ಬೆಂಗಳೂರು: ಬಿಗ್ ಬಾಸ್ ಮಹಿಳಾ ಅಭ್ಯರ್ಥಿಗಳಿಗೆ ಶೌಚ, ಊಟದಂಥ ಮೂಲಭೂತ ಸೌಕರ್ಯಗಳನ್ನು ಸರಿಯಾಗಿ ನೀಡದೆ ಹಿಂಸಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳ ವಿಚಾರಣೆ ನಡೆಸಲಾಗಿದೆ.
ಬಿಗ್ ಬಾಸ್ ಶೋ ನಡೆಯುತ್ತಿರುವ ಸ್ಥಳಕ್ಕೆ ತನಿಖೆಗೆ ತೆರಳಿದ ಇನ್ಸ್ ಪೆಕ್ಟರ್ ಮಂಜುನಾಥ್ ಹೂಗಾರ್ ನೇತೃತ್ವದ ಕುಂಬಳಗೋಡು ಪೊಲೀಸರು ‘ನರಕವಾಸಿ’ ಕಾನ್ಸೆಪ್ಟ್ ನಡಿಯಲ್ಲಿ ಬಂಧಿತರಾಗಿದ್ದ ಮಹಿಳಾ ಸ್ಪರ್ಧಿಗಳು ಮತ್ತು ಕಾರ್ಯಕ್ರಮ ಆಯೋಜಕರ ವಿಚಾರಣೆ ನಡೆಸಿ, ರಾಜ್ಯ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಈ ಸಂಬಂಧ ರಾಮನಗರ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಪತ್ರ ಬರೆದು, ತನಿಖೆ ನಡೆಸಿ ವರದಿ ಸಲ್ಲಿಸಲು ಸೂಚಿಸಿದ್ದರು.
ರಾಜ್ಯ ಮಹಿಳಾ ಆಯೋಗಕ್ಕೆ ಸಾಮಾಜಿಕ ಕಾರ್ಯಕರ್ತೆ ಎಂ.ನಾಗಮಣಿ, ಅಡ್ವೊಕೇಟ್ ರಕ್ಷಿತಾ ಸಿಂಗ್ ಎರಡು ಪ್ರತ್ಯೇಕ ದೂರು ಸಲ್ಲಿಸಿದ್ದರು.
ನಾಗಮಣಿಯವರ ದೂರಿನಲ್ಲಿ ಏನಿದೆ? ದೂರಿನ ಪೂರ್ಣಪಾಠ ಇಲ್ಲಿದೆ:
ಕಲರ್ಸ್ ಟಿವಿ ನಡೆಸುತ್ತಿರುವ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದ್ದು, ವಿಶೇಷವಾಗಿ ಮಹಿಳಾ ಹಕ್ಕುಗಳ ದಮನವಾಗುತ್ತಿದೆ. ತಾವು ದಯಮಾಡಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕೆಂದು ಈ ದೂರು ಅರ್ಜಿಯನ್ನು ಸಲ್ಲಿಸುತ್ತಿದ್ದೇನೆ. ಈ ಕೆಳಕಂಡ ಅಂಶಗಳನ್ನು ತಮ್ಮ ಗಮನಕ್ಕೆ ತರಲು ಬಯಸುತ್ತೇನೆ.
- ದೂರುದಾರಳಾದ ನಾನು ಸಾಮಾಜಿಕ ಕಾರ್ಯಕರ್ತೆಯಾಗಿದ್ದು, ದಲಿತ ಸಂಘಟನೆಗಳೂ ಸೇರಿದಂತೆ ಹಲವಾರು ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮೇಲ್ಕಂಡ ವಿಳಾಸದಲ್ಲಿ ವಾಸವಾಗಿರುತ್ತೇನೆ.
- ಈ ಕೆಳಕಂಡವರ ಮೇಲೆ ನಾನು ದೂರು ಸಲ್ಲಿಸುತ್ತಿದ್ದೇನೆ.
A) Viacom Media Pvt Ltd
One Unity Centre, Tower-4
Senapati Bapat Marg, Prabhadevi,
Mumbai-400 013, Maharashtra, India
B) Business Head
Colors Kannada Telivision
Viacom Media Pvt Ltd
JP Techno Park, 3/2, 5th Floor, Millers Rd
Vasanth Nagar, Bengaluru, Karnataka 560052
C) Sri Sudeep
Anchor, Big Boss Show
Colors Kannada Telivision
Viacom Media Pvt Ltd
JP Techno Park, 3/2, 5th Floor, Millers Rd
Vasanth Nagar, Bengaluru, Karnataka 560052
- ಮೇಲ್ಕಂಡ ಸಂಸ್ಥೆ ಮತ್ತು ವ್ಯಕ್ತಿಗಳು ಸೇರಿ ಕರ್ನಾಟಕದಲ್ಲಿ ಜನಪ್ರಿಯವಾಗಿರುವ ಕಲರ್ಸ್ ಕನ್ನಡ ಎಂಬ ಮನರಂಜನಾ ಚಾನಲ್ನಲ್ಲಿ ಬಿಗ್ ಬಾಸ್ ಎಂಬ ಕಾರ್ಯಕ್ರಮ ನಡೆಸುತ್ತಿದ್ದು, ಈ ಚಾನಲ್ ಮೊದಲನೆಯವರ ಒಡೆತನಕ್ಕೆ ಸೇರಿರುತ್ತದೆ. ಎರಡನೆಯವರು ಚಾನಲ್ ಮುಖ್ಯಸ್ಥರಾಗಿದ್ದು ಬಿಗ್ ಬಾಸ್ ರಿಯಾಲಿಟಿ ಶೋ ನಡೆಸುತ್ತಿದ್ದಾರೆ. ಮೂರನೆಯವರು ಕನ್ನಡದ ಜನಪ್ರಿಯ ಚಿತ್ರನಟರಾಗಿದ್ದು, ಬಿಗ್ ಬಾಸ್ ರಿಯಾಲಿಟಿ ಶೋನ ನಿರೂಪಕರಾಗಿರುತ್ತಾರೆ.
- ಮೇಲ್ಕಂಡ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಎಂಬ ಹೆಸರಿನ ರಿಯಾಲಿಟಿ ಶೋನ ಹನ್ನೊಂದನೇ ಆವೃತ್ತಿ ದಿನಾಂಕ 29-9-2024ರಿಂದ ಆರಂಭವಾಗಿರುತ್ತದೆ. ಬಿಗ್ ಬಾಸ್ ಶೋನಲ್ಲಿ ಮನರಂಜನಾ ಕ್ಷೇತ್ರದಲ್ಲಿ ಮತ್ತು ಇತರ ಕ್ಷೇತ್ರಗಳಲ್ಲಿ ಹೆಸರು ಮಾಡಿದ ವ್ಯಕ್ತಿಗಳನ್ನು ಒಂದು ಮನೆಯಲ್ಲಿ ಕೂಡಿಹಾಕಿ ಆಡಿಸುವ ಸೈಕಾಲಾಜಿಕಲ್ ಗೇಮ್ ಶೋ ಆಗಿದೆ. ಬಿಗ್ ಬಾಸ್ ನಲ್ಲಿ ಹಲವು ರೀತಿಯ ಮಾನಸಿಕ, ದೈಹಿಕ ಟಾಸ್ಕ್ ಗಳನ್ನು ಕಂಟೆಸ್ಟೆಂಟ್ ಗಳಿಗೆ ನೀಡಲಾಗುತ್ತದೆ. ತಮ್ಮನ್ನು ತಾವು ಉಳಿಸಿಕೊಳ್ಳಲು ಇನ್ನೊಬ್ಬರ ಮೇಲೆ ಹಲವು ರೀತಿಯಲ್ಲಿ ಆಕ್ರಮಣ ಮಾಡುವ ಅನಿವಾರ್ಯತೆಯನ್ನು ಸೃಷ್ಟಿಸಲಾಗುತ್ತದೆ. ಹೀಗೆ ಪರಸ್ಪರ ಸೆಣೆಸುತ್ತ ನೂರು ದಿನಗಳ ಕಾಲ ಮನೆಯಲ್ಲಿ ಉಳಿದು ಅಂತಿಮವಾಗಿ ಗೆಲ್ಲುವ ಅಭ್ಯರ್ಥಿಗೆ 50 ಲಕ್ಷ ರುಪಾಯಿಗಳ ಬಹುಮಾನ ನೀಡಲಾಗುತ್ತದೆ. ಬಿಗ್ ಬಾಸ್ ಶೋ ಪ್ರತಿದಿನ ರಾತ್ರಿ 9-30ರಿಂದ 11 ಗಂಟೆಯವರೆಗೆ ಪ್ರಸಾರವಾಗುತ್ತದೆ. ಕಲರ್ಸ್ ಕನ್ನಡ ಮತ್ತು ಅದರ ಸೋದರಿ ಚಾನಲ್ ಕಲರ್ಸ್ ಸೂಪರ್ ನಲ್ಲಿ ಈ ಶೋ ಹಲವಾರು ಬಾರಿ ಮರುಪ್ರಸಾರಗೊಳ್ಳುತ್ತದೆ. ಈ ಕಾರ್ಯಕ್ರಮವನ್ನು ಕರ್ನಾಟಕ ಮಾತ್ರವಲ್ಲದೆ, ದೇಶದ-ಹೊರದೇಶಗಳ ಲಕ್ಷಾಂತರ ಕನ್ನಡಿಗರು ವೀಕ್ಷಿಸುತ್ತಾರೆ.
- ಈ ಬಾರಿಯ ಬಿಗ್ ಬಾಸ್ ಕಾರ್ಯಕ್ರಮದ ಆರಂಭದಲ್ಲಿಯೇ ಸ್ವರ್ಗ ಮತ್ತು ನರಕ ಎಂಬ ಎರಡು ಮನೆಗಳನ್ನು ಸೃಷ್ಟಿಸಲಾಗಿತ್ತು. ಒಟ್ಟು ಹದಿನೇಳು ಸ್ಪರ್ಧಿಗಳ ಪೈಕಿ 10 ಮಂದಿಯನ್ನು ಸ್ವರ್ಗಕ್ಕೂ, 7 ಮಂದಿಯನ್ನು ನರಕದಲ್ಲೂ ಇರಿಸಲಾಗಿದೆ. ಈ ಪೈಕಿ ಹಲವರು ಮಹಿಳೆಯರೂ ಇದ್ದಾರೆ. ಸ್ವರ್ಗ ನಿವಾಸಿಗಳಿಗೆ ಉತ್ತಮ ಊಟ, ಮಲಗಲು ಮಂಚ ಸೇರಿದಂತೆ ಐಶಾರಾಮಿ ಸೌಲಭ್ಯಗಳನ್ನು ಒದಗಿಸಲಾಗಿದೆ. ನರಕ ನಿವಾಸಿಗಳನ್ನು ಜೈಲಿನ ಖೈದಿಗಳ ಹಾಗೆ ಒಂದು ಬ್ಯಾರಾಕ್ ನಲ್ಲಿ ಬಂಧಿ ಮಾಡಿ ಇಡಲಾಗಿದೆ. ಅವರಿಗೆ ಶೋ ಆರಂಭಗೊಂಡ ದಿನದಿಂದ ಕೇವಲ ಗಂಜಿ ಊಟ ನೀಡಲಾಗುತ್ತಿದೆ. ಅಷ್ಟೇ ಅಲ್ಲ, ಅವರಿಗೆ ಪ್ರತ್ಯೇಕ ಶೌಚಾಲಯದ ಅವಕಾಶವೂ ಇಲ್ಲ. ಸ್ವರ್ಗ ನಿವಾಸಿಗಳನ್ನು ವಿನಂತಿಸಿ ಅವರು ಬೀಗ ತೆಗೆದರಷ್ಟೇ ಅವರು ಶೌಚಾಲಯಕ್ಕೆ ಹೋಗಲು ಸಾಧ್ಯ.
- ದಿನಾಂಕ: 2-10-2024ರಂದು ಪ್ರಸಾರವಾದ ಕಾರ್ಯಕ್ರಮದಲ್ಲಿ ನರಕವಾಸಿ ಸ್ಪರ್ಧಿಗಳು ತಮಗೆ ಬಂದಾಗಿಂದಲೂ ಕೇವಲ ಗಂಜಿ ಊಟ ಕೊಡಲಾಗುತ್ತಿದೆ ಎಂಬುದನ್ನು ಸ್ಪಷ್ಟವಾಗಿ ಹೇಳುತ್ತಾರೆ. ನರಕವಾಸಿಗಳಿಗೆ ಶೌಚಕ್ಕೆ ಅವಸರವಾದಾಗ ಸ್ವರ್ಗವಾಸಿ ಸ್ಪರ್ಧಿಗಳು ಸ್ವಲ್ಪ ತಡೆದುಕೊಳ್ಳಿ ಎಂದು ಹೇಳುವುದು, ಇದಕ್ಕೆ ನರಕವಾಸಿ ಸ್ಪರ್ಧಿಗಳು ಪ್ರತಿಭಟಿಸುವುದನ್ನು ಕೂಡ ಪ್ರಸಾರ ಮಾಡಲಾಗಿದೆ.
- ಬಹುಮಾನ ಮತ್ತು ಹಣದ ಆಮಿಷ ಒಡ್ಡಿ ಮಹಿಳೆಯರೂ ಸೇರಿದಂತೆ ಒಟ್ಟು 17 ಸ್ಪರ್ಧಿಗಳನ್ನು ಬಿಡದಿ ಸಮೀಪದ ನಿರ್ಜನ ಪ್ರದೇಶದಲ್ಲಿ ನಿರ್ಮಿಸಲಾಗಿರುವ ಮನೆಯೊಂದರಲ್ಲಿ ಕೂಡಿಹಾಕಲಾಗಿದೆ. ಟಾಸ್ಕ್ ಗಳ ಹೆಸರಲ್ಲಿ ಅವರಿಗೆ ದೈಹಿಕ, ಮಾನಸಿಕ ಹಿಂಸೆಯನ್ನು ನೀಡಲಾಗುತ್ತಿದೆ. ಹಣ, ಬಹುಮಾನದ ಆಸೆಗೆ ಕಾಂಟ್ರಾಕ್ಟ್ ಗೆ ಸಹಿ ಮಾಡಿದ ಸ್ಪರ್ಧಿಗಳು ಅಲ್ಲಿ ನಡೆಯುವ ಶೋಷಣೆಯನ್ನು ಹೊರಗೆ ಹೇಳದಂತೆ ಬಾಯಿಮುಚ್ಚಿಸಲಾಗಿದೆ.
- ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಸ್ಪರ್ಧಿಗಳನ್ನು ಅಕ್ರಮವಾಗಿ ಬಂಧಿಸಿಟ್ಟು, ಅವರಿಗೆ ಸರಿಯಾದ ಪೌಷ್ಠಿಕ ಆಹಾರವನ್ನೂ ನೀಡದೆ, ಅವರ ದೇಹಬಾಧೆ ತೀರಿಸಿಕೊಳ್ಳಲೂ ಇತರರ ಅನುಮತಿ ಪಡೆಯುವಂಥ ಪರಿಸ್ಥಿತಿ ನಿರ್ಮಿಸಿರುವುದು ಅತ್ಯಂತ ಸ್ಪಷ್ಟವಾಗಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ. ಈ ಶೋಷಣೆಗೆ ಒಂದು ವೇಳೆ ಆಮಿಷಕ್ಕೆ ಒಳಗಾಗಿ ಸ್ಪರ್ಧಿಗಳು ಒಪ್ಪಿಗೆ ನೀಡಿದ್ದರೂ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತದೆ. ಈ ಪೈಕಿ ಮಹಿಳೆಯರೂ ಇದ್ದು ಅವರೂ ಸಹ ಶೌಚಕ್ಕೆ ಹೋಗಬೇಕೆಂದರೆ ಬೇರೆಯರಿಗೆ (ಸ್ವರ್ಗನಿವಾಸಿಗಳಿಗೆ) ಹೇಳಿ ಅವರ ಅನುಮತಿ ಪಡೆದು, ನಂತರ ಬೀಗ ತೆಗೆದರಷ್ಟೇ ಶೌಚಕ್ಕೆ ಹೋಗಲು ಸಾಧ್ಯವಾಗುವಂಥ ಸ್ಥಿತಿ ನಿರ್ಮಿಸಲಾಗಿದೆ. ಅಷ್ಟೇ ಅಲ್ಲದೆ ಶೌಚಕ್ಕೆ ಹೋಗುವ ಮಹಿಳೆಯರನ್ನು ಪುರುಷ ಅಭ್ಯರ್ಥಿಗಳು ಕರೆದುಕೊಂಡು ಕಾವಲು ಕಾಯುವಂತೆ ಮಾಡಲಾಗುತ್ತಿದೆ. ಇದು ಮಹಿಳೆಯರ ಖಾಸಗಿತನಕ್ಕೆ ಎಸಗಿದ ಧಕ್ಕೆ, ಅಪಮಾನ ಮಾತ್ರವಲ್ಲದೆ ಅವರ ಅವರ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿರುತ್ತದೆ.
- ಬಿಗ್ ಬಾಸ್ ಶೋ ಮಾನವಹಕ್ಕುಗಳ ಮೂಲಭೂತ ಹಕ್ಕುಗಳನ್ನು, ವಿಶೇಷವಾಗಿ ಮಹಿಳೆಯರ ಘನತೆಯಿಂದ ಬದುಕುವ ಹಕ್ಕನ್ನು ಕಸಿದುಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಯಾಕೆಂದರೆ ಮಹಿಳಾ ಸ್ಪರ್ಧಿಯೊಬ್ಬರು ಒಬ್ಬರು ಹೇಳುವ ಪ್ರಕಾರ ಅವರಿಗೆ ಸತತ ಮೂರು ದಿನಗಳಿಂದ ಕೇವಲ ಗಂಜಿ ಊಟವನ್ನು ಕೊಡಲಾಗಿದೆ. ಅವರು ತಮ್ಮ ಊಟವನ್ನು ಪಡೆದುಕೊಳ್ಳದಂತೆ ಅವರನ್ನು ಕೂಡಿಹಾಕಿ ಬೀಗ ಜಡಿಯಲಾಗಿದೆ. ಅಷ್ಟೇ ಅಲ್ಲದೆ ಅವರು ಶೌಚಕ್ಕೆ ಹೋಗಲೂ ಬೇರೆಯವರನ್ನು ಬೇಡುವಂಥ ಸ್ಥಿತಿ ನಿರ್ಮಿಸಲಾಗಿದೆ. ಈ ರೀತಿಯ ಟಾರ್ಚರ್ ಭಾರತದ ಜೈಲುಗಳಲ್ಲೂ ಸಹ ಇರಲು ಸಾಧ್ಯವಿಲ್ಲ. ಭಾರತದ ಜೈಲುಗಳಲ್ಲಿ ಶಿಕ್ಷೆಗೆ ಒಳಪಟ್ಟ ಖೈದಿಗಳಿಗೆ, ವಿಚಾರಣಾಧೀನ ಖೈದಿಗಳಿಗೆ ಕೊಡಬೇಕಾದ ಆಹಾರದ ಕುರಿತು ಕಟ್ಟುನಿಟ್ಟಿನ ನಿಯಮಗಳಿವೆ. ಎಲ್ಲ ಖೈದಿಗಳಿಗೆ ಒಬ್ಬ ಮನುಷ್ಯನಿಗೆ ಬೇಕಾದ ಪೌಷ್ಠಿಕಾಂಶಗಳನ್ನು ಉಳ್ಳ ಆಹಾರವನ್ನು ಗ್ರಾಂಗಳ ಲೆಕ್ಕದಲ್ಲಿ ಕೊಡಲಾಗುತ್ತದೆ. ಜೈಲಿನ ಅಧಿಕಾರಿಗಳು ಇದನ್ನು ಉಲ್ಲಂಘಿಸುವಂತಿಲ್ಲ. ಮಾನವ ಹಕ್ಕುಗಳ ಆಯೋಗವು ಆಗಾಗ ಜೈಲುಗಳಿಗೆ ಭೇಟಿ ನೀಡಿ ಖೈದಿಗಳ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆಯೇ ಎಂದು ಪರಿಶೀಲಿಸುತ್ತದೆ. ಹೀಗಿರುವಾಗ ಬಿಗ್ ಬಾಸ್ ಶೋನಲ್ಲಿ ನಡೆದಿರುವ ಸಾರಾಸಗಟಾಗಿ ಮಹಿಳೆಯರ ಹಕ್ಕುಗಳ ಉಲ್ಲಂಘನೆಯೇ ಆಗುತ್ತದೆ.
- ಬಿಗ್ ಬಾಸ್ ನಲ್ಲಿ ಹೀಗೆ ಜನರನ್ನು ಕೂಡಿಡುವುದೇ ಒಂದು ಅಪರಾಧವಾಗುತ್ತವೆ. ಯಾಕೆಂದರೆ ಯಾವ ಮನುಷ್ಯನನ್ನೂ ಅವನ ಒಪ್ಪಿಗೆ ಇರಲಿ, ಇಲ್ಲದೇ ಇರಲಿ ಕೂಡಿ ಹಾಕುವುದು ಅಪರಾಧವಾಗುತ್ತದೆ. ಅದರಲ್ಲೂ ಮಹಿಳೆಯರನ್ನು ಹೀಗೆ ಕೂಡಿ ಹಾಕುವುದು ಅಕ್ಷರಶಃ ಕ್ರೌರ್ಯವಾಗುತ್ತದೆ. ಬಿಗ್ ಬಾಸ್ ನಿರ್ಮಾಪಕರು ಮುಂದೆ ಕಾನೂನು ತೊಡಕು ಬಾರದೇ ಇರಲಿ ಎಂದು ಹಲವಾರು ನಿಬಂಧನೆಗಳು ಇರುವ ಕಾಗದಪತ್ರಗಳಿಗೆ ಸ್ಪರ್ಧಿಗಳ ಬಳಿ ಸಹಿ ಹಾಕಿಸಿಕೊಂಡಿರುತ್ತಾರೆ.
- ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಮೇಲ್ಕಂಡ ರೀತಿಯಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ಎಲ್ಲ ಅಮಾನವೀಯ ಚಿತ್ರ ಹಿಂಸೆ, ಕ್ರೌರ್ಯಗಳನ್ನು ದೃಶ್ಯ ಮಾಧ್ಯಮದ ಮೂಲಕ ಭಿತ್ತರಿಸುವುದೂ ಕೂಡ ಘೋರ ಅಪರಾಧವಾಗಿರುತ್ತದೆ. ಈ ಕಾರ್ಯಕ್ರಮವನ್ನು ಜಗತ್ತಿನಾದ್ಯಂತ ಜನರು ನೋಡುತ್ತಿರುವುದರಿಂದ ಅವರ ಮಾನಸಿಕತೆಯ ಮೇಲೂ ಗಂಭೀರ ಪರಿಣಾಮಗಳನ್ನು ಬೀರುತ್ತಿದೆ. ಈ ಕಾರ್ಯಕ್ರಮದ ಪ್ರೇರಣೆಯಿಂದ ಮಹಿಳೆಯರ ಮೇಲೆ ಇಂಥದ್ದೇ ಕ್ರೌರ್ಯ, ಹಿಂಸೆಗಳು ಸಮಾಜದಲ್ಲೂ ಘಟಿಸುವ ಎಲ್ಲ ಸಾಧ್ಯತೆಗಳೂ ಇರುತ್ತವೆ. ಈ ಕಾರಣದಿಂದ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸುವುದು ಬಹಳ ತುರ್ತು ಅಗತ್ಯವಾಗಿರುತ್ತದೆ.
ಈ ಎಲ್ಲ ಹಿನ್ನೆಲೆಗಳನ್ನು ಗಮನಿಸಿ, ತಾವು ದಯಮಾಡಿ ಕೂಡಲೇ ಈ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ, ಅಕ್ರಮವಾಗಿ ಬಂಧನಕ್ಕೆ ಒಳಗಾಗಿರುವ ಎಲ್ಲ ಮಹಿಳಾ ಸ್ಪರ್ಧಿಗಳನ್ನು ಹೊರಗೆ ತರಬೇಕೆಂದು ವಿನಂತಿಸುತ್ತೇನೆ. ಹಾಗೆಯೇ ಕಳೆದ ಐದು ದಿನಗಳಿಂದ ಶೂಟ್ ಮಾಡಲಾದ ಎಲ್ಲ ಫುಟೇಜ್ ಗಳನ್ನೂ, ಹಾರ್ಡ್ ಡಿಸ್ಕ್ ಗಳನ್ನೂ ವಶಪಡಿಸಿಕೊಂಡು ಸಾಕ್ಷ್ಯನಾಶವಾಗದಂತೆ ಕಾಪಾಡಬೇಕೆಂದು ವಿನಂತಿಸುತ್ತೇನೆ. ಅದೇ ರೀತಿ ಮೇಲೆ ಉಲ್ಲೇಖಿಸಿದ ಸಂಸ್ಥೆ ಮತ್ತು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಿ, ಸೂಕ್ತ ತನಿಖಾ ಏಜೆನ್ಸಿಗೆ ತನಿಖೆ ನಡೆಸಲು ಆದೇಶಿಸಬೇಕೆಂದು ವಿನಂತಿಸುತ್ತೇನೆ.
ವಂದನೆಗಳೊಂದಿಗೆ
ತಮ್ಮ ವಿಶ್ವಾಸಿ
(ಎಂ.ನಾಗಮಣಿ)