ್ ರ್ಯಾಲಿ ಮೂಲಕ ಅವರು ಚನ್ನಪಟ್ಟಣಕ್ಕೆ ಆಗಮಿಸಿದರು.


ಈ ಸಂದರ್ಭದಲ್ಲಿ ಮಾತನಾಡಿದ ಆರ್. ಅಶೋಕ್, ಮಾತನಾಡಿ ಯೋಗೇಶ್ವರ್ ವಿರುದ್ಧ ಹರಿಹಾಯ್ದರು. ಅವರು ಕಾಂಗ್ರೆಸ್ ಸೇರಿ ಹರಕೆಯ ಕುರಿಯಾಗಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಕಾಂಗ್ರೆಸ್ ಸೇರಿದ್ದಾರೆ. ಅವರಿಗೆ ಟಿಕೆಟ್ ಕೊಡಿಸಲು ಸರ್ವ ಪ್ರಯತ್ನ ನಡೆಸಿದ್ದೆವು. ಅಂತಿಮವಾಗಿ ಕುಮಾರಸ್ವಾಮಿ ಅವರೂ ಟಿಕೆಟ್ ನೀಡಲು ಒಪಪ್ಪಿಗೆ ನೀಡಿದ್ದರು. ಆದರೆ ಅವರು ರಾತ್ರೋರಾತ್ರಿ ಕೈ ನಾಯಕರನ್ನು ಭೇಟಿ ಮಾಡಿ ಪಕ್ಷಾಂತರ ಮಾಡಿದ್ದಾರೆ ಎಂದರು.
ಎನ್ ಡಿಎ ಅಭ್ಯರ್ಥಿ ನಿಖಿಲ್ ಸ್ಪರ್ಧೆಯಿಂದ ತೀವ್ರ ಪೈಪೋಟಿ ಏರ್ಪಟ್ಟಿದೆ. ಅವರ ಗೆಲುವಿಗೆ ಎರಡೂ ಪಕ್ಷಗಳ ನಾಯಕರು ಶ್ರಮ ಹಾಕುತ್ತೇವೆ ಮತ್ತು ಅವರ ಗೆಲುವು ನಿಶ್ಚಿತ ಎಂದರು.


ಮಾಜಿ ಸಚಿವ ಡಾ. ಅಶ್ವತ್ಥನಾರಾಯಣ ಮಾತನಾಡಿ ಚನ್ನಪಟ್ಟಣದ ಜನತೆ ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷವನ್ನು ನಂಬುವುದಿಲ್ಲ. ಹಾಗಾಗಿ ನಿಖಿಲ್ ಗೆಲುವು ಖಚಿತ ಎಂದು ಹೇಳಿದರು.


ಅತ್ತ ಶಿಗ್ಗಾಂವಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಅವರು ನಾಮಪತ್ರ ಸಲ್ಲಿಸಿದರು. ಇದಕ್ಕೂ ಮುನ್ನ ಅವರು ಬೃಹತ್ ರೋಡ್ ಶೋ ನಡೆಸಿದರು. ಇವರಿಗೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಭರತ್ ಅವರ ತಂದೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಷಿ, ಸಂಸದ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಸಿ.ಸಿ. ಪಾಟೀಲ್, ಮುರುಗೇಶ ನಿರಾಣಿ, ವಿಧಾನ ಸಭೆ ವಿರೋಧ ಪಕ್ಷದ ಉಪ ನಾಯಕ ಅರವಿಂದ ಬೆಲ್ಲದ, ವಿಧಾನ ಪರಿಷತ್ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು.

More articles

Latest article